ಮಡಿಕೇರಿ, ಮೇ 24: ಜಾಗತಿಕ ಕೊರೊನಾ ಸೋಂಕಿನ ನೆರಳಿನಲ್ಲಿ ರಾಜ್ಯ ಸರಕಾರದಿಂದ ಭಾನುವಾರದ ಕರ್ನಾಟಕ ಬಂದ್ ನಡುವೆ, ಇಂದು ಮುಸ್ಲಿಂ ಬಾಂಧವರು ತಮ್ಮ ಪ್ರಾರ್ಥನಾ ಮಂದಿರ ಹಾಗೂ ಈದ್ಗಾ ಮೈದಾನಗಳಲ್ಲಿ ರಂಜಾನ್ ಹಬ್ಬವನ್ನು ಆಚರಿಸದೆ, ತಮ್ಮ ತಮ್ಮ ಮನೆಗಳಿಗೆ ಸೀಮಿತವಾಗಿ ಕುಟುಂಬ ವರ್ಗದೊಂದಿಗೆ ಸರಳವಾಗಿ ಹಮ್ಮಿಕೊಂಡಿದ್ದರು.ಉಷಾ ಕಾಲದಲ್ಲಿ ಚಂದ್ರದರ್ಶನ ಬಳಿಕ ಸಾಮೂಹಿಕವಾಗಿ ಹಮ್ಮಿಕೊಳ್ಳುತ್ತಿದ್ದ ನಮಾಜ್ ಕಾರ್ಯಕ್ರಮದ ಬದಲಾಗಿ, ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಗಳಲ್ಲಿ ಇದ್ದುಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರೂಢಿಯಲ್ಲಿ ಬಂದಿರುವಂತೆ ಕಳೆದ ಒಂದು ತಿಂಗಳ ಹಗಲು ಉಪವಾಸ ಬಳಿಕ ಭಗವಂತನಿಗೆ ಪ್ರಾರ್ಥನೆಯೊಂದಿಗೆ ಹಸಿದವರಿಗೆ, ಕಷ್ಟದಲ್ಲಿರುವವರಿಗೆ ದಾನ, ಧರ್ಮ ಮಾಡುವುದು ಈ ಹಬ್ಬದ ವಿಶೇಷವಾಗಿದೆ.ಆದರೆ ಪ್ರಸ್ತುತ ಕೊರೊನಾ ಲಾಕ್‍ಡೌನ್‍ನಿಂದಾಗಿ, ಮಸೀದಿ ಸೇರಿದಂತೆ ಎಲ್ಲಿಯೂ ಸಾಮೂಹಿಕ ಪ್ರಾರ್ಥನೆಗೆ (ಮೊದಲ ಪುಟದಿಂದ) ನಿರ್ಬಂಧದ ಕಾರಣದಿಂದಾಗಿ ಎಲ್ಲಾ ಮುಸ್ಲಿಮರು ತಮ್ಮ ಮನೆಗಳಲ್ಲಿ ಈ ಧಾರ್ಮಿಕ ಕೈಂಕರ್ಯಗಳನ್ನು ಸರಳವಾಗಿ ಹಮ್ಮಿಕೊಂಡಿದ್ದಾಗಿ ಧರ್ಮಗುರುಗಳು ತಿಳಿಸಿದ್ದಾರೆ.
ಪ್ರತಿಯೊಬ್ಬರು ಉಪವಾಸ ಕೈಗೊಂಡು, ಹಸಿವು, ದುಃಖದಲ್ಲಿ ಇರುವವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವುದು ರಂಜಾನ್ ಹಬ್ಬದ ಮೂಲವಾಗಿದೆ. ಈ ಸಲುವಾಗಿ ಸಾಕಷ್ಟು ದಾನ ಮಾಡುವುದು ಧರ್ಮ ಪರಿಪಾಲನೆಯ ಇಸ್ಲಾಂ ಧ್ಯೇಯವಾಗಿದೆ. ಈ ಹಿಂದೆ ಹಬ್ಬ ಆಚರಣೆ ಸಂದರ್ಭ ಸಾಮೂಹಿಕವಾಗಿ ಎಲ್ಲ ಬಡವರ್ಗಕ್ಕೆ ಜಾತಿ, ಮತ, ಧರ್ಮ ಭೇದವಿಲ್ಲದೆ ದಾನ ಮಾಡುವ ಮೂಲಕ ರಂಜಾನ್ ಆಚರಣೆಯೊಂದಿಗೆ ಪ್ರಾರ್ಥನೆ ನಡೆಯುತ್ತಿತ್ತು.
ಈ ಬಾರಿ ನಿಯಮದಂತೆ ಲಾಕ್‍ಡೌನ್ ಉಲ್ಲಂಘಿಸದೆ ಪ್ರತಿಯೊಬ್ಬ ಮುಸ್ಲಿಮರು ತಮ್ಮ ಸಂಸಾರದ ಜತೆಗೂಡಿ ಹಬ್ಬ ನಿರ್ವಹಿಸುವ ಮುಖಾಂತರ ನೆರೆಕರೆಯವರಿಗೆ ಸಾಂಕೇತಿಕವಾಗಿ ದಾನಧರ್ಮ ಮಾಡಿ ಕರ್ತವ್ಯ ಪಾಲನೆ ಮಾಡಲಾಗಿದೆ ಎಂದು ಇಸ್ಲಾಂ ಧರ್ಮಗುರುಗಳು ನೆನಪಿಸಿದ್ದಾರೆ.
ಶನಿವಾರಸಂತೆ: ಕೊಡ್ಲಿಪೇಟೆ ಹಾಗೂ ಶನಿವಾರಸಂತೆಯಲ್ಲಿ ಭಾನುವಾರ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಿದರು.
ವೀರಾಜಪೇಟೆ: ರಂಜಾನ್ ಹಬ್ಬದ ಪ್ರಯುಕ್ತ ಪದ್ಧತಿಯಂತೆ ಸಮುದಾಯದ ಕೆಲವು ಕುಟುಂಬಗಳು ಕೊರೊನ ವೈರಸ್ ಭೀತಿಯ ನಿರ್ಬಂಧದಂತೆ ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಶಾವಲಿ ಮಕಾನ್‍ಗೆ ತೆರಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.
ಕೊರೊನಾ ವೈರಸ್ ಲಾಕ್‍ಡೌನ್‍ನ ನಿರ್ಬಂಧದ ಹಿನ್ನೆಲೆಯಲ್ಲಿ ಇಲ್ಲಿನ ಸುಣ್ಣದ ಬೀದಿಯಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನೆರವೇರಲಿಲ್ಲ.
ಕೊರೊನಾ ವೈರಸ್ ನಿರ್ಬಂಧದ ಹಿನ್ನೆಲೆ ಈದ್ಗಾ ಮೈದಾನಕ್ಕೆ ಯಾರೂ ಪ್ರವೇಶಿಸದಂತೆ ಬೀಗ ಜಡಿಯಲಾಗಿತ್ತು.
ಭಾನುವಾರದಂದು ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಇದ್ದುದರಿಂದ ಶಾಫಿ ಜಮಾತ್‍ನ ಮುಸ್ಲಿಂ ಬಾಂಧವರು ಅಧಿಕವಾಗಿ ಮೊಬೈಲ್ ಮೂಲಕವೇ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹನಫಿ ಮುಸ್ಲಿಂ ಬಾಂಧವರು ತಾ. 25 ರಂದು (ಇಂದು) ರಂಜಾನ್ ಹಬ್ಬವನ್ನು ಆಚರಿಸಲಿದ್ದಾರೆ.
ವೀರಾಜಪೇಟೆಯ ಕೊರೊನಾ ವಾರಿಯರ್ಸ್ ತಂಡಗಳಾದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ತಂಡ, ವೈದ್ಯರುಗಳು, ಶುಷ್ರೂಶಕಿಯರು, ಸಿಬ್ಬಂದಿಗಳು, ಸಮುಚ್ಚಯ ಪೊಲೀಸ್ ಠಾಣೆಗಳ ಎಲ್ಲ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ಮುಖ್ಯಾಧಿಕಾರಿ, ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಯ ವಾರಿಯರ್ಸ್‍ಗಳೊಂದಿಗೆ ತಾ. 27 ರಂದು ರಂಜಾನ್ ಹಬ್ಬವನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಚರಿಸಲಾಗುವುದು ಎಂದು ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಹಾಗೂ ಜನತಾದಳದ ಮುಖಂಡರಾದ ಎಸ್.ಎಚ್. ಮತೀನ್ ತಿಳಿಸಿದ್ದಾರೆ.
ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಮುಸ್ಲಿಂ ಭಾಂದವರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿದರು.
ಸುಂಟಿಕೊಪ್ಪ ಪಟ್ಟಣದಲ್ಲಿ ಕಳೆದ 2 ಭಾನುವಾರ ಎಂದಿನಂತೆ ವಾರದ ಸಂತೆಯನ್ನು ನಡೆಸಲಾಗಿತ್ತು. ಈ ಭಾನುವಾರ ಬಂದ್ ಘೋಷಣೆಯಾದ ಹಿನ್ನೆಲೆ ಜನ ಸಂಚಾರ, ವಾಹನಗಳ ಸಂಚಾರ ಇಲ್ಲವಾಗಿತ್ತು.
ಸೋಮವಾರಪೇಟೆ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಭ್ರಮ ಸಡಗರದಿಂದ ನಡೆಯುತ್ತಿದ್ದ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಈ ಬಾರಿ ಸರಳವಾಗಿ ಆಚರಿಸಿದರು.
ತಮ್ಮ ತಮ್ಮ ಮನೆಗಳಲ್ಲಿ ರಂಜಾನ್ ಪ್ರಾರ್ಥನೆಯನ್ನು ನೆರವೇರಿಸಿದರು. ಮಸೀದಿಯ ಗುರುಗಳ ಸೂಚನೆಯಂತೆ ಖಬರಸ್ಥಾನಕ್ಕೆ ತೆರಳದೇ ಅಗಲಿದ ಆತ್ಮಗಳಿಗೆ ಶಾಂತಿ ಕೋರಿ ಮನೆಗಳಲ್ಲಿ ಪ್ರಾರ್ಥನೆ ನಡೆಯಿತು.
ಸೋಮವಾರಪೇಟೆ ಸುತ್ತಮುತ್ತಲಿನ ಪ್ರಾರ್ಥನಾ ಮಂದಿರಗಳ ಬಳಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನದವರೆಗೆ ಪೊಲೀಸರು ಬೀಡುಬಿಟ್ಟಿದ್ದರು. ಎಲ್ಲಿಯೂ ಸರ್ಕಾರದ ಆದೇಶ ಉಲ್ಲಂಘನೆಯಾಗದಂತೆ ಸೂಕ್ತ ಬಂದೋಬಸ್ತ್‍ನೊಂದಿಗೆ ಎಚ್ಚರ ವಹಿಸಿದ್ದರು.
ಮುಸ್ಲಿಂ ಸಮುದಾಯದವರೂ ಸಹ ಮಸೀದಿ ಹಾಗೂ ಖಬರಸ್ಥಾನಗಳಿಗೆ ಪ್ರಾರ್ಥನೆಗಾಗಿ ತೆರಳಲು ಮುಂದಾಗದೇ ಇಲಾಖೆಯೊಂದಿಗೆ ಸಹಕಾರ ನೀಡಿದರು. ಹೊಸ ಬಟ್ಟೆ ತೊಟ್ಟು, ಮನೆಮಂದಿಯೊಂದಿಗೆ ಈ ಬಾರಿಯ ರಂಜಾನ್ ಆಚರಿಸಿದರು.
ಇದರೊಂದಿಗೆ ರಂಜಾನ್ ಹಬ್ಬದ ಅಂಗವಾಗಿ ಬಡ ಕುಟುಂಬಗಳಿಗೆ ನಿನ್ನೆ ಸಂಜೆ ಈದ್ ಕಿಟ್‍ಗಳನ್ನು ವಿತರಿಸಿದರು. ಭಾನುವಾರದಂದು ಲಾಕ್‍ಡೌನ್ ಹಿನ್ನೆಲೆ ಹೊರಗೆ ಓಡಾಡುವದನ್ನು ನಿರ್ಬಂಧಿಸಿದ್ದರಿಂದ ನಿನ್ನೆ ಸಂಜೆ ಬಡ ಕುಟುಂಬಗಳ ಮನೆಗೆ ತೆರಳಿ ಕಿಟ್‍ಗಳನ್ನು ವಿತರಿಸಿ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ಕಡಂಗ: ಕಡಂಗ ಮತ್ತು ಎಡಪಾಲದಲ್ಲಿ ಮುಸ್ಲಿಂ ಸಮುದಾಯದವರು ಈದುಲ್ ಫಿತ್ರ್ ಹಬ್ಬವನ್ನು ಮನೆಯಲ್ಲಿ ಸರಳವಾಗಿ ಆಚರಿಸಿದರು. ಪ್ರಸಕ್ತ ಸನ್ನಿವೇಶದಲ್ಲಿ ಬಂದೆರಗಿದ ಮಹಾಮಾರಿ ಕೊರೊನಾ ಪಿಡುಗಿನಿಂದ ಮುಕ್ತಿ ಹೊಂದಲು ಪ್ರತ್ಯೇಕವಾಗಿ ಪ್ರಾರ್ಥಿಸಿದರು.
ಕುಶಾಲನಗರ: ಕುಶಾಲನಗರದಲ್ಲಿ ಹಿಲಾಲ್, ತಕ್ವಾ ಮಸೀದಿಗೆ ಸೇರಿದ ಮುಸ್ಲಿಂ ಬಾಂಧವರು ಭಾನುವಾರ ರಂಜಾನ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದರು. ಜಾಮಿಯಾ ಮಸೀದಿಯ ಮುಸ್ಲಿಂ ಬಾಂಧವರಿಂದ ತಾ. 25 ರಂದು (ಇಂದು) ಆಚರಣೆ ನಡೆಯಲಿದೆ.