ಆತಿಥೇಯಕ್ಕೆ ಭಾರತದಲ್ಲಿಯೇ ಕೊಡಗು ಹೆಸರುವಾಸಿ. ಆತಿಥೇಯ ಸಂಸ್ಕøತಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೋಂಸ್ಟೇ ಮೂಲಕ ಪರಿಚಯಿಸಿದ ಖ್ಯಾತಿಯೂ ಈ ಕಾಫಿ ಜಿಲ್ಲೆಯದ್ದು, 20 ವರ್ಷಗಳಿಂದ ಕೊಡಗಿನ ಮೂಲೆಮೂಲೆಗಳಲ್ಲಿ ಪ್ರವಾಸಿಗರನ್ನು ಅತಿಥಿಗಳ ರೀತಿ ಸತ್ಕರಿಸುತ್ತಾ, ದಕ್ಷಿಣ ಭಾರತದಲ್ಲಿಯೇ ಅತ್ಯಧಿಕ ಹೋಂಸ್ಟೇಗಳಿಗೂ ಕೊಡಗು ಜಿಲ್ಲೆ ಕಾರಣವಾಗಿದೆ.

ಮನೆಗಳ ಹೆಚ್ಚುವರಿ ಕೋಣೆಗಳನ್ನೇ ಪ್ರವಾಸಿಗರಿಗೆ ನೀಡಿ, ತಮ್ಮ ಮನೆಯಲ್ಲಿಯೇ ಊಟ, ತಿಂಡಿ ತಯಾರಿಸಿ, ತಮ್ಮ ನೆಲದ ಸಂಸ್ಕøತಿ, ಪರಂಪರೆಯನ್ನು ಅತಿಥಿಗಳಿಗೆ ಪರಿಚಯಿಸುವ ಮೂಲಕ ಕೊಡಗಿನ ಬಗ್ಗೆ ದೇಶ-ವಿದೇಶಿಯರಿಗೆ ತಿಳುವಳಿಕೆ ಮೂಡಿಸುವ ಕಾರ್ಯ ಹೋಂಸ್ಟೇಗಳಿಂದಾಗಿದೆ.

ಕೊಡಗಿನ ಮುಖ್ಯ ಬೆಳೆಯಾಗಿದ್ದ ಕಾಫಿಗೆ ದರ ಕುಸಿತ ಕಂಡುಬಂದಾಗ ಅನೇಕ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಿದ್ದು ಇದೇ ಹೋಂಸ್ಟೇ ವಹಿವಾಟು. ಅಂತೆಯೇ ಮನೆಯಲ್ಲಿಯೇ ಅಡುಗೆ ತಯಾರಿಸುತ್ತಾ ಕಾಲಕಳೆಯುತ್ತಿದ್ದ ಕೊಡಗಿನ ನೂರಾರು ಮಹಿಳೆಯರಿಗೆ ಹೊಸ ಕೌಶಲ್ಯದ ಉದ್ಯಮದಂತೆ ಕಂಗೊಳಿಸಿದ್ದು ಇದೇ ಹೋಂಸ್ಟೇಗಳು.

ಮಹಿಳೆಯರ ಪಾಲಿಗೆ ಹೋಂಸ್ಟೇ ಉದ್ಯಮ ಸ್ವಾವಲಂಭಿ ಮತ್ತು ಸ್ವಾಭಿಮಾನಿ ಜೀವನಕ್ಕೆ ಅವಕಾಶ ನೀಡಿತ್ತು. ದೇಶದ ಪ್ರಧಾನಿ ಮೋದಿ ಈಗ ಆತ್ಮನಿರ್ಭರ್, ಸ್ವಾವಲಂಭಿ ಜೀವನಕ್ಕೆ ಕರೆಕೊಟ್ಟಿದ್ದಾರಲ್ಲ ಅಂಥ ಬದುಕನ್ನು ಕೊಡಗಿನ ಅನೇಕರು ಹೋಂಸ್ಟೇಗಳ ಮೂಲಕ ಹಲವಾರು ವರ್ಷಗಳ ಮೊದಲೇ ಕಂಡುಕೊಂಡಿದ್ದರು.

ಲಾಕ್ ಡೌನ್‍ನಿಂದಾಗಿ ಕೊಡಗಿನ ಸ್ವಾವಲಂಭಿ ಹೋಂಸ್ಟೇ ಉದ್ಯಮ ಮತ್ತಷ್ಟು ಸಂಕಷ್ಟಕ್ಕೊಳಗಾಗಿದೆ.

.........

ಎಲ್ಲವೂ ಸರಿಯಾಗುತ್ತಿದ್ದ ಕೊಡಗಿನ ಹೋಂಸ್ಟೇಗಳ ಪಾಲಿಗೆ ಸಿಡಿಲಿನಂತೆ ಬಂದೆರಗಿದ್ದು 2018 ರ ಮಹಾಮಳೆ, ಭೂಕುಸಿತದ ದುರಂತ. ಆ ವರ್ಷ ಸುಮಾರು 5 ತಿಂಗಳು ಹೋಂಸ್ಟೇಗಳು ಬಾಗಿಲು ಮುಚ್ಚಿದ್ದವು. ನಂತರ ಕಳೆದ ವರ್ಷದ ಪ್ರಾರಂಭದಲ್ಲಿ ಚೇತರಿಕೆಯಾಗುತ್ತಿದ್ದ ಹೋಂಸ್ಟೇಗಳ ಪಾಲಿಗೆ ಮತ್ತೆ 2019 ರಲ್ಲಿ ಪ್ರವಾಹದ ದುರಂತ ಸುನಾಮಿಯಂತೆ ಅಪ್ಪಳಿಸಿತು.

ಕೊಡಗು ಜಿಲ್ಲೆ ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿದೆ, ಕೊಡಗು ಸಂಪೂರ್ಣ ನಾಶವಾಗಿದೆ ಎಂಬ ಕೆಲವು ಮಾಧ್ಯಮ ವರದಿಗಳೂ ಪ್ರವಾಸಿಗರನ್ನು ಹೋಂಸ್ಟೇಗಳಿಗೆ ಬಾರದಂತೆ ಮಾಡಿಬಿಟ್ಟವು.

ಮತ್ತೆ ಕಳೆದ ನವಂಬರ್‍ನಿಂದ ಈ ವರ್ಷದ ಫೆಬ್ರವರಿಯವರೆಗೆ ಹೋಂಸ್ಟೇ ಮಾಲೀಕರ ಮುಖದಲ್ಲಿ ಮಂದಹಾಸ ಮಿನುಗುವಂತೆ ವಹಿವಾಟು ಸುಧಾರಿಸುತ್ತಿತ್ತು, ಆಗಲೇ ಕೊರೊನಾ ಮಹಾಮಾರಿ ವಕ್ಕರಿಸಿಬಿಟ್ಟಿತು. ಹೋಂಸ್ಟೇಗಳು ಬಾಗಿಲು ಮುಚ್ಚಿದವು.

ನಿಜಕ್ಕೂ, ಹೋಂಸ್ಟೇಗಳ ಪಾಲಿಗೆ ಇದು ಪರೀಕ್ಷೆಯ ಕಾಲ. ಮೂರು ವರ್ಷಗಳಿಂದ ಹೋಂಸ್ಟೇಗಳ ಮಾಲೀಕರು ಆರ್ಥಿಕವಾಗಿ ಹೊಡೆತ ತಿಂದಿದ್ದಾರೆ. ಏಪ್ರಿಲ್-ಮೇ ತಿಂಗಳು ಹೋಂಸ್ಟೇ ಪಾಲಿಗೆ ಪ್ರವಾಸಿಗರು ಬಂದು ವರ್ಷದ ಇತರ ದಿನಗಳಲ್ಲಿ ಆದ ನಷ್ಟವನ್ನು ಸರಿದೂಗಿಸಿಕೊಳ್ಳುವ ಸಮಯ. ಆದರೆ ಈ ವರ್ಷ ಇದೇ ತಿಂಗಳಿನಲ್ಲಿ ಕೊರೊನಾ ಸಂಕಷ್ಟದಿಂದಾಗಿ ಹೋಂಸ್ಟೇಗಳೂ ಮುಚ್ಚುವಂತಾಗಿದೆ. ಮುಂದೆ ಮಳೆಗಾಲದಲ್ಲಿ 3-4 ತಿಂಗಳೂ ಬಹುತೇಕ ಹೋಂಸ್ಟೇಗಳು ತೆರೆಯುವುದು ಸಂಶಯವೇ ಎಂದು ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು.

ಕಳೆದೆರಡು ವರ್ಷಗಳಲ್ಲಿ ಉಂಟಾದ ನಷ್ಟದಿಂದಾಗಿ ಹೋಂಸ್ಟೇ ಮಾಲೀಕರು ಸಾಲ ಮಾಡಿ, ಈ ವರ್ಷ ಹೋಂಸ್ಟೇಗಳ ನಿರ್ವಹಣೆಗೆ ಮುಂದಾಗಿದ್ದರು. ಆದರೆ ಈಗ ವಹಿವಾಟೇ ಇಲ್ಲದೆ ಕಂಗೆಟ್ಟಿದ್ದಾರೆ. ಸಾಲಕ್ಕೆ ಬಡ್ಡಿ ಕಟ್ಟಲೂ ಆಗದ ಸ್ಥಿತಿ ಹಲವರಿಗಿದೆ. ಹೋಂಸ್ಟೇಗಳಲ್ಲಿನ ಸಿಬ್ಬಂದಿಗಳೂ ಕೆಲಸ ಬಿಟ್ಟು ದೂರದಲ್ಲಿರುವ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಹೋಂಸ್ಟೇಗಳಿಗೆ ಪರಿಣಿತ ಸಿಬ್ಬಂದಿಗಳು ಸಿಗುವುದೇ ಕಷ್ಟಸಾಧ್ಯವಾದೀತು. ಸಿಕ್ಕಿದರೂ ದುಪ್ಪಟ್ಟು ವೇತನ ನೀಡಿ ಹೋಂಸ್ಟೇ ನಿರ್ವಹಿಸಲೇಬೇಕಾದ ಅನಿವಾರ್ಯತೆ ಬರಬಹುದು. ಕಳೆದ ವರ್ಷ ಪ್ರಕೃತಿ ವಿಕೋಪದಿಂದಾಗಿ ನಷ್ಟ ಅನುಭವಿಸಿದ್ದ ಅನೇಕರು ಈ ವರ್ಷವಾದರೂ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕೆಂದು ಹೋಂಸ್ಟೇಗಳನ್ನು ಅತ್ಯಾಧುನಿಕವಾಗಿ ಮಾರ್ಪಡಿಸಿದ್ದರು. ಆ ವೆಚ್ಚವೆಲ್ಲಾ ಸದ್ಯಕ್ಕೆ ವ್ಯರ್ಥವಾಗಿದೆ ಎಂದು ಅನಂತಶಯನ ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ಕೊಡಗಿನಲ್ಲಿ ಸುಮಾರು 2000 ಹೋಂಸ್ಟೇಗಳಿದ್ದರೂ ಈ ಪೈಕಿ 700 ಮಾತ್ರ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿದೆ. ಹೋಂಸ್ಟೇಗಳಿಂದಾಗಿ ಸರ್ಕಾರಕ್ಕೆ ತೆರಿಗೆ, ವಿದ್ಯುತ್ ಶುಲ್ಕ, ಸೇವಾ ಶುಲ್ಕ ಸೇರಿದಂತೆ ಅನೇಕ ರೀತಿಯಲ್ಲಿ ಆದಾಯ ಮೂಲಗಳಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‍ನಲ್ಲಿ ಹೋಂಸ್ಟೇಗಳನ್ನು ನೆರವಿಗಾಗಿ ಪರಿಗಣಿಸಲೇ ಇಲ್ಲ ಎಂದು ವಿಷಾದಿಸಿದ ಅನಂತಶಯನ, ಅನಧಿಕೃತ ಹೋಂಸ್ಟೇಗಳಿಗೆ ಇನ್ನಾದರೂ ಕಠಿಣ ಕಡಿವಾಣ ಹಾಕಲೇಬೇಕು. ಕನಿಷ್ಟ 2 ವರ್ಷದವರೆಗೆ ಹೋಂಸ್ಟೇಗಳಿಗೆ ಯಾವುದೇ ತೆರಿಗೆ ವಿಧಿಸಬಾರದು. ನಷ್ಟ ಪರಿಹಾರ ಮಾಡಬೇಕೆಂಬ ಒತ್ತಾಯವನ್ನು ಸರ್ಕಾರದ ಬಳಿ ಮಾಡುತ್ತಿರುವುದಾಗಿ ಹೇಳಿದರು.

ಹೋಂಸ್ಟೇಗಳು ತೆರೆದರೂ ಇಲ್ಲಿಗೆ ಬರುವ ಪ್ರವಾಸಿಗರು ಕೊರೊನಾ ಸೋಂಕು ಹೊಂದಿರದಂತೆ ಕಟ್ಟೆಚ್ಚರ ವಹಿಸಲೇಬೇಕಾಗಿದೆ. ನಿರ್ವಹಣೆ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆಯೂ ಇದೆ. ಮುಂದಿನ ದಿನಗಳಲ್ಲಿ ಹೋಂಸ್ಟೇಗಳಿಗೆ ಪ್ರವಾಸಿಗರು ನಿಧಾನವಾಗಿ ಬರುತ್ತಾರೆ. ಆದರೆ, ಈಗಿನ ದರದಲ್ಲಿಯೇ ಹೋಂಸ್ಟೇಗಳನ್ನು ನೀಡಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಅನಂತ್ ಮುಂದಿಟ್ಟರು.

ಖಂಡಿತಾ ಹೋಂಸ್ಟೇ ಉದ್ಯಮ ಚೇತರಿಸಿಕೊಳ್ಳುತ್ತದೆ. ಆದರೆ ಕನಿಷ್ಟ 10 ತಿಂಗಳಾದರೂ ಬೇಕು. ತಾಳ್ಮೆ ಮತ್ತು ಆರ್ಥಿಕವಾಗಿ ಪ್ರಬಲ ಇರುವವರು ಹೋಂಸ್ಟೇ ಉದ್ಯಮದಲ್ಲಿ ಮುಂದುವರೆಯಬಹುದಷ್ಟೇ. ಬಾಡಿಗೆ ಮನೆಗಳಲ್ಲಿ ಹೋಂಸ್ಟೇ ನಡೆಸುತ್ತಿರುವ ಅನಧಿಕೃತ ವಹಿವಾಟಿಗೆ ಈಗ ಸ್ವಯಂ ತಡೆ ಬೀಳಲಿದೆ. ಬಾಡಿಗೆ ಕಟ್ಟಿ ಹೋಂಸ್ಟೇ ನಡೆಸಲು ಅಸಾಧ್ಯ. ಅಂತೆಯೇ ಓಯೋ ಸಂಸ್ಥೆಗೆ ಹೋಂಸ್ಟೇಗಳನ್ನು ನೀಡಿದ್ದ ಬಹುತೇಕರು ಅವರೊಂದಿಗೆ ಒಡಂಬಡಿಕೆ ಕಡಿದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಹೋಂಸ್ಟೇ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ಪ್ರಕಾರ, ವಿದೇಶಗಳಿಗೆ ಪ್ರವಾಸ ಹೋಗುವುದಕ್ಕೆ ಕೆಲವು ವರ್ಷಗಳು ಅಸಾಧ್ಯ. ಯಾರೂ ವಿದೇಶಗಳಿಗೆ ಹೋಗಲಿಕ್ಕಿಲ್ಲ. ಹೀಗಾಗಿ ಕೊಡಗಿನಂಥ ನಿಸರ್ಗದ ಮಡಿಲಿನ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯೇ ಕೊಡಗಿನ ಹೋಂಸ್ಟೇ ಪಾಲಿಗೆ ಆಶಾದಾಯಕ ಎಂದೂ ನವೀನ್ ವಿಶ್ವಾಸದಿಂದ ನುಡಿದರು. ಕೊಡಗಿನ ಆದಾಯ, ವರಮಾನದ ಲೆಕ್ಕಾಚಾರಕ್ಕೆ ಬಂದಾಗ ಸರ್ಕಾರಕ್ಕೆ ಹೋಂಸ್ಟೇಗಳು ತೆರಿಗೆ ಸಂಗ್ರಹಕ್ಕೆ ಬೇಕೇಬೇಕು. ಆದರೆ ಹೋಂಸ್ಟೇಗಳ ಸಂಕಷ್ಟದತ್ತ ಈವರೆಗೂ ಸರ್ಕಾರ ಗಮನ ಹರಿಸಿಲ್ಲ ಎಂಬ ನೋವು ಹೋಂಸ್ಟೇ ಮಾಲೀಕರದ್ದಾಗಿದೆ.

ನಗರ, ಗ್ರಾಮೀಣ ಪ್ರದೇಶಗಳಲ್ಲಿ, ಕಾಫಿ ತೋಟಗಳ ನಡುವಿನ ಸುಂದರ ಮನೆಗಳಲ್ಲಿ ನಗುಮುಖದಿಂದ ತಮ್ಮೆಲ್ಲಾ ನೋವುಗಳನ್ನು ಮರೆತು ಹೋಂಸ್ಟೇಗಳ ನಿರ್ವಾಹಕರು ಅತಿಥಿ ಸತ್ಕಾರ ನೀಡಲು ಮುಂದಿನ ದಿನಗಳಲ್ಲಿ ಸಜ್ಜಾಗಲಿದ್ದಾರೆ. ಕೊರೊನಾ ಸೋಂಕಿನ ಭೀತಿಯ ನಡುವೇ ಹೋಂಸ್ಟೇಗಳು ಅತಿಥಿಗಳಿಗೆ ಬಾಗಿಲು ತೆರೆಯಬಹುದು. ಹೀಗಿದ್ದರೂ...

ಕೊಡಗಿನ ಹೋಂಸ್ಟೇಗಳ ವೈಭವದ ದಿನಗಳು ಮತ್ತೆ ಬರುತ್ತವೆಯೇ? ಬರಲೇಬೇಕು ಎಂಬುದು ಕೊಡಗು ಪ್ರವಾಸೋದ್ಯಮದ ಆಶಯ.

ಕೊನೇ ಹನಿ

ಲಾಕ್‍ಡೌನ್ ಸಂದರ್ಭ ದೇಶದಾದ್ಯಂತ ಸ್ಟೇ ಹೋಂ ಎಂಬ ಆದೇಶ ಜಾರಿಯಲ್ಲಿತ್ತು. ಪ್ರತೀಯೋರ್ವರಿಗೂ ಮನೆಯೇ ಸುಖದ ಜಗತ್ತಾಗಿತ್ತು. ಅವರವರ ಹೋಂ ಅವರವರ ಸ್ಟೇಗೆ ನೆಲೆಯಾಗಿತ್ತು. ಸ್ಟೇ ಹೋಂನ ಭಾವನೆ ಯಿಂದ ಹೋಂಸ್ಟೇಗಳಿಗೆ ಪ್ರವಾಸ ತೆರಳುವ ಭಾವನೆ ಮತ್ತೆ ಮೂಡಲು ತಿಂಗಳುಗಳೇ ಬೇಕಾದೀತು. ಈ ಉದ್ಯಮದಲ್ಲಿ ತಾಳಿದವನು ಬಾಳಿಯಾನು. ಹೋಂಸ್ಟೇ ಉದ್ಯಮಕ್ಕೆ ಕವಿದಿರುವ ಕಾರ್ಮೋಡ ಸರಿಯಬೇಕು. ಮೋಡ ಮರೆಯಾಗಿ ಸೂರ್ಯಕಿರಣಗಳು ಮತ್ತೆ ಕಂಗೊಳಿಸುವುದು ವಿಧಿ ನಿಯಮ.