ಕೂಡಿಗೆ, ಮೇ 21 : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ರೈತರು ಬೆಳೆದ ಬೆಳೆಗೆ ಸಮೀಪದ ಕೈಗಾರಿಕಾ ಪ್ರದೇಶದ ಕಾಫಿ ಘಟಕದ ತ್ಯಾಜ್ಯ ನೀರು ಹರಿದು ಬೆಳೆ ಹಾಳಾಗುತ್ತಿದೆ. ಅಲ್ಲದೆ ಈ ವ್ಯಾಪ್ತಿಯ 39 ಕೊಳವೆ ಬಾವಿಗಳಿಂದ ಬರುವ ನೀರು ವ್ಯವಸಾಯಕ್ಕೆ ಮತ್ತು ಕುಡಿಯಲು ಯೋಗ್ಯವಾಗಿರುವುದಿಲ್ಲ ಎಂದು 30ಕ್ಕೂ ಹೆಚ್ಚು ಮಂದಿ ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ವತಿಯಿಂದ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕಾಫಿ ಘಟಕಕ್ಕೆ ಕಲುಷಿತ ನೀರನ್ನು ತಮ್ಮ ಹಂತದಲ್ಲಿ ಸಂರಕ್ಷಣೆ ಮಾಡಿಕೊಳ್ಳಲು ಹೂಸ ತಂತ್ರಜ್ಞಾನವನ್ನು ಬಳಸಿ ತ್ಯಾಜ್ಯ ನೀರನ್ನು ಸರಿಪಡಿಸುವಂತೆ ಸೂಚನಾ ಪತ್ರವನ್ನು ನೀಡಲಾಗಿದೆ. ವಾಯುಮಾಲಿನ್ಯ ಅಧಿಕಾರಿಗಳಿಗೆ ಹಾಗೂ ತಾಲೂಕು ತಹಶೀಲ್ದಾರರಿಗೆ ಈ ವಿಷಯದ ಬಗ್ಗೆ ಲಿಖಿತವಾಗಿ ಪತ್ರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಲ್ಲಿಸಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಂದು ನೀಡಿರುವ ನೋಟೀಸ್‍ನಲ್ಲಿ ಎಸ್.ಎಲ್.ಎನ್. ಇನ್‍ಸ್ಟಂಟ್ ಕಾಫಿ ಸಂಸ್ಥೆಗೆ ಹಲವಾರು ಬಾರಿ ನೋಟೀಸ್ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಅಕ್ಷೇಪಿಸಿದ್ದಾರೆ. ಸ್ಥಳ ಪರಿಶೀಲನೆ ಸಂದರ್ಭ ಕಲುಷಿತ ನೀರು ಜಮೀನುಗಳಿಗೆ ಹರಿದಿರುವುದು ಹಾಗೂ ಕೊಳವೆ ಬಾವಿಗಳಿಗೆ ತೊಂದರೆ ಆಗಿರುವುದು ಕಂಡುಬಂದಿದ್ದು, ಮೂರು ದಿನಗಳೊಳಗೆ ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿದ್ದಾರೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ರೈತರು ತಮ್ಮ ಬೆಳೆ ಹಾಳಾಗಿರುವ ಬಗ್ಗೆ ಸ್ಥಳ ಪರಿಶೀಲನೆ ಮಾಡುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಕಾಫಿ ಘಟಕದ ಕಾಫಿ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಮರು ಶುದ್ಧೀಕರಿಸಿ ಬಳಕೆ ಮಾಡಿದ ಕಾರಣ ಸಮೀಪದ ರೈತರ ಜಮೀನಿನಲ್ಲಿ ಆ ಕಶ್ಮಲ ನೀರು ಸಮೀಪದ ರೈತರ ಜಮೀನಿನಲ್ಲಿ ಉಕ್ಕುತ್ತಿರುವುದರಿಂದ ರೈತರು ಬೆಳೆಸಲಾದ ಬೆಳೆ, ರಾಸಾಯನಿಕ ಅಂಶ ಈ ನೀರಿನಲ್ಲಿ ಇರುವುದರಿಂದ ಒಣಗುವಂತಾ ಪ್ರಸಂಗ ಎದುರಾಗಿ ಬೆಳೆ ನಷ್ಟವಾಗಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಕೈಗಾರಿಕಾ ಘಟಕದ ತ್ಯಾಜ್ಯ ಅಂಶದ ನೀರು ಸಮೀಪದ ಜಮೀನಿನಲ್ಲಿ ಉಕ್ಕಿದ ಪರಿಣಾಮ ಜಮೀನಿನಲ್ಲಿ ಬೆಳೆಸಲಾದ ಕೆಸ, ಶುಂಠಿ, ಕೇನೆ ಬೆಳೆಗಳು ಬೇಸಿಗೆ ಕಾಲದಲ್ಲಿ ಒಣಗುವ ಹಾಗೆ ಒಣಗಿ ಬೆಂದುಹೋದ ರೀತಿಯಲ್ಲಿ ಜಮೀನಿನ ಬೆಳೆ ಕಾಣುತ್ತಿದೆ. ಅನೇಕ ರೈತರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ನಂತರ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿ ಪ್ರತಿಭಟನೆ ಮಾಡುವುದಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೂಡುಮಂಗಳೂರು ಗ್ರಾಮ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಿಂದು ಮನವಿ ಸಲ್ಲಿಸಿದರು. ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಹಿಂದುಳಿದ ವರ್ಗದವರ ಜಮೀನಿಗೆ ತ್ಯಾಜ್ಯ ನೀರಿನಿಂದ ತೊಂದರೆ ಆಗಿದ್ದು, ಕಾಫಿ ಘಟಕದ ಪರವಾನಗಿ ರದ್ದುಪಡಿಸುವಂತೆ ಕೋರಿದ್ದಾರೆ. ರೈತರಿಗೆ ಪರಿಹಾರ ಹಾಗೂ ತ್ಯಾಜ್ಯ ನೀರು ಹರಿಯದಂತೆ ಕ್ರಮಕ್ಕೆ ಆಗ್ರಹಿಸಿದ್ದಾರೆ.