ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ
ನಾಂದೇಡ್, ಮೇ 24: ಕರ್ನಾಟಕ ಮೂಲದ ಸ್ವಾಮೀಜಿಯೊಬ್ಬರು ಮಹಾರಾಷ್ಟ್ರದಲ್ಲಿ ಕಳ್ಳರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ. ಮಠದಲ್ಲಿ ಕಳ್ಳತನಕ್ಕೆ ಬಂದ ಕಳ್ಳರು ಪೀಠಾಧಿಪತಿಯ ಹತ್ಯೆಮಾಡಿ ನಂತರ ಮಠದಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ 50 ವರ್ಷದ ವ್ಯಕ್ತಿಯನ್ನು ಸಹ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆಯಾದ ಶ್ರೀಗಳು ಗಣಿನಾಡು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದೀಪುರ ಗ್ರಾಮದ ದೊಡ್ಡಬಸವೇಶ್ವರ ಮಠದ ಚರಂತಪ್ಪಜ್ಜನವರ ಮಗ ರುದ್ರಪಶುಪತಿ ಶಿವಾಚಾರ್ಯ ಶ್ರೀಗಳೇ ಹತ್ಯೆಗೀಡಾದ ಸ್ವಾಮೀಜಿಗಳು. ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಉಮರಿ ತಾಲೂಕಿನ ನಾಗಠಾಣದ ನಿರ್ವಾಣಿ ಮಠದ ಪೀಠಾಧಿಯಾಗಿದ್ದ ಶ್ರೀಗಳು ಹಲವು ವರ್ಷಗಳಿಂದ ಅಲ್ಲೇ ವಾಸವಾಗಿದ್ರು, ನಾಗಠಾಣದ ನಿರ್ವಾಣಿ ಮಠ ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದರಿಂದ ಮಹಾರಾಷ್ಟ್ರದಲ್ಲಿ ದೊಡ್ಡ ಭಕ್ತ ಸಮೂಹವನ್ನು ಹೊಂದಿದ್ರು ಶ್ರೀಗಳು, ನಿನ್ನೆ ತಡರಾತ್ರಿ ಬಂದ ಕಳ್ಳರ ಗುಂಪು ಶ್ರೀಗಳನ್ನು ಹತ್ಯೆಮಾಡಿ ನಂತರ ಮಠದಲ್ಲಿ ಕೆಲಸ ಮಾಡುತಿದ್ದ ಕೆಲಸಗಾರನನ್ನು ಸಹ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿ ಓಪನ್ ಆಸ್ಪತ್ರೆ
ಬಳ್ಳಾರಿ, ಮೇ 24: ರಾಜ್ಯದಲ್ಲಿ ಜೂನ್ ಮತ್ತು ಜುಲೈನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಮುನ್ಸೂಚನೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಓಪನ್ ಆಸ್ಪತ್ರೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಂಕಿತರಿಗೆ ಚಿಕಿತ್ಸೆ ನೀಡಲು ಮೈದಾನ, ಕ್ರೀಡಾಂಗಣದಂತಹ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂತಹ ಮುಕ್ತ ಆಸ್ಪತ್ರೆ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಕಾರ್ಯಪಡೆ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು, ಗ್ರಾಮೀಣ ಭಾಗಕ್ಕೆ ಸೋಂಕು ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಎಂಬಿಬಿಎಸ್ ವೈದ್ಯರಂತೆ ಆಯುಷ್ ವೈದ್ಯರ ವೇತನ ತಾರತಮ್ಯ ನಿವಾರಿಸುವ ಕುರಿತು ಮಂಗಳವಾರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿ. ಶ್ರೀರಾಮುಲು ಹೇಳಿದರು. ಆಯುಷ್ ವೈದ್ಯರ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆಯುಷ್ ಮತ್ತು ಎಂಬಿಬಿಎಸ್ ವೈದ್ಯರ ಮಧ್ಯೆ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ ಎಂದು ಹೇಳಿದರು.
ರಾಜ್ಯದ ಬೊಕ್ಕಸ ಚೇತರಿಸಿಕೊಳ್ಳುತ್ತಿದೆÀ
ಬೆಂಗಳೂರು, ಮೇ 24: ಲಾಕ್‍ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕ ಸಂಪನ್ಮೂಲ ಬಹುತೇಕ ಬರಿದಾಗಿತ್ತು. ಆದರೀಗ ಲಾಕ್‍ಡೌನ್ ಸಡಿಲಗೊಳಿಸಿದ ಪರಿಣಾಮ ನಿಧಾನವಾಗಿ ರಾಜ್ಯದ ಬೊಕ್ಕಸ ಚೇತರಿಸಿಕೊಳ್ಳುವತ್ತ ಸಾಗಿದೆ. ಎರಡೂವರೆ ತಿಂಗಳ ಲಾಕ್‍ಡೌನ್‍ನಿಂದಾಗಿ ರಾಜ್ಯದ ಬೊಕ್ಕಸ ಖಾಲಿ ಯಾಗಿತ್ತು.ಇದನ್ನು ಮನಗಂಡ ರಾಜ್ಯ ಸರ್ಕಾರ ಲಾಕ್‍ಡೌನ್ 3.0 ಘೋಷಣೆಯಾದಂದಿನಿಂದಲೇ ಹಂತಹಂತವಾಗಿ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಿತು. ಪರಿಣಾಮ ಲಾಕ್‍ಡೌನ್ 4.0 ವೇಳೆ ರಾಜ್ಯ ಸರ್ಕಾರ ಬಹುತೇಕ ಚುಟುವಟಿಕೆಗಳಿಗೆ ನಿಯಮ ಸಡಿಲಿಕೆ ಮಾಡಿತು. 2020-21 ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್‍ನಲ್ಲಿ ಲಾಕ್‍ಡೌನ್ ಎಫೆಕ್ಟ್‍ನಿಂದ ರಾಜ್ಯದ ತೆರಿಗೆ ಮೂಲ ಖೋತ ಕಂಡು ಬಂದಿದ್ದು, ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಬಳಿಕ ನಿಯಮಾವಳಿ ಸಡಿಲಿಕೆ ಬಳಿಕ ರಾಜ್ಯದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಬರುವ ಆದಾಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ನಿಧಾನಗತಿಯಲ್ಲಿ ಆರ್ಥಿಕ ಸಂಪನ್ಮೂಲ ಹರಿದು ಬರುತ್ತಿದೆ.
ಲಾಕ್‍ಡೌನ್‍ಗೆ ರಾಜ್ಯಾದ್ಯಂತ ಬೆಂಬಲ
ಬೆಂಗಳೂರು, ಮೇ 24: ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಾರಿಯಾದ 36 ಗಂಟೆಗಳ ಸಂಪೂರ್ಣ ಲಾಕ್‍ಡೌನ್‍ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿ ಜನಜೀವನ ಮಂಕಾಗಿತ್ತು. ಸದಾ ವಾಹನ ಸಂದಣಿಯಿಂದ ಗಿಜಿಗುಡುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಹಳ ವಿರಳವಾಗಿದೆ. ಇನ್ನು ಬೀದರ್, ಬಳ್ಳಾರಿ ಹಾಗೂ ರಾಮನಗರ ಸಂಪೂರ್ಣ ಸ್ತಬ್ಧವಾಗಿದ್ದು, ಬಸ್ ನಿಲ್ದಾಣಗಳು ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪೊಲೀಸರು ಅಲ್ಲಲ್ಲಿ ಚೆಕ್‍ಪೋಸ್ಟ್ ಹಾಕಿದ್ದು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರಿಗೆ ಎಚ್ಚರಿಸುತ್ತಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಗಳಲ್ಲಿ ವಾಹನ ಓಡಾಟ ಅತ್ಯಂತ ವಿರಳವಾಗಿತ್ತು.
ಎಂಎಲ್‍ಸಿ ಆಗಲಿದ್ದಾರೆ ಹೆಚ್. ವಿಶ್ವನಾಥ್
ಬೆಂಗಳೂರು, ಮೇ 24: ಮೇ ಮತ್ತು ಜೂನ್‍ನಲ್ಲಿ 16 ವಿಧಾನ ಪರಿಷತ್ ಸದಸ್ಯರುಗಳ ಅವಧಿ ಮುಕ್ತಾಯಗೊಳ್ಳಲಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರುಗಳನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡುವ ಸಾಧ್ಯತೆಯಿದೆ. ಮಾಜಿ ಎಂಎಲ್‍ಸಿ ಗೋ. ಮಧುಸೂಧನ್, ನಿರ್ಮಲ್ ಕುಮಾರ್ ಸುರಾನಾ ಹಾಗೂ ಮತ್ತು ಸಿ.ಪಿ. ಯೋಗೇಶ್ವರ್ ಹಾಗೂ ಯಡಿಯೂರಪ್ಪ 2ನೇ ಪುತ್ರ ವಿಜಯೇಂದ್ರ ಕೂಡ ಆಕಾಂಕ್ಷಿಗಳಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಕಾಂಗ್ರೆಸ್ ತನ್ನ ಪಟ್ಟಿಯನ್ನು ಸಿದ್ಧಪಡಿಸಲಿದೆ, ಅದರಂತೆ ಜೆಡಿಎಸ್ ಕೂಡ ಪಟ್ಟಿ ತಯಾರಿಸಲಿದೆ. ತೆರವಾಗುವ 16 ಪರಿಷತ್ ಸದಸ್ಯರಲ್ಲಿ 5 ನಾಮ ನಿರ್ದೇಶಿತರು, 7 ಮಂದಿ ವಿಧಾನ ಸಭೆಯಿಂದ ಆಯ್ಕೆಯಾಗುವವರು ಹಾಗೂ ನಾಲ್ಕು ಮಂದಿ ಶಿಕ್ಷಕರ ಕ್ಷೇತ್ರ ನಾಲ್ಕು ಮಂದಿ ಪದವೀದರರ ಕ್ಷೇತ್ರದಿಂದ ಆಯ್ಕೆಯಾಗುವ ಸದಸ್ಯರಾಗಿದ್ದಾರೆ. ಬಿಜೆಪಿ ಸೇರಿ ಸೋತಿರುವ ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರನ್ನು ನಾಮ ನಿರ್ದೇಶನಗೊಳಿಸುವ ಸಾಧ್ಯತೆಯಿದೆ. ಮಧುಸೂಧನ್ ಜೊತೆಗೆ ನಿರ್ಮಲ್ ಕುಮಾರ್ ಸುರಾನ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದಾರೆ.
ಸೇನೆಯಿಂದ ನಾಲ್ಕು ಮಂದಿಯ ಬಂಧನ
ಶ್ರೀನಗರ, ಮೇ 24: ಲಷ್ಕರ್ ಎ-ತೊಯ್ಬಾ ಉಗ್ರಗಾಮಿ ಸಂಘಟನೆಯೊಂದಿಗೆ ಸಹಚರ್ಯ ಹೊಂದಿದ್ದ ನಾಲ್ಕು ಮಂದಿಯನ್ನು ಭದ್ರತಾ ಪಡೆ ಯೋಧರು ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಲಷ್ಕರ್ ಎ ತೊಯ್ಬಾ ಸಂಘಟನೆ ಜೊತೆ ಗುರುತಿಸಿಕೊಂಡಿರುವ ನಾಲ್ವರನ್ನು ಪೊಲೀಸರು ಬದ್ಗಾಮ್ ಜಿಲ್ಲೆಯಲ್ಲಿ ಬಂಧಿಸಿ ಅವರ ಬಳಿಯಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ವಸೀಮ್ ಗಣಿ, ಫಾರೂಕ್ ಅಹ್ಮದ್ ದಾರ್, ಮೊಹಮ್ಮದ್ ಯಾಸಿನ್ ಮತ್ತು ಅಜರುದ್ದೀನ್ ಮಿರ್ ಎಂದು ಗುರುತಿಸಲಾಗಿದೆ. ಇವರು ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆಯ ಉಗ್ರರಿಗೆ ತಾತ್ವಿಕ ನೆರವು ಮತ್ತು ಆಶ್ರಯದ ನೆರವು ನೀಡುತ್ತಿದ್ದರು ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ.
ಯೋಧರ ಬಂಧನ : ಭಾರತ ತಿರಸ್ಕಾರ
ನವದೆಹಲಿ, ಮೇ 24: ಲಡಾಖ್‍ನಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ತಾರಕಕ್ಕೇರಿರುವ ನಡುವಲ್ಲೇ ಭಾರತೀಯ ಯೋಧರನ್ನು ಚೀನಾ ಪಡೆಗಳು ಕಳೆದ ವಾರ ಬಂಧನಕ್ಕೊಳಪಡಿಸಿತ್ತು ಎಂಬ ವರದಿಯನ್ನು ಭಾರತೀಯ ಸೇನಾಪಡೆ ತಿರಸ್ಕರಿಸಿದೆ. ಲಡಾಖ್‍ನ ಪ್ಯಾಂಗ್ಯಾಂಗ್ ಸರೋವರದ ಬಳಿ ಹಲವು ದಿನಗಳಿಂದ ಬೀಡು ಬಿಟ್ಟಿರುವ ಚೀನಾ ಸೇನೆ, ಕಳೆದ ಬುಧವಾರ ಭಾರತದ ಗಡಿಯೊಳಗೆ ನುಗ್ಗಿ ಭಾರತದ ನೆಲದಲ್ಲಿ ಓಡಾಟ ನಡೆಸಿತ್ತು. ಈ ವೇಳೆ ಭಾರತೀಯ ಯೋಧರು ಆಕ್ಷೇಪ ವ್ಯಕ್ತಪಡಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಯೋಧರು ಭಾರತೀಯ ಯೋಧರನ್ನು ತಮ್ಮ ವಶಕ್ಕೆ ಪಡೆದಿದ್ದೂ ಅಲ್ಲದೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಬಳಿಕ ಮರಳಿಸಿದ್ದರು. ಈ ವಿಚಾರ ಕೈಮೀರುವ ಹಂತಕ್ಕೆ ತಲುಪುತ್ತಲೇ ಉಭಯ ದೇಶಗಳ ಕಮಾಂಡರ್‍ಗಳು ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿ, ಬಳಿಕ ಭಾರತೀಯ ಯೋಧರನ್ನು ಬಿಡುಗಡೆ ಮಾಡಲಾಗಿತ್ತು ಎಂದು ವರದಿಗಳಾಗಿದ್ದವು. ಈ ವರದಿಯನ್ನು ಇದೀಗ ಭಾರತೀಯ ಸೇನಾಪಡೆ ತಿರಸ್ಕರಿಸಿದೆ. ಚೀನಾ ಪಡೆಗಳಿಂದ ಯಾವುದೇ ಭಾರತೀಯ ಯೋಧರೂ ಬಂಧನಕ್ಕೊಳಪಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.