ಮಡಿಕೇರಿ, ಮೇ 21: ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯ ಬೇಕಾಗಿದ್ದ ಪ್ರಸಕ್ತ ಸಾಲಿನ ಎಸ್.ಎಸ್. ಎಲ್.ಸಿ. ಪರೀಕ್ಷೆ ಕೊರೊನಾ ಆತಂಕ ಹಾಗೂ ಲಾಕ್‍ಡೌನ್‍ನ ಕಾರಣ ದಿಂದಾಗಿ ಮುಂದೂಡಲ್ಪಟ್ಟಿದ್ದು, ಇದೀಗ ಜೂನ್ 25 ರಿಂದ ಜುಲೈ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಬಗ್ಗೆ ಈಗಾಗಲೇ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಹಿಂದಿನ ವರ್ಷಗಳ ಪರೀಕ್ಷೆಗೆ ಹೋಲಿಸಿದರೆ ಈ ಬಾರಿ ಕೋವಿಡ್-19 ರ ಆತಂಕಕಾರಿ ಸ್ಥಿತಿಯ ಹಿನ್ನೆಲೆ ಹಲವೊಂದು ಮುಂಜಾಗ್ರತಾ ಕ್ರಮವನ್ನು ಅನುಸರಿಸುವ ನಿಟ್ಟಿನಲ್ಲಿಯೂ ಪ್ರೌಢ ಶಿಕ್ಷಣ ಮಂಡಳಿ ಸೂಚನೆ ನೀಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ಅಭ್ಯರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯದಂತಹ ಕ್ರಮಗಳನ್ನು ಅನುಸರಿಸಲು ಇಲಾಖೆ ಸೂಚನೆ ನೀಡಿದೆ.ಆದರೆ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷಾ ಸಂದರ್ಭದ ಅವಧಿ ಇತರೆಡೆಗಳಿಗಿಂತ ವಿಭಿನ್ನವಾ ಗಿರುತ್ತದೆ. ಬಹುಶಃ ಜೂನ್ 25 ರ ವೇಳೆಗೆ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿರುವ ಸಾಧ್ಯತೆಯಿರುವು ದರಿಂದ ಕೊರೊನಾ ಪರಿಸ್ಥಿತಿಯ ನಿರ್ವಹಣೆಯೊಂದಿಗೆ ಮಳೆಗಾಲಕ್ಕೂ ಸಾರ್ವಜನಿಕ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಈ ಹಿನ್ನೆಲೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಅವರು ಇಲಾಖೆಯೊಂದಿಗೆ ಸಮಾಲೋಚನಾ ಸಭೆ ನಡೆಸಿ ಕೆಲವು ಮಾಹಿತಿ ಸಂಗ್ರಹಣೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ.

ಜಿಲ್ಲೆಯ ವಿವಿಧೆಡೆಗಳಿಂದ ನಿಗದಿತ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಒಂದುವೇಳೆ ಅಪಾಯಕಾರಿಯಾದಂತಹ ತೋಡು, ಸೇತುವೆ, ಕಾಡಿನ ಹಾದಿ, ಕಾಡಾನೆಗಳು ಸಂಚರಿಸುವ ಮಾರ್ಗ ಇತ್ಯಾದಿ ಕಡೆಗಳಿಂದ ಆಗಮಿಸಬೇಕಿದ್ದಲ್ಲಿ ಅಂತಹ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ರೀತಿಯ ಸಮಸ್ಯೆಗಳು ಇದ್ದಲ್ಲಿ ಪರೀಕ್ಷಾ ಕೇಂದ್ರಕ್ಕೆ ಸನಿಹವಿರುವ ವಿದ್ಯಾರ್ಥಿ ನಿಲಯಗಳಲ್ಲಿ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಪಿ.ಎಸ್. ಮಚ್ಚಾಡೋ ಅವರು ತಿಳಿಸಿದ್ದಾರೆ.

ಪ್ರಸಕ್ತ ವರ್ಷ 7149 ಅಭ್ಯರ್ಥಿಗಳು

ಪ್ರಸಕ್ತ ನಡೆಯಲಿರುವ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 7149 ವಿದ್ಯಾರ್ಥಿಗಳಿದ್ದಾರೆ. 3562 ಬಾಲಕರು, 3587 ಬಾಲಕಿಯರು ಹಾಗೂ ನೇರ ಮತ್ತು ಪುನರ್ ಪರೀಕ್ಷೆ ತೆಗೆದುಕೊಳ್ಳಲಿರುವ 598 ಅಭ್ಯರ್ಥಿಗಳಿದ್ದು ಒಟ್ಟು 7149 ಮಂದಿ ಪರೀಕ್ಷೆ ಎದುರಿಸಲಿದ್ದಾರೆ.

ಪರೀಕ್ಷೆ ನಡೆಸಲು ವೀರಾಜಪೇಟೆ ಯಲ್ಲಿ 8, ಮಡಿಕೇರಿಯಲ್ಲಿ 8 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 11 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 27 ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಎಲ್ಲಾ ಕೇಂದ್ರಗಳಿಗೂ ಸಿ.ಸಿ. ಕ್ಯಾಮರಾ ಅಳವಡಿಸಲಾಗು ವುದು. ಕೊಠಡಿ ಮೇಲ್ವಿಚಾರಕರು, ಸ್ಕ್ವಾಡ್‍ನೊಂದಿಗೆ ಜಿಲ್ಲಾಡಳಿತ ದಿಂದಲೂ ಪ್ರತ್ಯೇಕ ಸ್ಕ್ವಾಡ್ ನಿಯೋಜನೆಗೊಳ್ಳಲಿದ್ದು, ಇದರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊಬಿಕ್ಸ್ ಸಂಸ್ಥೆ ಈ ಬಾರಿ ಉಚಿತವಾಗಿ ಮಾಸ್ಕ್ ವಿತರಿಸಲಿದ್ದು, ವಿದ್ಯಾರ್ಥಿಗಳು ಸೇರಿದಂತೆ ಕರ್ತವ್ಯನಿರತ ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.

ಈ ಹಿಂದೆ ಒಂದು ಪರೀಕ್ಷಾ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆದರೆ ಈ ಬಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ. ಇದಲ್ಲದೆ ಪ್ರತಿ ಕೇಂದ್ರದಲ್ಲೂ ಒಂದು ಹೆಚ್ಚುವರಿ ಕೊಠಡಿಯನ್ನು ಕಾಯ್ದಿರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಜ್ವರ, ಇತ್ಯಾದಿ ಕಾರಣಗಳು ಕಂಡು ಬಂದರೆ ಈ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ಹ್ಯಾಂಡ್‍ವಾಷ್‍ಗೆ ಅವಕಾಶ, ಸ್ಯಾನಿಟೈಸರ್ ಅನ್ನು ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಪರೀಕ್ಷೆ ಬಳಿಕ ಪ್ರತಿದಿನ ಕೊಠಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸಲಾ ಗುವುದು ಎಂದು ಮಚ್ಚಾಡೋ ‘ಶಕ್ತಿ’ಗೆ ವಿವರವಿತ್ತಿದ್ದಾರೆ.