ಮಡಿಕೇರಿ, ಮೇ 22: ಕುಶಾಲನಗರದ ತ್ಯಾಗತ್ತೂರು ಗಿರಿಜನ ಹಾಡಿಯ 40 ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಕಡು ಬಡತನದಲ್ಲಿರುವವರು ಸಮಿತಿಯ ಗಮನ ಸೆಳೆದರೆ ಸಮಿತಿ ವತಿಯಿಂದ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಪುಸ್ತಕ ಹಾಗೂ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಉನ್ನತ ವ್ಯಾಸಾಂಗಕ್ಕೆ ಅಗತ್ಯವಿರುವ ತರಬೇತಿ ಮತ್ತು ಸಲಹೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ಎ.ಪಿ. ದೀಪಕ್ ಮಾತನಾಡಿ, ಯುವಕರು ಒಗ್ಗಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು, ಸಮಿತಿ ವತಿಯಿಂದ ಪ್ರತಿ ತಿಂಗಳು ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು. ಸರ್ಕಾರದಿಂದ ದೊರಕುವ ಮೂಲಭೂತ ಸೌಕರ್ಯಗಳನ್ನು ಹೋರಾಟದ ಮೂಲಕ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸ್ತ್ರೀ ರೋಗ ತಜ್ಞೆ ಡಾ. ಸೌಮ್ಯ ಪ್ರಕಾಶ್, ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ಸೋಮೇಶ್, ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಪಿ. ಶಿವಕುಮಾರ್ ಹಾಜರಿದ್ದರು.