ಮಡಿಕೇರಿ, ಮೇ 24: ಕಳೆದ ತಾ. 16 ರಂದು ಮುಂಬೈನಿಂದ ಮಡಿಕೇರಿಗೆ ಆಗಮಿಸಿರುವ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಸಂಪಾಜೆ ಗೇಟ್‍ನಲ್ಲಿ ಕರ್ತವ್ಯನಿರತ 22 ಮಂದಿ ಕೊರೊನಾ ವಾರಿಯರ್ಸ್ ಇದೀಗ ಆತಂಕದಿಂದ ಮುಕ್ತರಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.ಮುಂಬೈನಿಂದ ತವರಿಗೆ ಬಂದಿರುವ ಮಹಿಳೆಗೆ ಕೊರೊನಾ ದೃಢಪಟ್ಟಿದ್ದರಿಂದ, ಸಂಪಾಜೆಯಲ್ಲಿ ಕರ್ತವ್ಯನಿರತ ಪೊಲೀಸರು, ಆರೋಗ್ಯ ಮತ್ತು ಕಂದಾಯ ಸಿಬ್ಬಂದಿ ಸಹಿತ 22 ಮಂದಿಗೆ ತಾ. 18ರಿಂದ ಸಾಂಸ್ಥಿಕ ಗೃಹ ಸಂಪರ್ಕ ತಡೆ ವಿಧಿಸಲಾಗಿತ್ತು.

ಇದೀಗ ಈ ಮಂದಿಯ ತಪಾಸಣೆ ಸಂಬಂಧ ವರದಿಯು ಪ್ರಯೋಗಾಲಯದಿಂದ ಬಂದಿದ್ದು, ನೆಗೆಟಿವ್ ಇರುವದಾಗಿ ಮಾಹಿತಿ ಲಭಿಸಿದೆ. ಹೀಗಿದ್ದರೂ ತಕ್ಷಣಕ್ಕೆ ಈ ಎಲ್ಲಾ 22 ಮಂದಿಯನ್ನು ಸಾಂಸ್ಥಿಕ ಗೃಹ ಸಂಪರ್ಕ ತಡೆಯನ್ನು 14 ದಿನ ಪೂರ್ಣಗೊಳ್ಳುವ ತನಕ ಮುಂದುವರೆಸಲಿರುವದಾಗಿ ಗೊತ್ತಾಗಿದೆ.ಮತ್ತೆ ಮೂವರಿಗೆ ತಡೆ : ಈ ನಡುವೆ ತಾ. 20 ರಂದು ಸಂಪಾಜೆ ಮೂಲಕ ನಾಲ್ವರು ಆಗಮಿಸಿರುವ ಕೊರೊನಾ ಪ್ರಕರಣ ಸಂಬಂಧ, ಇದೀಗ ಮತ್ತೆ ಮೂವರು ಕೊರೊನಾ ವಾರಿಯರ್ಸ್‍ಗೆ ಸಾಂಸ್ಥಿಕ ಗೃಹ ಸಂಪರ್ಕ ತಡೆ ವಿಧಿಸಲಾಗಿದೆ.