ಮಡಿಕೇರಿ, ಮೇ 21: ಇದೀಗ ಲಾಕ್‍ಡೌನ್-4 ಜಾರಿಯಾಗಿರು ವುದರಿಂದ ಲಾಕ್‍ಡೌನ್-3ರ ನಿಯಮಾವಳಿಗಳನ್ನು ಹಿಂಪಡೆಯಲಾಗಿದ್ದು, ಇನ್ನು ಮುಂದಕ್ಕೆ ರಾಜ್ಯಾದ್ಯಂತ ಅಂತರ ಜಿಲ್ಲಾ ಕೋವಿಡ್ ಚೆಕ್‍ಪೋಸ್ಟ್ ಗಳನ್ನು ತೆರವುಗೊಳಿಸಿ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.ಈವರೆಗೆ ಅಂತರ ಜಿಲ್ಲಾ ಪ್ರವೇಶ ಸಂದರ್ಭ ಚೆಕ್‍ಪೋಸ್ಟ್‍ನಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಇದೀಗ ಅದನ್ನು ತೆರವುಗೊಳಿಸಲಾಗಿದೆ. ಅಂತರ ಜಿಲ್ಲೆಯನ್ನು ಪ್ರವೇಶಿಸುವ ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಬಸ್ ಹಾಗೂ ರೈಲ್ವೇ ನಿಲ್ದಾಣಗಳಲ್ಲಿಯೇ ಕೋವಿಡ್ ತಪಾಸಣೆಗೆ ಒಳಪಡಿಸಬೇಕಿದೆ. ಪ್ರಯಾಣಿಕರಲ್ಲಿ ಜ್ವರ ಇನ್ನಿತರ ಸೂಚನೆ ಕಂಡುಬಂದರೆ ಸನಿಹದ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಒಳಪಡಿಸಬೇಕಿದೆ.

ಕೆಎಸ್‍ಆರ್‍ಟಿಸಿ, ರೈಲ್ವೇ ಇನ್ನಿತರ ಖಾಸಗಿ ಸಾರ್ವಜನಿಕ ಸಂಚಾರಿ ವ್ಯವಸ್ಥೆವುಳ್ಳವರು ಇದನ್ನು ಕಡ್ಡಾಯವಾಗಿ ಮಾಡಬೇಕಾಗಿದೆ. ಆದರೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಯಾವುದೇ ರೀತಿಯ ತಪಾಸಣೆ ಇರುವುದಿಲ್ಲವೆಂದು ಆರೋಗ್ಯ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.