ಸೋಮವಾರಪೇಟೆ, ಮೇ 22: ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಂತ್ರಸ್ತರ ಪುನರ್ವಸತಿ ಕಾಮಗಾರಿಯಲ್ಲಿ ಕೆಲವೊಂದು ಮನೆಗಳ ನಿರ್ಮಾಣ ಕಳಪೆಯಾಗಿದೆ ಎಂದು ಛಾಯಾಚಿತ್ರ ಸಹಿತ ಆರೋಪ ಮಾಡಿದ್ದ ಸಂಘಟನೆಯ ಪದಾಧಿಕಾರಿಗಳ ವಿರುದ್ಧವೇ ಉಸ್ತುವಾರಿ ಸಚಿವರು ಗರಂ ಆದ ಘಟನೆ ನಡೆಯಿತು.

ಇಂದು ಸಂಜೆ ಜಂಬೂರು ಗ್ರಾಮಕ್ಕೆ ಭೇಟಿ ನೀಡಿದ ಸಚಿವರನ್ನು ನಮ್ಮ ಕೊಡಗು ಚಾರಿಟೇಬಲ್‍ನ ಪದಾಧಿಕಾರಿಗಳು ಭೇಟಿ ಮಾಡಿ, ಕೆಲವೊಂದು ಮನೆಗಳ ಕಾಮಗಾರಿ ಕಳಪೆಯಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದರು.

ಪ್ರಾರಂಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸಂಘಟನೆಯ ಮಂದಿ ಕಳಪೆ ಕಾಮಗಾರಿಯೆಂದು ಆರೋಪಿಸಿದ ಮನೆಯವರೆಗೂ ಕಾಲ್ನಡಿಗೆಯಲ್ಲಿಯೇ ತೆರಳಿ ವೀಕ್ಷಿಸಲು ಮುಂದಾದರು. ಈ ಸಂದರ್ಭ ತಳಪಾಯ ಮತ್ತು ಗೋಡೆಯ ನಡುವೆ ಹೊಸದಾಗಿ ಗಾರೆ ಹಾಕಿರುವದು ಕಂಡುಬಂತು.

ಈ ಬಗ್ಗೆ ವಿವರಣೆ ನೀಡಿದ ಸಂಘಟನೆಯ ಪದಾಧಿಕಾರಿಗಳು, ಮೊನ್ನೆ ಖುದ್ದು ವೀಕ್ಷಣೆ ಮಾಡಿದ ಸಂದರ್ಭ ಇಲ್ಲಿ ಮರದ ಬೇರಿತ್ತು. ಅದನ್ನು ತೆಗೆಯದೇ ಇದೀಗ ಪ್ಲಾಸ್ಟರಿಂಗ್ ಮಾಡಿದ್ದಾರೆ ಎಂದರು. ನೂತನವಾಗಿ ಮಾಡಿರುವ ಪ್ಲಾಸ್ಟರಿಂಗ್‍ನ್ನು ಒಡೆಯುವಂತೆ ಸಚಿವರು ಸೂಚಿಸಿದರು. ನಂತರ ಒಳಭಾಗದಲ್ಲಿ ಪರಿಶೀಲಿಸಿದ ಸಂದರ್ಭ ಮರದ ಬೇರುಗಳು ಕಂಡುಬರಲಿಲ್ಲ. ಈ ಸಂದರ್ಭ ದೂರುದಾರರ ಮೇಲೆ ಸಚಿವರು ಗರಂ ಆದರು.

‘ಇಲ್ಲಿನ ಫಲಾನುಭವಿ ಅಲ್ಲದ ಮೇಲೆ ನಿಮಗ್ಯಾಕೆ ಉಸಾಬರಿ? ಸಂತ್ರಸ್ತರೂ ಸಹ ಬುದ್ಧಿವಂತರಿದ್ದಾರೆ. ಕಳಪೆಯಾದರೆ ಅವರೇ ಅಧಿಕಾರಿಗಳ ಗಮನ ಸೆಳೆಯುತ್ತಾರೆ. ಇಲ್ಲದ ತರಲೆ ಮಾಡಿದ್ರೆ ತಪ್ಪಾಗುತ್ತೆ ಹುಷಾರ್ ಎಂದು ಬೆದರಿಸಿದರಲ್ಲದೇ, ಅನಾವಶ್ಯಕ ತೊಂದರೆ ಕೊಟ್ಟರೆ ಕಾನೂನು ಕ್ರಮ ಎದುರಿಸಬೇಕಾಗುತ್ತೆ’ ಎಂದು ಎಚ್ಚರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭವೂ ‘ಕುಶಾಲನಗರದಿಂದ ಬಂದ ವ್ಯಕ್ತಿಗಳು ಇಲ್ಲಿ ಕಳಪೆ ಕಾಮಗಾರಿ ಎಂದು ಆರೋಪ ಮಾಡುತ್ತಿದ್ದಾರೆ. ಯಾವದೋ ವೀಡಿಯೋ, ಫೋಟೋ ತೋರಿಸಿ ಕಳಪೆ ಎನ್ನುತ್ತಿದ್ದಾರೆ’ ಎಂದ ಸಂದರ್ಭ ಯಾವದೋ ವೀಡಿಯೋ ಅಲ್ಲ;ಮೊನ್ನೆ ದಿನ ಇಲ್ಲೇ ತೆಗೆದ ವೀಡಿಯೋ ಎಂದು ಮಾಧ್ಯಮದವರು ಹೇಳಿದರೂ ಸರಿ ಸರಿ ಆಮೇಲೆ ಮಾತಾಡೋಣ ಎಂದು ವಿಷಯಾಂತರ ಮಾಡಿದರು.

ಮೊನ್ನೆಯಷ್ಟೆ ಕಳಪೆ ಕಾಮಗಾರಿಯ ಬಗ್ಗೆ ಸಾಕ್ಷಿ ಸಂಗ್ರಹಿಸಿ ಮಾಧ್ಯಮಗಳಿಗೆ ನೀಡಿದ್ದ ಸಂಘಟನೆಯ ಮಂದಿಯ ಬೆಂಬಲಕ್ಕೆ ಸ್ವತಃ ಸಂತ್ರಸ್ತರೇ ಆಗಮಿಸದಿರುವದು ಅಚ್ಚರಿ ಮೂಡಿಸಿದರೆ, ಮೊನ್ನೆ ಕಂಡುಬಂದ ಕಳಪೆ ಕಾಮಗಾರಿಯನ್ನು ನಿನ್ನೆ ತೇಪೆ ಹಾಕಿ ಮುಚ್ಚಿ, ಇಂದು ಸಚಿವರಿಂದ ಭೇಷ್ ಅನ್ನಿಸಿಕೊಂಡ ಕೆಲ ಅಧಿಕಾರಿಗಳು ಒಳಗೊಳಗೇ ನಗುತ್ತಿದ್ದರು!

- ವಿಜಯ್ ಹಾನಗಲ್