ವೀರಾಜಪೇಟೆ, ಮೇ 24 ಕಳೆದ 66 ದಿನಗಳ ಹಿಂದೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯ ಪ್ರಸೂತಿ ಸಮಯದಲ್ಲಿ ನವಜಾತ ಗಂಡು ಶಿಶುವೊಂದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಉಪ ವಿಭಾಗಾಧಿಕಾರಿಯವರ ಆದೇಶದಂತೆ ವೀರಾಜಪೇಟೆ ನಗರ ಪೊಲೀಸರು, ಮಡಿಕೇರಿ ವೈದ್ಯರ, ಸಿಬ್ಬಂದಿಗಳ ಸಮ್ಮುಖದಲ್ಲಿ ತಾಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರು ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಜಾಮಿಯಾ ಖಬರಸ್ತಾನದಲ್ಲಿ ಮಣ್ಣಿನಲ್ಲಿ ಹೂಳಲಾಗಿದ್ದ ಶಿಶುವಿನ ಕಳೇಬರವನ್ನು ಹೊರ ತೆಗೆದು ಕಾನೂನು ಬದ್ಧವಾಗಿ ಮರು ಮರಣೋತ್ತರ ಪರೀಕ್ಷೆ ಮಾಡಿದರು.ಅಮ್ಮತ್ತಿಯ ಎಂ.ಎಂ. ಫಯಾಜುಲ್ಲಾ ಖಾನ್ ಎಂಬವರು, ನನ್ನ ಗರ್ಭಿಣಿ ಪತ್ನಿ ಎಂ.ಐ.ಸಮೀನ (30) ಎಂಬಾಕೆಯನ್ನು ಮಗುವಿನ ಡೆಲಿವರಿಗಾಗಿ ತಾ:18-3-20 ರಂದು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಸಮೀನ ಅದೇ ದಿನ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದು ಮಗು ಆಗಲೇ ಸಾವನ್ನಪ್ಪಿತ್ತು. ಗರ್ಭಿಣಿಯ ಪ್ರಸೂತಿಯ ಕೆಲಸದಲ್ಲಿ ನಿರತವಾಗಿದ್ದ ಡಾ: ರೇಣುಕಾ ಅವರನ್ನು ವಿಚಾರಿಸಿದಾಗ ಮಗು ಅಂಗಾಂಗ ವೈಫಲ್ಯದಿಂದ ಹೊಟ್ಟೆಯೊಳಗೆ ಸತ್ತು ಹೋಗಿ ಹೊರಗಡೆಗೆ ಬಂದಿದೆ. ಮಗು ಜೀವಂತವಾಗಿದ್ದರೆ ನರಳುವಂತಹ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ತಿಳಿಸಿದ್ದರು.ವೈದ್ಯರ ಹಾಗೂ ಶುಶ್ರೂಷಕಿ ಅವರ ನಿರ್ಲಕ್ಷ್ಯದಿಂದ ಶಿಶು ಸಾವನ್ನಪ್ಪಿದೆ. ಮೂರು, ಐದು ಹಾಗೂ ಒಂಭತ್ತನೆ ತಿಂಗಳುಗಳಲ್ಲಿ ನಿರಂತರ ಗರ್ಭಿಣಿಗೆ ಸ್ಕ್ಯಾನಿಂಗ್ ಮಾಡಿಸಿದ್ದು ಕೊನೆಯ ವರದಿಯಲ್ಲಿ

(ಮೊದಲ ಪುಟದಿಂದ)ಮಗು ಹೊಟ್ಟೆಯಲ್ಲಿ ಚಲನವಲನದಲ್ಲಿದ್ದು ಮಗುವಿಗೆ ಯಾವುದೇ ತೊಂದರೆ ಇಲ್ಲವೆಂದು ವರದಿ ಬಂದಿರುವಾಗ ಮಗುವಿನ ಸಾವು ಸಂಶಯಾಸ್ಪದಕ್ಕೆಡೆ ಮಾಡಿಕೊಟ್ಟಿದೆ. ವೈದ್ಯರು ಹಾಗೂ ಶುಶ್ರೂಷಕಿಯರಲ್ಲಿ ಎಲ್ಲ ಸ್ಕ್ಯಾನಿಂಗ್ ವರದಿ ಹಾಗೂ ಡೆಲಿವರಿಗೂ ಮೊದಲ ವರದಿಯನ್ನು ಕೇಳಿದಾಗ ದಾಖಲೆ ನೀಡಲು ನಿರಾಕರಿಸಿದರು. ಇದರಿಂದ ವೈದ್ಯರ ಸಿಬ್ಬಂದಿಗಳ ನಿರ್ಲಕ್ಷ್ಯ ನೈಜವಾಗಿ ಕಾಣುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ನೀಡಿದ ದೂರಿನ ಮೇರೆ ಪ್ರಕರಣದ ತನಿಖೆ ಮಾಡಿ ವರದಿ ಸಲ್ಲಿಸಿದ ನಂತರ ಇತ್ತೀಚೆಗೆ ವೀರಾಜಪೇಟೆ ನಗರ ಪೊಲೀಸರು ಫಯಾಜುಲ್ಲಾ ಅವರ ದೂರನ್ನು ಪುರಸ್ಕರಿಸಿ ಪ್ರಸೂತಿಯಲ್ಲಿ ನಿರ್ಲಕ್ಷ್ಯ ತಾಳಿ ನವಜಾತ ಶಿಶುವಿನ ಸಾವಿಗೆ ಕಾರಣರಾದ ಡಾ. ರೇಣುಕಾ, ಸ್ಕ್ಯಾನಿಂಗ್ ಡಾಕ್ಟರ್ ಹಾಗೂ ಶುಶ್ರೂಷಕಿ ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಫಯಾಜುಲ್ಲಾ ಖಾನ್ ನವಜಾತ ಶಿಶುವಿನ ಸಾವಿನ ಪ್ರಕರಣದ ಸಂಬಂಧದಲ್ಲಿ ಕೊಡಗು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಾಲೂಕು ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ, ವೀರಾಜಪೇಟೆ ವಲಯದ ಡಿ.ವೈಎಸ್‍ಪಿ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.

ಮಡಿಕೇರಿಯ ಜಿಲ್ಲಾ ಆರೋಗ್ಯ ಕೇಂದ್ರದಿಂದ ಡಾ. ಆನಂದ್ ಅವರು ಇತ್ತೀಚೆಗೆ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಫಯಾಜುಲ್ಲಾ ಅವರ ದೂರಿನ ಮೇರೆ ತನಿಖೆ ನಡೆಸಿ ತನಿಖಾ ವರದಿ ಸಲ್ಲಿಸಿದ ನಂತರ ಜಿಲ್ಲಾ ಆರೋಗ್ಯಾಧಿಕಾರಿಯ ನಿರ್ದೇಶನದ ಮೇರೆ ಪ್ರಕರಣವನ್ನು ದಾಖಲಿಸಿ ನವಜಾತ ಶಿಶುವಿನ ಕಳೇಬರವನ್ನು ಮರು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಮಡಿಕೇರಿಯ ಆರೋಗ್ಯ ಇಲಾಖೆಯ ಡಾ:ರವಿಕುಮಾರ್, ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಮರಿಸ್ವಾಮಿ, ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿಯ ಶುಚಿತ್ವದ ಮೇಲುಸ್ತುವಾರಿ ವೇಲ್‍ಮುರುಗನ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಸ್.ಎಚ್. ಮತೀನ್,ಮಹಮ್ಮದ್‍ರಾಫಿ ಮತ್ತಿತರರು ಹಾಜರಿದ್ದರು.

ಮುಖ್ಯ ವೈದ್ಯಾಧಿಕಾರಿ ಪ್ರತಿಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ:ವಿಶ್ವನಾಥ್ ಸಿಂಪಿಯವರನ್ನು ಪ್ರತಿಕ್ರಿಯೆ ಬಯಸಿದಾಗ ಮಗು ಗರ್ಭಿಣಿಯ ಹೊಟ್ಟೆಯಲ್ಲಿ ಮಗು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರುವ ಸಂಭವವಿದೆ.ಇದರಲ್ಲಿ ವೈದ್ಯರ ಸ್ಕ್ಯಾನಿಂಗ್ ವೈದ್ಯರ ನಿರ್ಲಕ್ಷ್ಯ ಕಂಡು ಬರುವುದಿಲ್ಲ. ಈ ಪ್ರಕರಣವನ್ನು ಎಂ.ಬಿ.ಬಿ.ಎಸ್ ವೈದ್ಯರ ಬದಲಾಗಿ ಪ್ರಸೂತಿ ತಜ್ಞರಿಂದ ತನಿಖೆಯಾದರೆ ನೈಜಾಂಶವನ್ನು ಅರಿಯಬಹುದು ಎಂದು ತಿಳಿಸಿದ್ದಾರೆ.