ಮಡಿಕೇರಿ, ಮೇ 24: ಮುಂಬೈನಲ್ಲಿ ಬ್ಯಾಂಕೊಂದರ ಉದ್ಯೋಗಿಯಾಗಿರುವ ಓರ್ವನ ಸಹಿತಿ, ಹರ್ಯಾಣದಲ್ಲಿ ವಸ್ತ್ರ ಕಾರ್ಖಾನೆಯ ಮತ್ತೋರ್ವ ಹಾಗೂ ಗುಜರಾತಿನ ವಡೋದರಾದಲ್ಲಿ ಹೊಟೇಲ್ ಉದ್ಯೋಗಿಗಳಾಗಿದ್ದ ಇಬ್ಬರು ತಾ. 20 ರಂದು ರಾತ್ರಿ ಸಂಪಾಜೆ ಮೂಲಕ ತಮ್ಮ ತವರು ಕೊಡಗಿಗೆ ಬಂದಿದ್ದು, ಈ ಪೈಕಿ ಓರ್ವನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನುಳಿದ ಮೂವರಿಗೆ ಪ್ರಯೋಗಾಲಯ ವರದಿ ನೆಗೆಟಿವ್ ಬಂದಿದ್ದು, ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವದರೊಂದಿಗೆ ಚಿಕಿತ್ಸೆ ಕಲ್ಪಿಸಲಾಗಿದೆ. ಇತರ ಮೂವರಿಗೆ ಗೃಹ ಸಂಪರ್ಕ ತಡೆ ವಿಧಿಸಲಾಗಿದೆ.

ಕೊರೊನಾ ಸೋಂಕಿತ ಯುವಕ 26ರ ಹರೆಯದವರಾಗಿದ್ದು, ಈತ ಮುಂಬೈನಲ್ಲಿ ಉದ್ಯೋಗದಲ್ಲಿದ್ದು, ತನ್ನ ಸೋದರಿಯ ವಿವಾಹ ಸಂಬಂಧ ತವರಿಗೆ ಬಂದಿರುವದಾಗಿ ತಿಳಿದು ಬಂದಿದೆ. ಮೇಲ್ಕಾಣಿಸಿದ ನಾಲ್ವರಲ್ಲಿ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಊರೊಂದರ ನಿವಾಸಿ 45ರ ಪ್ರಾಯದವರಾಗಿದ್ದು, ಹರಿಯಾಣದಲ್ಲಿ ಉಡುಪು ರಫ್ತು ಘಟಕದಲ್ಲಿ ಉದ್ಯೋಗಿಯಾಗಿದ್ದರೆಂದು ಮಾಹಿತಿ ಲಭಿಸಿದೆ. ಮತ್ತೋರ್ವ ಕೂಡ ಮಡಿಕೇರಿ ತಾಲೂಕಿನ ಚೇರಂಬಾಣೆ ಬಳಿಯ ಗ್ರಾಮವೊಂದರ ನಿವಾಸಿ 19ರ ತರುಣ ಮತ್ತು ವೀರಾಜಪೇಟೆಯ 18ರ ಪ್ರಾಯದವರಾಗಿದ್ದು, ಇಬ್ಬರು ವಡೋದರಾದಲ್ಲಿ ಹೊಟೇಲ್ ಉದ್ಯೋಗಿಗಳೆಂದು ಗೊತ್ತಾಗಿದೆ.ಇತ್ತ ಕೊರೊನಾ ಸೋಂಕಿತ 26ರ ಪ್ರಾಯದ ಮುಂಬೈನ ಬ್ಯಾಂಕ್ ಉದ್ಯೋಗಿ ಉತ್ತರಕೊಡಗಿನ ಕೂಡಿಗೆ ಬಳಿಯ ನಿವಾಸಿಯಾಗಿದ್ದು, ಈ ನಾಲ್ವರನ್ನು ನೇರವಾಗಿ ಕೋವಿಡ್ -19 ಚಿಕಿತ್ಸೆಗೆ ಒಳಪಡಿಸಿರುವ ಕಾರಣ ಯಾವದೇ (ಮೊದಲ ಪುಟದಿಂದ) ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲವೆಂದು ವೈದ್ಯಕೀಯ ಮೂಲಗಳಿಂದ ದೃಢಪಟ್ಟಿದೆ.

ರೈಲಿನಲ್ಲಿ ಆಗಮನ : ಈ ನಾಲ್ವರು ತಾ. 19 ರಂದು ರಾತ್ರಿ 11 ಗಂಟೆಗೆ ಮುಂಬೈನ ಪನ್ವಾಲ್ ರೈಲ್ವೇ ನಿಲ್ದಾಣದಿಂದ ಮಂಗಳೂರಿಗೆ ಪ್ರಯಾಣಿಸಿದ್ದಾಗಿದೆ. ದೆಹಲಿ ಹಾಗೂ ತಿರುವಂತಪುರ ನಡುವೆ ಸಂಚರಿಸುವ ವಿಶೇಷ ರೈಲಿನಲ್ಲಿ ಮಂಗಳೂರಿಗೆ ಬಂದು ತಾ. 20 ರಂದು 5.15ಕ್ಕೆ ಸಂಜೆ ತಲಪಿದ್ದಾರೆ.

ಅನಂತರ ಬಾಡಿಗೆ ಕಾರೊಂದರಲ್ಲಿ ಮಂಗಳೂರಿನಿಂದ ಮಡಿಕೇರಿಯತ್ತ ಪ್ರಯಾಣಿಸಿದ್ದು, ಸಂಪಾಜೆಗೇಟ್‍ನಲ್ಲಿ ತಪಾಸಣೆಯ ವೇಳೆ, ಮುಂಬೈನಿಂದ ಆಗಮಿಸಿದ ವಿಷಯ ತಿಳಿದಿದೆ. ಅಲ್ಲಿ ರಾತ್ರಿ 9.15ರ ಸಮಯದಲ್ಲಿ ಪೊಲೀಸರ ಸಹಕಾರದಿಂದ ಅದೇ ಕಾರಿನಲ್ಲಿ ನೇರವಾಗಿ ನಾಲ್ವರನ್ನು ಮಡಿಕೇರಿಯ ಕೋವಿಡ್ -19 ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಹೀಗಾಗಿ, ನಾಲ್ವರಲ್ಲಿ ಓರ್ವನಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದರೂ, ಇತರರ ಸಂಪರ್ಕಕ್ಕೆ ಅವಕಾಶವಾಗಿಲ್ಲದ್ದರಿಂದ ಸಾರ್ವಜನಿಕರು ಆತಂಕಗೊಳ್ಳಬೇಕಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.