ಮಡಿಕೇರಿ, ಮೇ 21: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರಿಬ್ಬರ ಮಧ್ಯೆ ನಡೆದ ಹೊಡೆದಾಟದ ಘಟನೆಗೆ ಕೋಮುಬಣ್ಣ ನೀಡಿ ಜಿಲ್ಲೆಯನ್ನು ಸಂಘಪರಿವಾರ ಉದ್ವಿಗ್ನತೆಗೆ ತಳ್ಳಿತು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಆರೋಪಿಸಿದ್ದಾರೆ.

ಶನಿವಾರಸಂತೆಯ ಕೆ.ಆರ್.ಸಿ ವೃತ್ತದ ನೆರೆಮನೆಯವರಾದ ಇರ್ಫಾನ್ ಮತ್ತು ದರ್ಶನ್ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದರು. ಪರಸ್ಪರರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ನಂತರ ಘಟನೆಗೆ ಕೋಮು ಬಣ್ಣ ನೀಡಿದ ಸಂಘಪರಿವಾರವು ಹಾಸನ ಜಿಲ್ಲೆಯ ಸಕಲೇಶಪುರದ ಬಜರಂಗ ದಳದ ಮುಖಂಡ ರಘು ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಂದಿ ಲಾಕ್‍ಡೌನ್ ವೇಳೆ ಜಿಲ್ಲೆಗೆ ಅಕ್ರಮವಾಗಿ ಪ್ರವೇಶಿಸಿ ಭಯಭೀತ ವಾತಾವರಣವನ್ನು ಸೃಷ್ಟಿಸಿದ್ದರು. ಬಳಿಕ ಸಂಘಪರಿವಾರದ ನೂರಾರು ಮಂದಿ ಆಸ್ಪತ್ರೆಯ ಮುಂದೆ ಜಮಾಯಿಸಿರುವುದು ಮತ್ತು ಪೆÇಲೀಸ್ ಠಾಣೆಗೆ ನುಗ್ಗಿ ಪೆÇಲೀಸ್ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆ ತೋರಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಿಂದ ಬಹಿರಂಗವಾಗಿದೆ. ಈ ನಡುವೆ ಮುಸ್ಲಿಮನಿಗೆ ಸೇರಿದ ವಾಹನವೊಂದಕ್ಕೂ ದುಷ್ಕರ್ಮಿಗಳು ಬೆಂಕಿಹಚ್ಚಿದ್ದಾರೆ. ಇದು ಜಿಲ್ಲೆಯಲ್ಲಿ ಕೋಮುಗಲಭೆ ಹರಡುವ ಹುನ್ನಾರದಿಂದಲೇ ನಡೆದ ಕೃತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಘು ಸಕಲೇಶಪುರ ಮತ್ತು ಆತನ ಸಹಚರರ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಲಾಗಿದೆ ಎಂದಿದ್ದಾರೆ.

ಶಾಂತಿಯುತವಾಗಿರುವ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸಲೆಂದು ಹೊರ ಜಿಲ್ಲೆಯಿಂದ ಅಕ್ರಮವಾಗಿ ಪ್ರವೇಶಿಸಿರುವವರ ಮೇಲೆ ಪೆÇಲೀಸರು ನಿಗಾ ವಹಿಸಬೇಕು. ಲಾಕ್‍ಡೌನ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಜಿಲ್ಲೆಗೆ ಅಕ್ರಮ ಪ್ರವೇಶಗೈದ, ಪೆÇಲೀಸ್ ಠಾಣೆಯಲ್ಲಿ ಪುಂಡಾಟಿಕೆ ಮೆರೆದ ಮತ್ತು ವಾಹನಕ್ಕೆ ಬೆಂಕಿ ಹಚ್ಚಿ ಈದ್ ಉಲ್ ಫಿತ್ರ್ ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.