ಮಡಿಕೇರಿ, ಮೇ 19: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಸಂಬಂಧ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದಂತೆ ರೈತರಿಗೆ ಅಗತ್ಯ ಸವಲತ್ತು ಕಲ್ಪಿಸಲು ಕೃಷಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರಾಜು ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಶಕ್ತಿ’ಯೊಂದಿಗೆ ಈ ಕುರಿತು ಸಂಪರ್ಕಿಸಲಾಗಿ ಅವರು ಮಾಹಿತಿ ನೀಡಿದರು.

ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಿದ್ದು, ಹೆಚ್ಚುವರಿ ಇಳುವರಿ ಕೊಡುವಂಥ ತಳಿಗಳ ಬಿತ್ತನೆ ಬೀಜವನ್ನು ದಾಸ್ತಾನುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಹಿಂದಿನ ಸಾಲಿನಲ್ಲಿ 2300 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ಕಲ್ಪಿಸಿದ್ದು, ಪ್ರಸ್ತುತ ಸಾಲಿನಲ್ಲಿ ಅಧಿಕ ಬೇಡಿಕೆಯ ನಿರೀಕ್ಷೆಯೊಂದಿಗೆ 3600 ಕ್ವಿಂಟಾಲ್ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಅಧಿಕಾರಿ ವಿವರಿಸಿದರು.

ಅಲ್ಲದೆ ಕುಶಾಲನಗರ ಹಾಗೂ ಶಿರಂಗಾಲ ಸುತ್ತಮುತ್ತ ಕೂಡಿಗೆ ವ್ಯಾಪ್ತಿಯಲ್ಲಿ ಕೆಲವಷ್ಟು ರೈತರು ಮುಸುಕಿನ ಜೋಳ ಬೆಳೆಯುತ್ತಿದ್ದು, ಅಂದಾಜು 4 ಸಾವಿರ ಹೆಕ್ಟೇರ್ ಜೋಳ ಬೆಳೆಯುವ ರೈತರಿಗೆ ಸರಕಾರದ ಸಹಾಯ ಧನದೊಂದಿಗೆ ಬೀಜವನ್ನು ಕಲ್ಪಿಸಲಾಗುತ್ತಿದ್ದು, ಬಿತ್ತನೆ ಆರಂಭಗೊಂಡಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಸಲಹೆ: ಕೊಡಗಿನಲ್ಲಿ ಭತ್ತ ಬೆಳೆಯುವ ರೈತರು ಮತ್ತು ಜೋಳ ಕೃಷಿಕರು, ಆಯಾ ಪ್ರದೇಶಗಳ ಹೋಬಳಿ ರೈತ ಸಂಪರ್ಕ ಕೇಂದ್ರ ಗಳನ್ನು ಸಂಪರ್ಕಿಸಿ, ಸಂಬಂಧಪಟ್ಟ ಕೃಷಿ ತಜ್ಞರಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವಂತೆಯೂ ರಾಜು ಸಲಹೆ ನೀಡಿದರು.

ಗೊಬ್ಬರ ದಾಸ್ತಾನು: ಕೊಡಗಿನಲ್ಲಿ ಒಟ್ಟಾರೆ ಮುಂಗಾರು ಕೃಷಿಗೆ ಸುಮಾರು 65 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಬಳಕೆಯಾಗಲಿದ್ದು, ವಿವಿಧ ರೀತಿಯ ಕೃಷಿ ಗೊಬ್ಬರ ದಾಸ್ತಾನು ಪ್ರಸ್ತುತ 23 ಸಾವಿರ ಮೆಟ್ರಿಕ್ ಟನ್‍ನಷ್ಟು ಇರುವುದಾಗಿ ತಿಳಿಸಿದ ಅವರು, ರೈತರು ಅಗತ್ಯಕ್ಕೆ ತಕ್ಕಂತೆ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಕೃಷಿ ಪರಿಕರ, ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಮಾಹಿತಿಗಾಗಿ ಜಿಲ್ಲೆಯ ರೈತರು 16 ಹೋಬಳಿಗಳಲ್ಲಿ ತಮಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸಲಹೆ, ಸೂಚನೆ ಹೊಂದಿಕೊಳ್ಳುವಂತೆ ಅವರು ಕೋರಿದ್ದಾರೆ.