ಸೂರ್ಯ ಉದಯಿ ಸುವ ಮುನ್ನವೇ ಇವರು ಮನೆ ಮನೆಗೆ ತೆರಳುತ್ತಾರೆ.. ಸೂರ್ಯ ನೆತ್ತಿಗೆ ಬರುವ ಮುನ್ನ ಕೆಲಸ ಮುಗಿಸಿ ತಮ್ಮ ಮನೆ ಸೇರಿಬಿಡುತ್ತಾರೆ. ಇವರನ್ನು ಬಹುತೇಕರು ಸರಿಯಾಗಿಯೇ ನೋಡಿರುವುದೇ ಇಲ್ಲ. ಆದರೆ, ಹೊತ್ತೇರುವ ಮೊದಲೇ ಇವರು ತಮ್ಮ ಮನೆ ಬಾಗಿಲಿಗೆ uಟಿಜeಜಿiಟಿeಜ ವಿತರಿಸುವ ಸುದ್ದಿ ಸಮಾಚಾರವನ್ನು ಮಾತ್ರ ಎಲ್ಲರೂ ಗಮನಿಸಿರುತ್ತಾರೆ. ಲಾಕ್‍ಡೌನ್ ಸಂದರ್ಭ ಇತರರಂತೆ ಇವರೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆರ್ಥಿಕ ಸಂಕಷ್ಟದಲ್ಲಿ ಬಳಲಿ ನೊಂದಿದ್ದರು. ಎಲ್ಲರಿಗೂ ದಿನಾ ಬೆಳಗ್ಗೆ ಅತ್ಯಗತ್ಯವಾಗಿ ಬೇಕಾಗಿದ್ದ ಇವರನ್ನು ಮಾತ್ರ ಯಾರೂ ನಿಮಗೇನು ಸಹಾಯ ಬೇಕು ಎಂದು ಕೇಳಲಿಲ್ಲ. ದಿನಸಿ ಕಿಟ್ ಕೊಡಲಿಲ್ಲ. ಇದೆಲ್ಲಾ ಹೋಗಲಿ, ನೀಡಿದ ಸೇವೆಗೆ ಕೊಡಬೇಕಾದ ಮಾಸಿಕ ಹಣವನ್ನೂ ಕೆಲವರು ನೀಡದೇ ಇವರನ್ನು ಮತ್ತಷ್ಟು ಸಮಸ್ಯೆಯಲ್ಲಿ ಸಿಲುಕಿಸಿದ್ದಾರೆ. ಕೊರೊನಾ ಸಂದರ್ಭ ಕಣ್ಣಿಗೆ ಕಾಣದ ವೈರಾಣುವಿನ ಭೀತಿಯಲ್ಲಿಯೇ ಮನೆ-ಮನೆಗೆ ತೆರಳಿ ಜಗತ್ತಿನ ಸುದ್ದಿ ಸಮಾಚಾರ ತಲುಪಿಸಿದ ಇವರು. ಪತ್ರಿಕೆಗಳ ಹೆಮ್ಮೆಯ ವಿತರಕರು. ಇವರೂ ವೈರಾಣು ವಿರುದ್ಧ ಸಮರದ ಸಂದರ್ಭ ಸುದ್ದಿ ಬಿತ್ತರಿಸುವ ಸೈನಿಕರು.

ಕೊಡಗಿನ ಎಲ್ಲಾ ಊರುಗಳಲ್ಲಿಯೂ ದಿನನಿತ್ಯ ಪತ್ರಿಕೆಗಳನ್ನು ವಿತರಿಸುವ ಕಾರ್ಯ ಕೈಗೊಂಡಿರುವ ವಿತರಕರು ಇದ್ದಾರೆ. ಸುಮಾರು 180 ಏಜಂಟರಿಂದ 550 ವಿತರಕರು ದಿನನಿತ್ಯ ಪತ್ರಿಕೆಗಳನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಡಿಕೇರಿಯ ತಿಮ್ಮಯ್ಯ ಸರ್ಕಲ್‍ನಲ್ಲಿ ಬೆಳಗ್ಗೆ 4.45ಕ್ಕೆಲ್ಲಾ ಇವರ ಕರ್ತವ್ಯ ಪ್ರಾರಂಭವಾಗುತ್ತದೆ. ಬೇರೆ-ಬೇರೆ ಊರುಗಳಿಂದ ಬರುವ ಪತ್ರಿಕೆ ಗಳನ್ನೆಲ್ಲಾ ಒಟ್ಟುಗೂಡಿಸಿ ಯಾವ ಬಡಾವಣೆ, ಯಾರ ಮನೆ ಎಂದು ವಿಂಗಡಿಸಲಾಗು ತ್ತದೆ. ಪತ್ರಿಕೆಗಳೊಂದಿಗೆ ಬರುವ ಪುರವಣಿಗಳನ್ನೂ ಪತ್ರಿಕೆಯೊಳಗೆ ಸೇರ್ಪಡೆ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದೇ ರೀತಿ ಇತರ ಎಲ್ಲಾ ಪ್ರದೇಶಗಳಲ್ಲಿಯೂ ಅಲ್ಲಲ್ಲಿನ ಏಜೆಂಟರು ಬೆಳಿಗ್ಗೆ ಕಾರ್ಯನಿರತರಾಗುತ್ತಾರೆ. ಮಳೆ, ಚಳಿ, ಕುಳಿರ್ಗಾಳಿಯನ್ನೂ ಲೆಕ್ಕಿಸದೇ ಬೆಳಕಿರುವ ಕತ್ತಲಿನಲ್ಲಿಯೇ ಈ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ವಿತರಕರ ತಂಡ ಮಾಡುತ್ತಿರುತ್ತದೆ. ಬೆಳಕು ಹರಿಯುತ್ತಿರುವಂತೆಯೇ ದ್ವಿಚಕ್ರ ವಾಹನ ಗಳಲ್ಲಿಯೋ, ಕಾಲ್ನಡಿಗೆ ಯಲ್ಲಿಯೂ ಬಿರುಸಾಗಿ ಮನೆ-ಮನೆಗೂ ತೆರಳಿ ಪತ್ರಿಕೆಗಳನ್ನು ಹಾಕುವ ಸಮಾರೋಪಾದಿಯ ಕೆಲಸ ಮಾಡುತ್ತಾರೆ. ಇದು ಒಂದೆರಡು ದಿನದ ಕೆಲಸವೇನಲ್ಲ. ಪ್ರತಿನಿತ್ಯ ಇದೇ ದಿನಚರಿ. ಪತ್ರಿಕೆಗಳಲ್ಲಿ ದಿನನಿತ್ಯ ಸುದ್ದಿಗಳು ಬದಲಾಗುತ್ತಲೇ ಇರುತ್ತದೆ, ಆದರೆ ಪತ್ರಿಕೆಗಳನ್ನು ವಿತರಿಸು ವವರ ದಿನಚರಿ ಬದಲಾಗುವುದಿಲ್ಲ. ಸಮಸ್ಯೆಗಳೂ ಬದಲಾಗುತ್ತಿಲ್ಲ.

ಮಡಿಕೇರಿಯಲ್ಲಿಯೇ ‘‘ಶಕ್ತಿ’’ ಮತ್ತು ರಾಜ್ಯಮಟ್ಟದ 9000 ಪತ್ರಿಕೆಗಳನ್ನು ಸುಮಾರು 6800 ಮನೆಗಳಿಗೆ ಬೆಳಿಗ್ಗೆ 6ರಿಂದ 8ಗಂಟೆಯೊಳಗೆಲ್ಲಾ ತಲುಪಿಸ ಬೇಕಾಗಿದೆ. ಸ್ವಲ್ಪ ತಡವಾದರೂ ಮನೆಯವರು ಕರೆ ಮಾಡಿ ಪತ್ರಿಕೆ ಬಯಸು ತ್ತಾರೆ. ನಮಗೆ ಪತ್ರಿಕೆ ಬೇಗನೇ ಬೇಕು ಎನ್ನುವವರೇ ಹೆಚ್ಚು ಎಂದು ಹೇಳಿದ ಮಡಿಕೇರಿಯ ಜನಪ್ರಿಯ ನ್ಯೂಸ್ ಏಜನ್ಸಿಯ ಟಿ. ಜಿ. ಸತೀಶ್, ಪತ್ರಿಕೆಗಳನ್ನು ನಿಯತ್ತಾಗಿ ವಿತರಿಸಿದರೂ ಕೆಲವರು 3-4 ತಿಂಗಳ ಪತ್ರಿಕೆಯ ಹಣವನ್ನೇ ನೀಡುವುದಿಲ್ಲ. ಆದರೆ ಪತ್ರಿಕೆಗಳೂ ಈಗ ಸಮಸ್ಯೆಯಲ್ಲಿರುವುದರಿಂದಾಗಿ ಪತ್ರಿಕೆಗಳಿಗೆ ವಿತರಕರಾಗಿ ನಾವು ಕೊಡುವ ಹಣ ಸರಿಯಾದ ಸಮಯಕ್ಕೆ ನೀಡಲೇಬೇಕು. ಇಲ್ಲದಿದ್ದರೆ ಬಾಕಿ ಹಣಕ್ಕೆ ರಾಜ್ಯಮಟ್ಟದ ಪತ್ರಿಕಾ ಸಂಸ್ಥೆಗಳು ಹೆಚ್ಚುವರಿ ಬಡ್ಡಿ ಹಾಕುತ್ತಿವೆ. ಆದರೆ ಈ ರೀತಿ ಹಣ ನೀಡಲು ನಮಗೆ ಎಲ್ಲಾ ಓದುಗರಿಂದ ಹಣ ಸಂಗ್ರಹವಾಗುತ್ತಿಲ್ಲ. ಪತ್ರಿಕಾ ವಿತರಕರ ಸಮಸ್ಯೆಯೇ ಕೆಲವು ಓದುಗರಿಗೆ ಅರ್ಥವಾಗುತ್ತಿಲ್ಲ. ನಿಜಕ್ಕೂ ಇದು ನೋವಿನ ವಿಚಾರ ಎಂದೂ ಸತೀಶ್ ಹೇಳಿಕೊಂಡರು. ಹಾಲು ಸೇರಿದಂತೆ ಹಲವು ಅಗತ್ಯ ವಸ್ತುಗಳಿಗೆ ಜನರು ಮುಂಗಡ ಹಣ ಕೊಡುತ್ತಾರೆ. ಆದರೆ ದೈನದಿಂದ ಅನಿವಾರ್ಯತೆಯಾದ ಪತ್ರಿಕೆ ವಿಚಾರಕ್ಕೆ ಮಾತ್ರ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಡಿಕೇರಿಯಲ್ಲಿ ಮುಂಗಡ ಹಣವನ್ನು ಪಡೆಯುವ ವ್ಯವಸ್ಥೆ ಅನಿವಾರ್ಯವಾಗಿದೆ. ಸಕಾಲಿಕ ಹಣ ನೀಡಿ ಸಹಕರಿಸಿ ಎಂದೂ ಸತೀಶ್ ಓದುಗರನ್ನು ವಿನಂತಿಸುತ್ತಾರೆ. ಮಳೆಗಾಲದಲ್ಲಿ ಬಿರುಗಾಳಿ ಮಳೆ ನಡುವೇ ಮತ್ತೊಬ್ಬರಿಗೆ ಸೇರಿದ ಜಾಗದಲ್ಲಿ ಪತ್ರಿಕೆ ವಿಂಗಡಿಸುವ ಕೆಲಸ ಮಾಡಬೇಕು. ಮೈಸೂರು ಸೇರಿದಂತೆ ಹಲವಾರು ಊರುಗಳಲ್ಲಿ ಶಾಸಕರು ಪತ್ರಿಕಾ ವಿತರಕರಿಗೆ ಪ್ರತ್ಯೇಕವಾಗಿ ಶೆಲ್ಟರ್ ನಿರ್ಮಿಸಿಕೊಟ್ಟಿದ್ದಾರೆ. ಕೊಡಗಿನ ಪ್ರಮುಖ ನಗರಗಳಲ್ಲಿಯೂ ಇಂಥ ಪತ್ರಿಕಾ ವಿತರಕರಿಗಾಗಿ ಶೆಲ್ಟರ್ ಬೇಕಾಗಿದೆ ಎಂದೂ ಸತೀಶ್ ಮನವಿ ಮಾಡಿದರು. ಗೋಣಿಕೊಪ್ಪಲುವಿನಲ್ಲಿ 10 ವರ್ಷ ಗಳಿಂದ ಪತ್ರಿಕೆಗಳನ್ನು ವಿತರಿಸುತ್ತಿರುವ ಎನ್. ಯು. ವಸಂತ್ ಮುಂಜಾನೆ 3 ಗಂಟೆಗೆಲ್ಲಾ ನಿದ್ದೆಯಿಂದ ಎದ್ದು 4 ಗಂಟೆಗೆ ಪತ್ರಿಕೆ ವಿಂಗಡಿಸುವ ಕೆಲಸಕ್ಕೆ ಬರುತ್ತಾರೆ. ಬೆಳಕು ಮೂಡುವ ಮುನ್ನವೇ ಗೋಣಿಕೊಪ್ಪಲುವಿನಿಂದ 49 ಕಿ.ಮೀ. ದೂರದ ಕುಟ್ಟ ಗ್ರಾಮದವರೆಗೂ ಪತ್ರಿಕೆ ವಿತರಿಸಲು ಸಾಗುತ್ತಾರೆ. ಹೊಸಬರು ಪತ್ರಿಕೆ ವಿತರಣೆಗೆ ಬರುತ್ತಿಲ್ಲ. ಬೆಳಕಿಗೂ ಮುನ್ನವೇ ನಿದ್ದೆಯಿಂದ ಎದ್ದು ಕೆಲಸ ಮಾಡುವ ಮನಸ್ಥಿತಿಯ ಹೊಸ ತಲೆಮಾರಿನವರು ಕಡಿಮೆ ಯಾಗುತ್ತಿದ್ದಾರೆ ಎಂಬ ನೋವು ವಸಂತ್ ಅವರದ್ದು. ಕೇರಳ ಗಡಿ ಬಂದ್ ಆಗಿರುವುದರಿಂದಾಗಿ ಗೋಣಿಕೊಪ್ಪಲುವಿಗೆ ಬರುತ್ತಿದ್ದ 500ರಷ್ಟು ಮಲಯಾಳ ಪತ್ರಿಕೆಗಳು ಲಾಕ್‍ಡೌನ್ ದಿನಗಳಲ್ಲಿ ಬರುತ್ತಿಲ್ಲ. ಮಲಯಾಳ ಓದುಗರಿಗೆ ಪತ್ರಿಕೆಗಳು ದೊರಕದಂತಾಗಿದೆ ಎಂದೂ ಅವರು ಹೇಳಿದರು. ಸೋಮವಾರಪೇಟೆಯಲ್ಲಿ 30 ವರ್ಷಗಳಿಂದ ಪತ್ರಿಕಾವಿತರಕರಾಗಿರುವ ಬಿ. ಪಿ. ಶಿವಕುಮಾರ್ ಹೇಳುವಂತೆ, ಮುಚ್ಚಿದ್ದ ಅಂಗಡಿಗಳ ಮಾಲೀಕರು ಹಣ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ನಮ್ಮಂತ ವಿತರಕರು ಸಾವಿರಾರು ರೂಪಾಯಿ ಅನ್ಯಾಯವಾಗಿ ಕಳೆದುಕೊಳ್ಳುವ ದುಸ್ಥಿತಿ ಬಂದೊದಗಿದೆ. ಸೋಮಾರಿತನ ಮಾಡದೇ ರಜೆಯಿಲ್ಲದೇ ದಿನಾ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಕೆಲಸ ಮಾಡಬೇಕಾದ ಕ್ಷೇತ್ರವಿದು. ಹೀಗಾಗಿ ಪತ್ರಿಕೆ ಹಂಚಲು ಹೊಸಬರು ಈ ವೃತ್ತಿಗೆ ಬರುತ್ತಿಲ್ಲ. ಲಾಕ್‍ಡೌನ್ ಮತ್ತು ಕೊರೊನಾ ಭೀತಿಯಿಂದಾಗಿ ಕೆಲವರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸಲು ಮುಂದಾಗಿಲ್ಲ. ಇದೂ ಸಮಸ್ಯೆಯಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಪತ್ರಿಕಾವಿತರಕರಾಗಿರುವ ಆರ್. ಚಂದ್ರಯ್ಯ ಪ್ರತಿಕ್ರಿಯಿಸಿ, ಲಾಕ್‍ಡೌನ್ ದಿನಗಳಲ್ಲಿ ಅಂಗಡಿಗಳಿಗೆ ಹಾಕಿದ ಪತ್ರಿಕೆಗಳಿಗೆ ದುಡ್ಡು ಸಿಗುವುದು ಕಷ್ಟವಾಗುತ್ತಿದೆ. ಮೊದಲೆಲ್ಲಾ ಓದುಗರ ಬಳಿ 1-2 ಬಾರಿ ಹೋದರೆ ಹಣ ಸಿಗುತ್ತಿತ್ತು. ಈಗ 4-5 ಬಾರಿ ಹೋಗಿ ಪೇಪರ್ ಹಣ ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು. ನಮ್ಮ ನೋವನ್ನೂ ಅರ್ಥ ಮಾಡಿಕೊಂಡು ಓದಿದ ಪತ್ರಿಕೆಗಳ ಹಣ ನೀಡಬೇಕು. ನಮ್ಮನ್ನೂ ಸಂಕಷ್ಟದಿಂದ ಪಾರು ಮಾಡಬೇಕು ಎಂಬುದು ಚಂದ್ರಯ್ಯ ಕೋರಿಕೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‍ನಲ್ಲಿ ಘೋಷಿಸಿದ್ದ ಪತ್ರಿಕಾ ವಿತರಕರಿಗಾಗಿ ಆರೋಗ್ಯ ವಿಮೆ ಇನ್ನೂ ಜಾರಿಗೆ ಬಂದಿಲ್ಲ. ಹೀಗಾಗಿ ಮಳೆ, ಗಾಳಿ ಧೂಳಿ ನಿಂದಾಗಿ ಆರೋಗ್ಯ ಹದಗೆಟ್ಟ್ಟು ಸಮಸ್ಯೆಯಾಗುತ್ತಿದೆ. ಲಾಕ್‍ಡೌನ್‍ನಿಂದಾಗಿ ಸರ್ಕಾರಿ ಇಲಾಖೆಗಳು ವರ್ಷಕ್ಕೊಮ್ಮೆ ಪಾವತಿಸುವ ಹಣ ಕೂಡ ಲಭಿಸಿಲ್ಲ. ಸುಮಾರು 4.50 ಲಕ್ಷ ರೂ. ಸರ್ಕಾರಿ ಇಲಾಖೆಗಳಿಂದಲೇ ಪತ್ರಿಕಾ ಬಾಕಿಯಿದೆ. ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ ಎಂದೂ ಸತೀಶ್ ಪ್ರಶ್ನಿಸುತ್ತಾರೆ.

ಕೊನೇ ಹನಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪತ್ರಿಕೆಗಳಿಂದ ಯಾವುದೇ ರೀತಿಯಲ್ಲಿಯೂ ಸೋಂಕು ವ್ಯಾಪಿಸುವುದಿಲ್ಲ ಎಂದಿದ್ದಾರೆ. ಆರೋಗ್ಯ ಅಧಿಕಾರಿಗಳೂ ಇದನ್ನೇ ಖಚಿತಪಡಿಸಿದ್ದಾರೆ. ಹೀಗಿದ್ದರೂ ಕೆಲವರು ಅನಗತ್ಯ ಆತಂಕದಿಂದಾಗಿ ಪತ್ರಿಕೆಗಳಿಂದ ದೂರವಾಗಿರುವುದು ವಿಪರ್ಯಾಸವೇ ಸರಿ. ಜಗತ್ತಿನ ಸುದ್ದಿಗಳನ್ನು ದಿನಾ ಮನೆ ಬಾಗಿಲಿಗೆ ತರುವ ಪತ್ರಿಕಾ ವಿತರಕರಿಗೆ ದಿನಸಿ ಸಿಕ್ಕಿದೆಯೇ ಎಂದು ಯಾರೂ ಕೇಳಿಲ್ಲ. ದಿನಸಿ ಕಿಟ್‍ಗಳನ್ನು ಪತ್ರಿಕಾ ವಿತರಕರಿಗೆ ಯಾರೂ ತಲುಪಿಸಿಲ್ಲ. ಸಮಸ್ಯೆಯ ಸುಳಿಯಲ್ಲಿದ್ದರೂ ಮನದ ನೋವು ಮರೆತು ತಮ್ಮ ಸುಖವನ್ನೂ ಬದಿಗಿಟ್ಟು ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುತ್ತಿರುವ ವಿತರಕರಿಗೆ ಓದುಗರಾಗಿ ನೀವು ನೀಡಲೇಬೇಕಾದ ಹಣವನ್ನು ತಡಮಾಡದೇ ನೀಡಿ. ಹಣ ನೀಡುª ಸಂದರ್ಭ ಪತ್ರಿಕಾ ವಿತರಕರ ಕ್ಷೇಮವನ್ನೂ ಹೇಗಿದ್ದೀರಿ. ಎಂದು ವಿಚಾರಿಸಿಕೊಂಡರೆ ಈ ನಿತ್ಯ ಕಾಯಕ ಯೋಗಿಗಳ ಮನಸ್ಸಿಗೂ ಸಮಾಧಾನವಾದೀತು.