ಮಡಿಕೇರಿ, ಮೇ 25: ಜಿಲ್ಲೆಯ ವಿವಿಧೆಡೆ ಇಂದು ಕೂಡ ರಂಜಾನ್ ಅನ್ನು ಆಚರಿಸಲಾಯಿತು. ಇಸ್ಲಾಂ ಧರ್ಮದ ಹನಫಿ ಸಮುದಾಯ, ಅಹ್ಮದೀಯ ಜಮಾಯತ್ ಹಾಗೂ ಇತರರು ಮನೆಗಳಲ್ಲಿಯೇ ಅಲ್ಲಾಹುನನ್ನು ಪ್ರಾರ್ಥಿಸಿದರು. ಮಡಿಕೇರಿ ಅಹಮದೀಯ ಮುಸ್ಲಿಂ ಜಮಾಯತ್‍ನ ಅಧ್ಯಕ್ಷ ಎಂ.ಬಿ. ಝಹೀರ್ ಜಮಾಯತಿನ ಎಲ್ಲ ಸದಸ್ಯರುಗಳಿಗೆ ಕಳುಹಿಸಿದ ಶುಭಾಶಯದಲ್ಲಿ
ಅಲ್ಲಾಹನು ಕೊರೊನಾ ರೋಗದಿಂದ ಜನತೆಯನ್ನು ಸಂರಕ್ಷಿಸಲು ಪ್ರತ್ಯೇಕ ಪ್ರಾರ್ಥನೆ ಮಾಡುವಂತೆ ಮನವಿ ಮಾಡಿದರು. ಮಡಿಕೇರಿ ಜಾಮಿಯಾ ಮಸೀದಿಯ ಅಧ್ಯಕ್ಷ ಮಹಮದ್ ಇಮ್ರಾನ್ ಅವರು ವಕ್ಫ್‍ಬೋರ್ಡ್ ಸೂಚನೆಯಂತೆ ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತೆ ಕೋರಿದರು. ಹಿಂದಿನ ಅಧ್ಯಕ್ಷ ನಜೀರ್ ಕುಟುಂಬ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿತು. ಹಲವು ಮಂದಿ ಖಬರಸ್ಥಾನಕ್ಕೆ ತೆರಳಿ ಕುಟುಂಬದ ಹಿರಿಯರಿಗೆ ಗೌರವ ಸಲ್ಲಿಸಿದರು.
(ಮೊದಲ ಪುಟದಿಂದ)
ಸೋಮವಾರಪೇಟೆ
ಹನಫಿ ಮುಸ್ಲಿಂ ಸಮುದಾಯ ದಿಂದ ಇಂದು ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಕೊರೊನಾ ಆತಂಕದ ಹಿನ್ನೆಲೆ ಸಂಭ್ರಮದ ಹಬ್ಬಾಚರಣೆಗೆ ಕಡಿವಾಣ ಇರುವದರಿಂದ ಹನಫಿ ಮುಸ್ಲಿಂ ಸಮುದಾಯದವರು ತಮ್ಮ ಮನೆಗಳಲ್ಲಿ ಹಬ್ಬಾಚರಣೆ ಮಾಡಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಬೆಳಗ್ಗೆ ಮನೆಗಳಲ್ಲಿ ಮನೆಮಂದಿಯೊಂದಿಗೆ ರಂಜಾನ್ ಪ್ರಾರ್ಥನೆ ನೆರವೇರಿಸಿದರು. ಸೋಮವಾರಪೇಟೆಯ ಹನಫಿ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದರು. ಇದರೊಂದಿಗೆ ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆಯಲ್ಲಿರುವ ಹನಫಿ ಮುಸ್ಲಿಮರು ಹಬ್ಬಾಚರಣೆ ಮಾಡಿದರು.
ನಿನ್ನೆ ದಿನ ಶಾಫಿ ಮುಸ್ಲಿಮರು ರಂಜಾನ್ ಆಚರಿಸಿದ್ದರೆ, ಇಂದು ಹನಫಿ ಪಂಗಡದವರು ಉಪವಾಸ ವ್ರತಾಚರಣೆಯನ್ನು ಪೂರ್ಣಗೊಳಿಸಿ ಹಬ್ಬವನ್ನು ಸರಳವಾಗಿ ಆಚರಿಸಿದರು.
ಕುಶಾಲನಗರ
ರಂಜಾನ್ ಹಬ್ಬದ ಅಂಗವಾಗಿ ಕುಶಾಲನಗರದ ವಿವಿಧೆಡೆ ಮುಸ್ಲಿಂ ಸಮುದಾಯ ಬಾಂಧವರು ಮನೆಮನೆಯಲ್ಲೇ ಹಬ್ಬದ ಆಚರಣೆ ನಡೆಸಿದರು. ಕುಶಾಲನಗರದ ಜಾಮಿಯ ಮಸೀದಿ, ದಂಡಿನಪೇಟೆ, ರಸೂಲ್ ಬಡಾವಣೆ ಮುಂತಾದ ಕಡೆ ತಮ್ಮ ನೆಂಟರಿಷ್ಟರೊಂದಿಗೆ ಹಬ್ಬ ಆಚರಿಸಿ ಪ್ರಾರ್ಥನೆ ಸಲ್ಲಿಸಿದರು.
ಸ್ಥಳೀಯ ಕಾವೇರಿ ವಾರಿಯರ್ಸ್ ತಂಡದ ಸದಸ್ಯರು ಸ್ಥಳೀಯ ಪಪಂ ಸದಸ್ಯರಾದ ಶೇಖ್ ಖಲೀಮುಲ್ಲಾ ಅವರ ಮನೆಗೆ ತೆರಳಿ ಶುಭಾಶಯ ಕೋರಿದರು.
ವೀರಾಜಪೇಟೆ
ಕೊರೊನಾ ಕರಿ ನೆರಳಿನ ಛಾಯೆಯಲ್ಲಿಯೂ 30 ದಿನಗಳ ಉಪವಾಸ ವ್ರತದ ಪರಿ ಸಮಾಪ್ತಿ ಎಂಬಂತೆ ಇಂದು ಹನಫಿ ಮುಸಲ್ಮಾನ ಬಾಂಧವರು ಹಿಜರಿಶೆಕೆಯ ಶವ್ವಾಲ್ ತಿಂಗಳಿನ ಮೊದಲ ದಿನವಾದ ಈದುಲ್‍ಫಿತರ್‍ನ್ನು ಸದ್ದು ಗದ್ದಲವಿಲ್ಲದೆ ಸಂಭ್ರಮ ಆಡಂಬರ ರಹಿತವಾಗಿ ಆಚರಿಸಿದರು.
ಹನಫಿ ಮುಸಲ್ಮಾನ ಬಾಂಧವರು ಇಂದು ತಮ್ಮ ಮನೆ ಮನೆಗಳಲ್ಲಿ ಕುಟುಂಬದವರೊಂದಿಗೆ ರಂಜಾನ್ ಹಬ್ಬದ ಸಾಂಪ್ರದಾಯಿಕ ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಕುಟುಂಬ ಕುಟುಂಬಗಳ ನಡುವೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲು ಲಾಕ್‍ಡೌನ್‍ನ ನಿರ್ಬಂಧವಾಗಿತ್ತು.
ಕೆಲವು ಕುಟುಂಬಗಳು ಇಂದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಶಾವಲಿ ಮಕಾನ್‍ನಲ್ಲಿ ಪೂರ್ವಜರನ್ನು ಸ್ಮರಿಸಿ ಪೂಜೆ ಸಲ್ಲಿಸಿದರು.
ಕೊರೊನಾ ಲಾಕ್‍ಡೌನ್ ನಿರ್ಬಂಧದಿಂದಾಗಿ ಯಾರೂ ಈದ್ಗಾ ಮೈದಾನ ಹಾಗೂ ವಿವಿಧ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿತ್ತು.