ಗೋಣಿಕೊಪ್ಪಲು, ಮೇ 19: ಮುಸ್ಲಿಂಮರÀ ವಿಶೇಷ ಹಬ್ಬಗಳಲ್ಲೊಂದಾದ ರಂಜಾನ್‍ಗೆ ಕೆಲವು ದಿನಗಳು ಬಾಕಿ ಇರುವಾಗಲೇ ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತ್ ಕಮಿಟಿಯವರು ಕಷ್ಟದಲ್ಲಿದ್ದ ಹಿಂದೂ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ನೀಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ದ.ಕೊಡಗಿನ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಮಡಿಕೆಬೀಡು ವಿನಲ್ಲಿ ಮಡಿಕೆ, ಕುಡಿಕೆಗಳನ್ನೇ ವೃತ್ತಿ ಬದುಕಾಗಿ ಕಂಡುಕೊಂಡಿದ್ದ ಹಲವು ಹಿರಿಯ ಕುಟುಂಬಗಳು ಲಾಕ್‍ಡೌನ್ ಹಿನ್ನೆಲೆಯಲ್ಲಿ ತಾವು ತಯಾರಿಸಿದ ದೇವರ ಕಾರ್ಯಕ್ಕೆ ಬಳಸುವ ವಿವಿಧ ರೀತಿಯ ಆಕಾರಗಳು ಬಳಕೆಯಾಗದೆ ಸಿಲುಕಿದ್ದವು.ಈ ಬಗ್ಗೆ ‘ಶಕ್ತಿ’ ಸಮಗ್ರ ವರದಿ ಪ್ರಕಟಿಸುವ ಮೂಲಕ ಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಧಾವಿಸುವಂತೆ ಸುದ್ದಿ ಪ್ರಕಟಿಸಿತ್ತು. ‘ಶಕ್ತಿ’ಯಲ್ಲಿ ಪ್ರಕಟಗೊಂಡ ಸುದ್ದಿ ಗಮನಿಸಿದ ಗೋಣಿಕೊಪ್ಪಲುವಿನ ಶಾಫಿ ಮುಸ್ಲಿಂ ಜಮಾಅತ್ ಕಮಿಟಿಯವರು ಮಂಗಳವಾರ ಮಡಿಕೆಬೀಡುವಿನ ಗ್ರಾಮಕ್ಕೆ ತೆರಳಿ ವೃತ್ತಿ ಬದುಕು ನಡೆಸುತ್ತಿದ್ದ ಅಕ್ಕಯ್ಯಮ್ಮ, ಲಕ್ಷ್ಮಮ್ಮ, ದೇವಮ್ಮ, ಅವ್ವಿಯಮ್ಮ, ಯಶೋದಮ್ಮ, ಸಂಕೇತ್, ಚನ್ನಮ್ಮ, ಸೀನಾ, ಕಾಳಮ್ಮ, ಕಮಲ, ಜಯಶ್ರೀ, ಕೆ.ಪಿ.ನಾಗು, ತಿಮ್ಮಯ್ಯಶೆಟ್ಟಿ, ರತ್ನಮ್ಮ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ಕುಟುಂಬಗಳು ಸೇರಿದಂತೆ 17 ಕುಟುಂಬಗಳಿಗೆ ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾದರು.

-ಹೆಚ್.ಕೆ.ಜಗದೀಶ್