ಮಡಿಕೇರಿ, ಮೇ 21: ಜಾಗತಿಕ ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ, ಕೇರಳ ಹಾಗೂ ಕರ್ನಾಟಕ ನಡುವೆ ಕುಟ್ಟ ಮತ್ತು ಮಾಕುಟ್ಟ ಚೆಕ್‍ಪೋಸ್ಟ್‍ಗಳನ್ನು ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ, ಸಂಪೂರ್ಣ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ಎರಡು ಮಾರ್ಗಗಳಲ್ಲಿ ದಿನದ 24 ಗಂಟೆಯೂ ಪೊಲೀಸರು ಕಣ್ಗಾವಲಿನ ನಡುವೆ ಕರ್ತವ್ಯ ನಿರತರಾಗಿದ್ದಾರೆ.
ಈ ಸನ್ನಿವೇಶದ ಮಧ್ಯೆ ಕೊಡಗು - ಕೇರಳ ಗಡಿ ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಸಾಗುವ ಕುಟ್ಟ ಮತ್ತು ಮಾಕುಟ್ಟ ಹೆದ್ದಾರಿಗಳಲ್ಲಿ ಕಳೆದ ಸುಮಾರು 2 ತಿಂಗಳ ಅಂತರದಲ್ಲಿ ವಾಹನ ಸಂಚಾರವಿಲ್ಲದೆ ನಿರ್ಜನ ಪ್ರದೇಶದಂತೆ ಅನುಭವವಾಗುತ್ತಿದ್ದು, ಇಲ್ಲಿ ಕಾಡಾನೆಗಳ ಸ್ವಚ್ಛಂದ ಬದುಕಿಗೆ ಅವಕಾಶವಾಗಿದೆ. ಕುಟ್ಟ ಪೊಲೀಸ್ ಠಾಣೆಯಿಂದ ಅನತಿ ದೂರದಲ್ಲಿರುವ ಉಭಯ ರಾಜ್ಯಗಳ ಗಡಿ ನಿಯಂತ್ರಣ ಸರಹದ್ದಿನಲ್ಲಿ ಕಾಡಾನೆ ಹಿಂಡು ಮರಿಯೊಂದರ ಸಹಿತ ಸುಳಿದಾಡುತ್ತಾ; ಅಲ್ಲಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಎದುರುಗೊಳ್ಳುತ್ತಿವೆ. ಈ ಗಜಪಡೆಯನ್ನು ಕಂಡು ಅರೆಕ್ಷಣ ಎದೆ ಝಲ್ಲೆನಿಸಿದರೂ ಆನೆಗಳ ನಡುವೆ ಆರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನೊಂದೆಡೆ ಮಾಕುಟ್ಟ ಅಂತರರಾಜ್ಯ ಗಡಿ ಚೆಕ್‍ಪೋಸ್ಟ್ ತಲಪುವದು ಮತ್ತು ವೀರಾಜಪೇಟೆಯತ್ತ ಸುಮಾರು 26 ಕಿ.ಮೀ. ಪೆರುಂಬಾಡಿಯತ್ತ ಪೊಲೀಸರು ನಿತ್ಯ ಅತ್ತಿಂದಿತ್ತ ತಿರುಗಾಡುವದು ನಿಜಕ್ಕೂ ಅತ್ಯಂತ ಭಯಾನಕ ಎನ್ನುವದು ಗೋಚರವಾಗಲಿದೆ. ಈ ಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಸುಳಿದಾಡುವ ಕಾಡಾನೆ ಹಿಂಡು ಅಲ್ಲಲ್ಲಿ ಲದ್ದಿ ಹಾಕಿ, ಬಿದಿರು ಇತ್ಯಾದಿ ಎಳೆದು ರಸ್ತೆಯಲ್ಲೇ ತಿನ್ನುವ ಸನ್ನಿವೇಶವಿದೆ.
ದೇವರೇ ಗತಿ : ಇಂತಹ ಸನ್ನಿವೇಶವನ್ನು ಎದುರುಗೊಂಡೆ ಸಂಚರಿಸುವ ಪೊಲೀಸರು, ಗಜಪಡೆಯಲ್ಲೇ ವಿಘ್ನ ನಿವಾರಕ ಗಣಪತಿಯನ್ನು ಕಾಣುತ್ತಿರುವದಾಗಿ ಉದ್ಗರಿಸುವರಲ್ಲದೆ, ಆ ದೇವರೇ ನಮ್ಮನ್ನು ಕಾಪಾಡುವದಾಗಿದೆ ಎಂದು ಏದುಸಿರು ಬಿಡುತ್ತಿದ್ದಾರೆ.
ಉಪಠಾಣೆ ಇದೆ : ಮಾಕುಟ್ಟ ಚೆಕ್‍ಪೋಸ್ಟ್‍ಗೆ ಹೊಂದಿಕೊಂಡಂತೆ ಕರ್ನಾಟಕ ಪೊಲೀಸ್ ಇಲಾಖೆಯ ಉಪಠಾಣೆ ಹಾಗೂ ಸುಸಜ್ಜಿತ ವಸತಿ ಗೃಹವಿದ್ದರೂ, ಸಿಬ್ಬಂದಿ ಕೊರತೆ ನಡುವೆ ಎಲ್ಲವೂ ಬಾಗಿಲು ಮುಚ್ಚಿಕೊಂಡಿವೆ. ಹೀಗಾಗಿ ಅನಿವಾರ್ಯ ಪರಿಸ್ಥಿತಿಯ ನಡುವೆ ನಿತ್ಯ ವೀರಾಜಪೇಟೆ ಗ್ರಾಮಾಂತರ ಠಾಣೆಯ ಸಿಬ್ಬಂದಿ, ಭಯಾನಕ ಮಾರ್ಗದೊಳು ತೆರಳಿ ಕರ್ತವ್ಯ ನಿರ್ವಹಿಸಬೇಕಿದೆ. ಇನ್ನು ಪೆರುಂಬಾಡಿ ಗೇಟ್, ವೀರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದಾಗಿದೆ. ಹೀಗಾಗಿ ಇಲ್ಲಿ ಕರ್ತವ್ಯ ನಿರತರಿಗೂ, ಗ್ರಾಮಾಂತರ ಪೊಲೀಸರಿಗೂ ನಡುವೆ ಅಂತರವಿದೆ. ಒಟ್ಟಿನಲ್ಲಿ ಆನೆಗಳ ನಡುವೆ ಆರಕ್ಷಕರ ಬದುಕಿಗೆ ಸದಾ ಭಯ ಆವರಿಸಿಕೊಂಡಿದೆ.
ಎಲ್ಲೆಡೆ ಅದೇ ಗೋಳು : ಇನ್ನು ಉತ್ತರ ಕೊಡಗಿನ ಶಾಂತಾಪುರ, ನಿಲುವಾಗಿಲು, ಬಾಣಾವರ, ಶಿರಂಗಾಲ ಸೇರಿದಂತೆ ಆನೆಚೌಕೂರು ಚೆಕ್‍ಪೋಸ್ಟ್‍ಗಳಲ್ಲಿ ಕೂಡ ಕಾಡಾನೆಗಳ ನೆರಳಿನಲ್ಲಿಯೇ ಪೊಲೀಸರು ಕರ್ತವ್ಯ ನಿರ್ವಹಿಸುವಂತಾಗಿದೆ. ಆನೆಚೌಕೂರು ಪೊಲೀಸರೇ ಹೇಳುವಂತೆ, ಕೆಲವು ಸಮಯ ಹಿಂದೆ ರಾತ್ರಿ ಕರ್ತವ್ಯದಲ್ಲಿದ್ದಾಗ, ಹೆದ್ದಾರಿ ಗೇಟ್‍ನಲ್ಲಿ ನಾಲ್ವರು ಸಿಬ್ಬಂದಿಯ ಬಳಿಯಲ್ಲೇ ಚಿರತೆಯೊಂದು ನಿಂತಿತ್ತಂತೆ ಕತ್ತಲೆಯಲ್ಲಿ ಅದು ಯಾರಿಗೂ ಅಪಾಯವೊಡ್ಡದೆ ಕಾಡಿನೊಳಗೆ ನುಸುಳಿದೆ.
ಈ ಪ್ರಸಂಗ ಪೊಲೀಸರ ಅರಿವಿಗೆ ಬಂದಿದ್ದು, ಮರುದಿನ ಅಧಿಕಾರಿಯೊಬ್ಬರು ಗೇಟ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ತಪಾಸಣೆ ನಡೆಸಿದ ಸಂದರ್ಭವಂತೆ! ಹೀಗಾಗಿ ಕರ್ತವ್ಯ ನಿರತ ಪೊಲೀಸರಿಗೆ ಗಜಪಡೆಯೇ ಪ್ರತ್ಯಕ್ಷ ಗಣಪತಿ ದೇವನಾಗಿ ರಕ್ಷಿಸುತ್ತಿದ್ದನಂತೆ...!?
- ಶ್ರೀಸುತ