(ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಮೇ 21 : ಎಲ್ಲೆಡೆ ದಿನದಿಂದ ದಿನಕ್ಕೆ ಕೊರೊನಾ ಸೊಂಕು ಹರಡುತ್ತಲೇ ಇದ್ದು, ಭೀತಿಯ ನಡುವೆಯೂ ಕೊರೊನಾ ವಾರಿ ಯರ್ಸ್‍ಗಳಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ನೀಡುವ ಕನಿಷ್ಟ ವೇತನದಲ್ಲಿಯೇ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿರುವ ವೇತನ ಹೊರತುಪಡಿಸಿ ಇನ್ಯಾವುದೇ ಭತ್ಯೆ ಇಲ್ಲಿಯವರೆಗೆ ಕೈ ಸೇರಿಲ್ಲ.

ಅಂಗನವಾಡಿ ಕಾರ್ಯಕರ್ತೆ ಯರು ಕೇಂದ್ರ ಸರ್ಕಾರದ ಮಾತೃವಂದನಾ ಹಾಗೂ ರಾಜ್ಯ ಸರ್ಕಾರದ ಮಾತೃಶ್ರೀ ಕಾರ್ಯ ಕ್ರಮಗಳನ್ನು ಪರಿಚಯಿಸುವುದಲ್ಲದೆ, ಗ್ರಾಮ ಗ್ರಾಮಗಳಿಗೆ ತೆರಳಿ ದಂಪತಿಗಳ ನೋಂದಾವಣಿ ಗರ್ಭಿಣಿಯ ನೋಂದಣಿ, ಆರೋಗ್ಯದ ಸ್ಥಿತಿಗತಿ ಗಳು ಬಾಣಂತಿಯರ ಆರೈಕೆ, ತಾಯಿ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಜಾಗೃತಿ ಮೂಡಿಸುತ್ತಾರೆ. ರಾಷ್ಟ್ರೀಯ ಕಾರ್ಯಕ್ರಮ ಗಳಲ್ಲೊಂದಾದ ಪೋಲಿಯೋ ಲಸಿಕೆ ಕೆಲಸ ನಿರ್ವಹಿಸುತ್ತಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನದೊಂದಿಗೆ ಕೊರೊನಾ ವೈರಸ್ ವಿರುದ್ಧ ಕೆಲಸ ನಿರ್ವಹಿಸಿದ ಬಗ್ಗೆ ಸರ್ಕಾರ ವೇತನದೊಂದಿಗೆ ವಿಶೇಷ ಭತ್ಯೆ ನೀಡಿ ಪ್ರೋತ್ಸಾಹಿಸಿದೆ.

ಲಾಕ್‍ಡೌನ್ ಆರಂಭ ದಿನದಿಂದಲೂ ಗ್ರಾಮದ ಸಂಪೂರ್ಣ ಮಾಹಿತಿಗಳನ್ನು ದಿನನಿತ್ಯ ಗ್ರಾಮದ ಮನೆ ಮನೆಗಳಿಗೆ ತೆರಳಿ ನಿಖರ ಅಂಕಿ ಅಂಶಗಳ ಮಾಹಿತಿಗಳನ್ನು ಸಂಗ್ರಹಿಸಿ ಇಲಾಖೆಯ ಮೂಲಕ ವಿವರ ನೀಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೊರತುಪಡಿಸಿ ಬೇರೆ ಯಾವುದೇ ಪ್ರೋತ್ಸಾಹದಾಯಕ ಭತ್ಯೆ ಕೈ ಸೇರಿಲ್ಲ. ಕನಿಷ್ಟ ವೇತನದಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತರು ಈಗಾಗಲೇ 20,30 ವರ್ಷಗಳಿಂದ ಕಾರ್ಯಕರ್ತೆಯಾಗಿ ತಮ್ಮನ್ನು ಗುರುತಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಇಲಾಖಾ ಕಾರ್ಯಕ್ರಮಗಳಿಗೆ ಇವರಿಂದ ಮಾಹಿತಿ ಪಡೆಯುವ ಇಲಾಖೆಯು ಈ ಬಾರಿ ಸಂಪೂರ್ಣ ಇವರನ್ನು ನಿರ್ಲಕ್ಷ್ಯ ಮಾಡಿದೆ. ಕೊರೊನಾ ವೈರಸ್ ವಿರುದ್ದ ಹೋರಾಟ ನಡೆಸಿದ ಹಲವು ಇಲಾಖೆಯ ಸಿಬ್ಬಂದಿಗಳನ್ನು ಗೌರವಿಸಿರುವ ಸಮಾಜ ಆಯಾಯ ಪಂಚಾಯ್ತಿ ವ್ಯಾಪ್ತಿಯಲ್ಲಿ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರನ್ನು ಮರೆತಂತಿದೆ.

ಪ್ರೋತ್ಸಾಹಿಸುವಂತಾಗಬೇಕು : ಅಂಗನವಾಡಿ ಕಾರ್ಯಕರ್ತೆಯರು ಆರಂಭದಿಂದಲೂ ಶಕ್ತಿ ಮೀರಿ ದುಡಿಯುತ್ತಿದ್ದಾರೆ. ಗ್ರಾಮದ ಪ್ರತಿಯೊಂದು ಮಾಹಿತಿಯು ಇವರ ಬಳಿ ಲಭ್ಯವಿದೆ. ಕೋವಿಡ್ -19 ಸೇವೆಯಲ್ಲಿ ತೊಡಗಿರುವವರಿಗೆ ಸರ್ಕಾರ 50 ಲಕ್ಷ ವಿಮೆ ಸೌಲಭ್ಯ ಕಲ್ಪಿಸಿದೆ. ಇದರ ಪ್ರಯೋಜನ ಅಂಗನವಾಡಿ ಕಾರ್ಯಕರ್ತೆಯರಿಗೂ ಅನ್ವಯವಾಗಲಿದೆ. ಇತರೆ ಇಲಾಖೆಯ ಸಿಬ್ಬಂದಿಗಳಿಗೆ ಸಿಗುವ ರೀತಿಯಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ -19 ವಿಶೇಷ ಭತ್ಯೆ ಲಭಿಸಿದ್ದಲ್ಲಿ ಮತ್ತಷ್ಟು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಉಪನಿರ್ದೇಶಕಿ ಟಿ.ಎಸ್.ಅರುಂಧತಿ ಅಭಿಪ್ರಾಯಪಟ್ಟಿದ್ದಾರೆ.

ಸಚಿವರ ಗಮನ ಸೆಳೆಯುವೆ : ಇತರ ಇಲಾಖೆಗಳ ಸಿಬ್ಬಂದಿಗಳಿಗೆ ಸಿಗುವಂತೆಯೇ ಅಂಗನವಾಡಿ ಕಾರ್ಯಕರ್ತೆಯರಿಗೂ ಸರ್ಕಾರದ ವಿಶೇಷ ಭತ್ಯೆಗಳು ಸಿಗುವಂತಾಗಬೇಕು. ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಿರುದ್ಧ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ. ಇವರು ಕೂಡ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ವಿಶೇಷ ಭತ್ಯೆ ನೀಡುವ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗುವುದು ಎಂದು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲ ನೆರವು ಕಲ್ಪಿಸಲಿ : ಕಂಟೈನ್‍ಮೆಂಟ್ ಮತ್ತು ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುರಕ್ಷತೆಗಾಗಿ ಪಿಪಿಇ ಕಿಟ್‍ಗಳನ್ನು ವಿತರಿಸಬೇಕು. ಎಲ್ಲಾ ಸಿಬ್ಬಂದಿಗೆ ಆಗಿಂದ್ದಾಗ್ಗೆ ಉಚಿತ ಕೋವಿಡ್-19 ಪರೀಕ್ಷೆ ಮಾಡಿಸಬೇಕು. ರೂ. 50 ಲಕ್ಷ ವಿಮೆಯನ್ನು ಅವರ ಇಡೀ ಕುಟುಂಬದ ಸದಸ್ಯರಿಗೂ ಜಾರಿ ಮಾಡಬೇಕು. ಕೋವಿಡ್-19 ಕರ್ತವ್ಯದಲ್ಲಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ, ಸಹಾಯಕರಿಗೂ ಉಚಿತ ಪಡಿತರ ಸಿಗುವಂತಾಗಬೇಕು. ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಸಿಗುವ ರೀತಿಯಲ್ಲಿ ವಿಶೇಷ ಭತ್ಯೆ ಸಿಗುವಂತಾ ಗಬೇಕು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ ಆಗ್ರಹಿಸಿದ್ದಾರೆ.