ಮಡಿಕೇರಿ, ಮೇ 22: ಜಿಲ್ಲಾ ಸರ್ವ ಬೆಳೆಗಾರರÀ ಸಂಘಟನೆಗಳ ನಿಯೋಗದಿಂದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರಿಗೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ನೀಡಲಾಯಿತು

ಬೆಳೆಗಾರರು ಉಪಯೋಗಿಸುವ 10 ಹೆಚ್.ಪಿ. ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ಕಲ್ಪಿಸಲು ಸಚಿವರಲ್ಲಿ ಒತ್ತಾಯಿಸಿದರು. ಕಂದಾಯ ಇಲಾಖೆಯ ರೈತರ ಅರ್ಜಿ ವಿಲೇವಾರಿಯಾಗದೆ ತೊಂದರೆ ಯಾಗುತ್ತಿದ್ದು, ಇದರ ಶೀಘ್ರ ವಿಲೇವಾರಿಗೂ ಕೂಡ ಮನವಿ ಮಾಡಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸಕಾರಾತ್ಮಕ ಸ್ಪಂದನೆಯನ್ನು ಉಸ್ತುವಾರಿ ಸಚಿವರು ನೀಡಿದರು.

ಸಂಸದರ ಭರವಸೆ : ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆಯುತ್ತಿದ್ದ ಸಂದರ್ಭ ಮಧ್ಯಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ ಅವರು ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಬೆಳೆಗಾರರ ನಿಯೋಗವನ್ನು ಕರೆದುಕೊಂಡು ಹೋಗಿ, ಸಮಾಲೋಚಿಸಿ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು.

ನಿಯೋಗದಲ್ಲಿ ಸರ್ವ ಬೆಳೆಗಾರ ಸಂಘಟನೆಗಳ ಸಂಸ್ಥೆ ಸಂಚಾಲಕರಾಗಿರುವ ಕೊಡಗು ಪ್ಲಾಂಟರ್ಸ್ ಅಸೋಸಿಯೆಷನ್ ಅಧ್ಯಕ್ಷ ಮಾತಂಡ ಕಾರ್ಯಪ್ಪ, ಕ್ಯಾಂಪ್‍ಕೋ ಸಂಚಾಲಕ ಕೆ.ಕೆ. ವಿಶ್ವನಾಥ್, ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಆಣ್ಣೀರ ಹರೀಶ್ ಮಾದಪ್ಪ, ಕಾರ್ಯದರ್ಶಿ ಬೊಳ್ಳೆರ ರಾಜ ಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಕಾಳಿಮಾಡ ತಮ್ಮು ಮುತ್ತಣ್ಣ, ಸೋಮವಾರಪೇಟೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಬೋಪಣ್ಣ, ಶನಿವಾರಸಂತೆ ಬೆಳೆಗಾರರ ಸಂಘದ ಪುಟ್ಟಸ್ವಾಮಿ ಇದ್ದರು.