ಗೋಣಿಕೊಪ್ಪಲು, ಮೇ 24: ಮೊನ್ನೆ ಮೊನ್ನೆಯಷ್ಟೆ ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳನ್ನು ಕಬಳಿಸುತ್ತಿದ್ದ ಹುಲಿರಾಯನನ್ನು ಸೆರೆಹಿಡಿದ ಪ್ರಕರಣದ ಬಳಿಕ ಈ ಉಪಟಳ ಕಡಿಮೆಯಾಯಿತು ಎಂದು ಜನತೆ ನಿಟ್ಟುಸಿರು ಬಿಡುತ್ತಿದ್ದ ಬೆನ್ನಲ್ಲೇ ಇದೀಗ ಮೊತ್ತೊಂದು ಹುಲಿದಾಳಿ ಪ್ರಕರಣ ನಡೆದಿದ್ದು ಮತ್ತೆ ಆತಂಕ ಸೃಷ್ಟಿಯಾಗಿದೆ.ಪೊನ್ನಂಪೇಟೆ ಸನಿಹದ ಚಿಕ್ಕಮುಂಡೂರುವಿನಲ್ಲಿ ನಿವೃತ್ತ ಪೋಸ್ಟ್ ಮಾಸ್ಟರ್ ಕಳ್ಳಿಚಂಡ ಜಗದೀಶ್ (ರಘು) ಅವರಿಗೆ ಸೇರಿದ ಹಸುವನ್ನು ವ್ಯಾಘ್ರ ಸನ್ನಿಹದ ತೋಟದಲ್ಲಿ ಕೊಂದುಹಾಕಿರುವ ಘಟನೆ ನಡೆದಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮತ್ತೆ ಈ ವಿಭಾಗದಲ್ಲಿ ಜನತೆ ಆತಂಕಪಡುವಂತಾಗಿದೆ.ಕೆಲವು ದಿನಗಳ ಹಿಂದೆಯಷ್ಟೆ ಬೆಳ್ಳೂರು (ಮೊದಲ ಪುಟದಿಂದ) ಗ್ರಾಮದಲ್ಲಿ ಹುಲಿಯೊಂದನ್ನು ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ಮೂಲಕ ಸೆರೆಹಿಡಿದಿತ್ತು. ಇದರಿಂದ ಜಾನುವಾರುಗಳನ್ನು ಕಬಳಿಸುತ್ತಿದ್ದ ವನ್ಯಮೃಗದ ಕಾಟ ತಪ್ಪಿತೆಂದು ಜನತೆ ಹಾಗೂ ಅರಣ್ಯ ಇಲಾಖೆ ಕೂಡ ಭಾವಿಸಿತ್ತು. ಆದರೆ ಮತ್ತೆ ಮರುಕಳಿಸಿರುವ ಪ್ರಕರಣ ಈ ವ್ಯಾಪ್ತಿಯಲ್ಲಿ ಮತ್ತೊಂದು ಹುಲಿ ಇರುವುದನ್ನು ಖಾತರಿಪಡಿಸಿದಂತಾಗಿದೆ. ಘಟನೆ ಸ್ಥಳಕ್ಕೆ ವೀರಾಜಪೇಟೆ ಡಿಎಫ್‍ಓ ರೋಶನಿ, ತಿತಿಮತಿ ಎಸಿಎಫ್ ಶ್ರೀಪತಿ, ಪೊನ್ನಂಪೇಟೆ ಆರ್‍ಎಫ್‍ಓ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು. ಎರಡು ದಿನದ ಹಿಂದೆ ಈ ದಾಳಿ ನಡೆದಿದ್ದು, ಸನಿಹದ ತೋಟದಲ್ಲಿ ಕಳೇಬರ ಪತ್ತೆಯಾಗಿದೆ. ಪಶು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ನಾಗರಹೊಳೆಯ ವೈದ್ಯ ಮುಜೀಬ್ ಪರಿಶೀಲಿಸಿದರು.

ಕ್ಯಾಮರಾ ಅಳವಡಿಕೆ: ಸ್ಥಳದಲ್ಲಿ ತಂಡ

ಮತ್ತೊಮ್ಮೆ ಜಾನುವಾರುವಿನ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಈ ಪ್ರಾಣಿಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಇದರೊಂದಿಗೆ ಸ್ಥಳದ ವ್ಯಾಪ್ತಿಯಲ್ಲಿ ಹಲವು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸನಿಹದಲ್ಲಿ ದೇವರ ಕಾಡೊಂದು ಇದ್ದು, ಇದರ ಜಾಡುಪತ್ತೆಯಾಗಿಲ್ಲ. ಡೆಹರಾಡೂನ್‍ನ ವೈಲ್ಡ್ ಲೈಫ್ ಇನ್ಸಿಟಿಟ್ಯೂಟ್‍ನ ತಜ್ಞರಾದ ಚೆಕ್ಕೆರ ತಮ್ಮಯ್ಯ ಶೌರ್ಯ, ಕಿರಿಯಮಾಡ ದಿಲನ್ ಮಂದಣ್ಣ ಅವರುಗಳ ನೇತೃತ್ವದಲ್ಲಿ ಕ್ಯಾಮರಾ ಅಳವಡಿಸಲಾಗಿದೆ.

ಡಿವೈಆರ್‍ಎಫ್‍ಓ ದಯಾನಂದ ಸಂಜಿತ್, ಚೊಟ್ಟೆಯಂಡಮಾಡ ಬೋಪಣ್ಣ, ಗಣೇಶ್, ದಿವಾಕರ್, ಜಡಿಮನಿ, ಪೊನ್ನಂಪೇಟೆಯ ಆರ್‍ಆರ್‍ಟಿ ತಂಡ ವೈಲ್ಡ್ ಲೈಫ್ ವಾರ್ಡನ್ ಕುಂಞಂಡ ಬೋಸ್ ಮಾದಪ್ಪ ಅವರುಗಳು ಕಾರ್ಯಾಚರಣೆಗೆ ಸಹಕರಿಸುತ್ತಿರುವುದಾಗಿ ಡಿಎಫ್‍ಓ ರೋಶಿನಿ ತಿಳಿಸಿದ್ದಾರೆ.

-ಹೆಚ್.ಕೆ. ಜಗದೀಶ್, ಚನ್ನನಾಯಕ್, ಸುದ್ದಿಪುತ್ರ