ವೀರಾಜಪೇಟೆ, ಮೇ 20: ಕಳೆದ ಎರಡು ತಿಂಗಳುಗಳಿಂದ ಕೊರೊನಾ ವೈರಸ್ ಭೀತಿ, ಲಾಕ್‍ಡೌನ್ ನಿರ್ಬಂಧದ ಹಿನೆÀ್ನಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದುದು ನಿನ್ನೆಯಿಂದ ಆರಂಭಗೊಂಡಿದೆ. ಮೊದಲನೇ ದಿನ ಹುಣಸೂರು ಹಾಗೂ ಮೈಸೂರಿಗೆ ಬಸ್ಸು ಸಂಚಾರವನ್ನು ಷರತ್ತಿನ ಮೇರೆ ಪ್ರಯಾಣಿಕರುಗಳನ್ನು ಕರೆದೊಯ್ಯಲಾಯಿತು.

ಇಂದು ಬೆಳಗಿನಿಂದಲೇ ಮೈಸೂರು ಹಾಗೂ ಬೆಂಗಳೂರಿಗೆ ಸಾರಿಗೆ ಸಂಸ್ಥೆ ಬಸ್ಸು ತನ್ನ ಸಂಚಾರ ಆರಂಭಿಸಿದ್ದು ಗುರುತಿನ ಚೀಟಿ, ಥರ್ಮಲ್ ಸ್ಕ್ರೀನ್ ಸೇರಿದಂತೆ ಇತರ ತಪಾಸಣೆಗೊಳಪಡಿಸಿ ಒಂದು ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಬೆಂಗಳೂರು ಕಡೆಗೆ ಸಂಚಾರ ಆರಂಭಿಸಲಾಯಿತು. ಬೆಳಿಗ್ಗೆ 10-30 ಗಂಟೆಗೆ ಹೊರಟ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರಯಾಣಿಕರು ಸರದಿ ಪ್ರಕಾರ ನಿಂತು ಬಸ್ಸು ಹತ್ತಿದರು. ಈ ಹಿಂದೆ ಬೆಂಗಳೂರಿನಿಂದ ವೀರಾಜಪೇಟೆಗೆ ವಲಸೆ ಬಂದಿದ್ದ ಕಾರ್ಮಿಕರುಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು ಕಂಡು ಬಂತು.

ಇಲ್ಲಿನ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣದಿಂದ ಇಂದು ಮೈಸೂರು, ಹುಣಸೂರು ಕಡೆಗೂ ಬಸ್ಸುಗಳು ಸಂಚಾರ ನಡೆಸಿದವು. ಇನ್ನು ಮುಂದೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ವಿವಿಧೆಡೆಗಳಿಗೆ ಓಡಿಸಲಾಗುವುದು ಎಂದು ಸಹಾಯಕ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.