ಮಡಿಕೇರಿ, ಮೇ 19: ಸುಳ್ಳು ಮಾಹಿತಿ ನೀಡಿ ಮುಂಬೈನಿಂದ ಜಿಲ್ಲೆಗೆ ಆಗಮಿಸಿರುವ ದಂಪತಿಯ ಮೇಲೆ ಕ್ರಮಕೈಗೊಂಡಿರುವ ಪೊಲೀಸ್ ಇಲಾಖೆ ಇಬ್ಬರನ್ನು ಕ್ವಾರಂಟೈನ್‍ಗೆ ಒಳಪಡಿಸಿದೆ. ತಾ. 10 ರಂದು ಪೊನ್ನಮ್ಮ, ಪತಿ ಕೆ.ಕೆ. ಬೋಪಣ್ಣ ಇವರು ಮುಂಬೈನಿಂದ ಬೆಂಗಳೂರು ನಂತರ ಬೆಂಗಳೂರಿನಿಂದ ಕುಶಾಲನಗರ ಮಾರ್ಗವಾಗಿ ಎಂ.ಬಾಡಗ ಗ್ರಾಮಕ್ಕೆ ಬಂದಿದ್ದಾರೆ. ಬೆಂಗಳೂರಿನಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿ ಬಂದಿರುವುದಾಗಿದೆ. ಕೊರೊನಾ ಸಾಂಕ್ರಾಮಿಕ ಕಾಯಿಲೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಲಾಕ್‍ಡೌನ್ ಆದೇಶ ಹೊರಡಿಸಿದ್ದರೂ ಸುಳ್ಳು ಮಾಹಿತಿ ನೀಡಿ ಮತ್ತು ಆದೇಶವನ್ನು ಉಲ್ಲಂಘಿಸಿದ ಪರಿಣಾಮ ಪೊನ್ನಮ್ಮ, ಪತಿ ಕೆ.ಕೆ. ಬೋಪಣ್ಣ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಅವರು ನೀಡಿದ ಪುಕಾರಿನ ಮೇರೆಗೆ ಮೊ.ಸಂ. 73/2020 ಕಲಂ 188, 269, 270 ಐಪಿಸಿ ಮತ್ತು 52 ಡಿಎಂಎ ಆಕ್ಟ್ 2005 ರೀತ್ಯಾ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪನ್ನೇಕರ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್ ಮುಂದಿನ ಕಾನೂನು ಕ್ರಮ ಕೈಗೊಂಡು ಪೊನ್ನಮ್ಮ ಮತ್ತು ಬೋಪಣ್ಣ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ.