ಮಡಿಕೇರಿ, ಮೇ 20: ಕೋವಿಡ್-19 ನಿಗ್ರಹ ಸಂಬಂಧ ಸಾರ್ವಜನಿಕ ಹಿತಾಸಕ್ತಿಯಿಂದ ಸರ್ಕಾರದ ಆದೇಶ/ ಮಾರ್ಗಸೂಚಿ ಅನ್ವಯ ತಾ. 3 ರಿಂದ ಎರಡು ವಾರಗಳ ವರೆಗೆ ಜಾರಿಯಲ್ಲಿದ್ದ ಲಾಕ್‍ಡೌನ್‍ಅನ್ನು ಪ್ರಸ್ತುತ ತಾ. 31 ರ ಮಧ್ಯರಾತ್ರಿ ವರೆಗೆ ವಿಸ್ತರಿಸಲಾಗಿದೆ. ಈ ಹಿಂದಿನ ಲಾಕ್‍ಡೌನ್ ನಿಯಮದಂತೆ ಅಂಗಡಿ ಮಳಿಗೆಗಳನ್ನು ತೆರೆಯಲು ನೀಡಲಾಗಿದ್ದ ಸಮಯಾವಕಾಶವನ್ನು ಭಾಗಶಃ ಮಾರ್ಪಡಿಸಿ, ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಅಂತರ್ ರಾಜ್ಯ ಗಡಿಭಾಗದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿಗಳನ್ನು ಹೊರತುಪಡಿಸಿ, ಕಾರ್ಯಾಚರಿಸಲು ಅನುಮತಿಸಲಾದ ಮದ್ಯದ ಅಂಗಡಿಗಳನ್ನು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತೆರೆಯಬಹುದಾಗಿದೆ. (ಮೊದಲ ಪುಟದಿಂದ) ತುರ್ತು ಮತ್ತು ಅವಶ್ಯಕ ಸೇವೆಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ಚಟುವಟಿಕೆಗಳು, ಸಾರ್ವಜನಿಕ ಸಂಚಾರವನ್ನು ಭಾನುವಾರದಂದು ದಿನವಿಡೀ ಹಾಗೂ ವಾರದ ಎಲ್ಲಾ ದಿನಗಳಲ್ಲಿ ಸಂಜೆ 7 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಸೆಕ್ಷನ್ 144 ರಡಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶದಲ್ಲಿ ತಿಳಿಸಿದ್ದಾರೆ.