ಮಡಿಕೇರಿ, ಮೇ 22: ಮಡಿಕೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಕುಶಾಲನಗರ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಈ ಬಾರಿ ಏರಿಕೆಯಾಗಿರುವ ಆಸ್ತಿ ತೆರಿಗೆಯನ್ನು ಹೆಚ್ಚಿಸದಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.ಮೂರು ವರ್ಷಕ್ಕೊಮ್ಮೆ ಸರಕಾರದ ಆದೇಶದಂತೆ ಮೂರು ಪಟ್ಟಣ ಪಂಚಾಯಿತಿಗಳು ಹಾಗೂ ಮಡಿಕೇರಿ ನಗರಸಭೆಗೆ ಈ ಬಾರಿ ಶೇ. 15 ರಿಂದ 20 ರಷ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏರಿಕೆ ಮಾಡಲಾಗಿತ್ತು.ಈ ಬಗ್ಗೆ "ಶಕ್ತಿ"ಯಲ್ಲಿ ವಿವರವಾಗಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಗಳಿಗೆ ಇಂತಹ ಸಂದರ್ಭದಲ್ಲಿ ಯಾವ ರೀತಿಯಲ್ಲಿ ತೆರಿಗೆದಾರರು ಹೆಚ್ಚಿನ ಹಣವನ್ನು ಪಾವತಿಸುತ್ತಾರೆ ಎಂದು ಪ್ರಶ್ನಿಸಿದರಲ್ಲದೆ ತಕ್ಷಣವೇ ಅದನ್ನು ರದ್ದುಪಡಿಸಿ ಹಿಂದಿನ ಸಾಲಿನ ತೆರಿಗೆಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಬಗ್ಗೆ ಬೆಂಗಳೂರಿನಲ್ಲಿ ಸಂಬಂಧಿಸಿದವರೊಂದಿಗೆ ಚರ್ಚಿಸಿ ಮಾರ್ಪಾಡು ಮಾಡುವಂತೆ ತಾವು ಗಮನ ಹರಿಸುವುದಾಗಿ ಈ ಸಂದರ್ಭ ಸಚಿವರು ಭರವಸೆಯಿತ್ತರು. ಸಚಿವರೊಂದಿಗೆ ಇದ್ದ ಮಡಿಕೇರಿ ಶಾಸಕ ಎಂಪಿ ಅಪ್ಪಚ್ಚುರಂಜನ್ ಅವರು ಕೂಡ ಚೇಂಬರ್ ಆಫ್ ಕಾಮರ್ಸ್‍ನ ಮನವಿಗೆ ಧ್ವನಿಗೂಡಿಸಿದರಲ್ಲದೆ ಇಡೀ ರಾಜ್ಯದಲ್ಲಿ ತೆರಿಗೆ ಹೇರಿಕೆಯಾಗದಂತೆ ಗಮನ ಹರಿಸಬೇಕೆಂದು ಸಚಿವರಲ್ಲಿ ಕೋರಿದರು.
(ಮೊದಲ ಪುಟದಿಂದ) ಚೇಂಬರ್ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಚಿದ್ವಿಲಾಸ್, ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್, ಸಂಘಟನಾ ಕಾರ್ಯದರ್ಶಿ ಮೋಂತಿ ಗಣೇಶ್, ಸೋಮವಾರಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರಮೋದ್, ಮಡಿಕೇರಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಧನಂಜಯ್ ಹಾಗೂ ಇತರರು ಪಾಲ್ಗೊಂಡಿದ್ದರು.
ಇದಕ್ಕೆ ಮೊದಲು ಕುಶಾಲನಗರದ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ಕಂದಾಯವನ್ನು ಶೇ. 18 ರಿಂದ 21ಕ್ಕೆ ಹೆಚ್ಚಿಸಿರುವುದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪ್ರಮುಖರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಮನವಿ ಸಲ್ಲಿಸಿದರು.
ಪ್ರಸ್ತುತ ಕುಶಾಲನಗರ ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿಗಳ ಉಸ್ತುವಾರಿಯಲ್ಲಿದ್ದು ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷಗಳ ಕಾಲ ತೆರಿಗೆ ಮನ್ನಾ ಮಾಡುವಂತೆ ಮನವಿ ಮಾಡಿದ್ದಾರೆ.
ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಂಡು ನಮಗೆ ಸಹಾಯ ಹಸ್ತ ಚಾಚಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಉಪಾಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್, ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅಮೃತ್‍ರಾಜ್ ಮತ್ತು ಸ್ಥಳೀಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕ ಅಪ್ಪಚ್ಚುರಂಜನ್ ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.