ಕಣಿವೆ, ಮೇ 24 : ಕೊರೊನಾದಿಂದ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಹಲವರು ಹಲವು ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಖಾಸಗಿ ಆರೋಗ್ಯ ಪರೀಕ್ಷಾಲಯಗಳಲ್ಲಿ ಪ್ರವೇಶ ದ್ವಾರದಲ್ಲೇ ರೋಗಿಗಳಿಗೆ ಸ್ಯಾನಿಟೈಸರ್ ಕೊಟ್ಟು ಒಬ್ಬೊಬ್ಬರಾಗಿ ಒಳ ಕರೆದು ಆರೋಗ್ಯ ಪರಿಶೀಲಿಸುವುದು ಕೂಡ ಸಾಮಾನ್ಯ. ಆದರೆ ಕುಶಾಲನಗರದ ಐಬಿ ರಸ್ತೆಯಲ್ಲಿ ಇರುವ ಚಿಕಿತ್ಸಾಲಯದಲ್ಲಿ ಡಾ.ಗೋವಿಂದ ಭಟ್ ಹಾಗು ಅವರ ಪುತ್ರ ದಂತವೈದ್ಯ ಡಾ.ರಾಮ ಅವರುಗಳು ಚಿಕಿತ್ಸಾಲಯಕ್ಕೆ ಹೊಸ ರೂಪ ಕೊಟ್ಟಿದ್ದಾರೆ.
ಚಿಕಿತ್ಸಾಲಯಕ್ಕೆ ಬರುವ ಯಾವುದೇ ರೋಗಿ ವೈದ್ಯರನ್ನು ನೇರವಾಗಿ ಮುಖಾಮುಖಿ ಭೇಟಿಯಾಗುವಂತಿಲ್ಲ. ರೋಗಿ ಮತ್ತು ವೈದ್ಯರ ನಡುವೆ ಗ್ಲಾಸ್ ಮತ್ತು ಪ್ಲಾಸ್ಟಿಕ್ನಿಂದ ಸೀಲ್ ಡೌನ್ ಮಾಡಲಾಗಿದೆ. ರೋಗಿ ಆಸ್ಪತ್ರೆಯ ಒಳಗೆ ಹೋದೊಡನೆ ಮೊದಲು ಅವರನ್ನು ಮಾತನಾಡಿಸಿ ಅವರು ಹೇಳಿಕೊಳ್ಳುವ ದೈಹಿಕ ಬಾಧೆಗನುಸಾರ ಅವರಿಗೆ ಕೇವಲ ಗುಳಿಗೆಗಳನ್ನು ಮಾತ್ರ ನೀಡಲಾಗುತ್ತದೆ. ಆ ಗುಳಿಗೆಗಳನ್ನು ಹೇಗೆ ನೀಡುತ್ತಾರೆ ಎಂದರೆ, ಚಿಕಿತ್ಸಾಲಯದ ಕಿಟಕಿಯೊಂದರಿಂದ ಮುಂಬದಿಯ ಪ್ರವೇಶದ್ವಾರದವರೆಗೆ ನಾಲ್ಕು ಇಂಚಿನ ಪೈಪ್ ಒಂದನ್ನು ಕೆಳಮುಖವಾಗಿ ಕಟ್ಟಿ ಅದರೊಳಗೆ ಔಷಧಿಯ ಬಾಟಲಿ ಅಥವಾ ಗುಳಿಗೆಗಳನ್ನು ಬಿಡಲಾಗುತ್ತದೆ. ವೈದ್ಯಕೀಯ ದರ ಮತ್ತು ಔಷಧಿಗೆ ತಗಲುವ ವೆಚ್ಚವನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಮಾಡುವ ಅವಕಾಶವಿದೆ. ಮೊಬೈಲ್ ಬಳಕೆ ಅರಿಯದ ಹಳ್ಳಿಯ ಜನರು ಬಂದರೆ ಅವರಿಗೆ ಔಷಧಿಯ ವೆಚ್ಚ ಬರೆದ ಚೀಟಿಯೊಂದನ್ನು ಕೊಟ್ಟು ಅಲ್ಲೇ ಸನಿಹದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕಿನ ವೈದ್ಯರ ಖಾತೆಗೆ ತುಂಬಿಸಿಕೊಳ್ಳಲಾಗುತ್ತದೆ.
ನಮ್ಮಲ್ಲಿ ಬರುವ ಎಲ್ಲಾ ರೋಗಿಗಳನ್ನು ಇನ್ಪ್ರಾರೆಡ್ ಫೆÇೀರೆಡ್ ಥರ್ಮಾಮೀಟರ್ ನಿಂದ ಸ್ಕ್ಯಾನ್ ಮಾಡಿ ಒಳ ಕರೆದು ದಾಖಲಾತಿ ಪುಸ್ತಕಕ್ಕೆ ಹೆಸರು ಹಾಗು ಸಹಿ ಹಾಕಿಸಿದ ನಂತರ ಸ್ಯಾನಿಟೈಸರ್ ಕೊಟ್ಟು ಕೈ ಸ್ವಚ್ಛಗೊಳಿಸಲಾಗುತ್ತದೆ ಎನ್ನುತ್ತಾರೆ ಡಾ. ರಾಮಾ ಅಲ್ಲಿ ಬರುವ ರೋಗಿಗಳಿಗೆ ಮಾಸ್ಕ್ ಬಳಸುವುದರಿಂದ ಹಿಡಿದು ಕೊರೊನಾ ಮುನ್ನೆಚ್ಚರಿಕೆ ವಹಿಸುವ ಮಾಹಿತಿ ನೀಡಲಾಗುತ್ತದೆ.
- ಕೆ.ಎಸ್. ಮೂರ್ತಿ