ಕೂಡಿಗೆ, ಮೇ 22: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಟಾನಗೊಳಿಸಿ ಅದರ ಮೂಲಕ ತಮ್ಮ ಗ್ರಾಮಗಳ ಪ್ರಮುಖ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗ್ರಾಮಸ್ಥರ ಸಹಕಾರ ಮುಖ್ಯ ಎಂದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಮನವಿ ಮಾಡಿದ್ದಾರೆ.

ಹೆಬ್ಬಾಲೆಯಲ್ಲಿ ನಡೆದ ಕ್ರಿಯಾಯೋಜನೆ ಕಾರ್ಯಕ್ರಮದಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಗ್ರಾಮಸ್ಥರು ಅನೇಕ ರೀತಿಯ ಕಾಮಗಾರಿಗಳನ್ನು ನಡೆಸಬಹುದಾಗಿದೆ. ಅದರಂತೆ ಈಗಾಗಲೇ ಹೆಬ್ಬಾಲೆಯಲ್ಲಿ ಕೆರೆ ಹೂಳು ಎತ್ತುವಿಕೆ ಸೇರಿದಂತೆ ಹಲವಾರು ಕಾಮಗಾರಿಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಶಾಲೆಯ ತಡೆಗೊಡೆ, ಗ್ರಾಮದ ಉಪ ರಸ್ತೆ, ದೇವಾಲಯ ಬೇಲಿ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳು ಇರುವುದರಿಂದ ಕೆಲಸದ ಹಣ ನೇರವಾಗಿ ಅವರ ಖಾತೆಗೆ ಜಮೆ ಆಗುತ್ತದೆ. ಯೋಜನೆಯ ನೋಂದಣಿ ಮಾಡಿಕೊಂಡು ಗ್ರಾಮದ ಕಾಮಗಾರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.