ಕೂಡಿಗೆ, ಮೇ 20: ಸರಕಾರದ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ತಾಲೂಕಿನ 200 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತು ಮನೆಯ ತಳಹದಿಯ ಕೆಲಸ ಮಾತ್ರ ನಡೆದಿದೆ. ಆದರೆ ಇದುವರೆಗೆ ಮನೆ ನಿರ್ಮಾಣದ ಹಣ ಬರದೆ ಫಲಾನುಭವಿಗಳು ಪರದಾಡುವ ಪ್ರಸಂಗಗಳು ನಡೆಯುತ್ತಿವೆ.

ತಾಲೂಕಿನ ಅನೇಕ ಗ್ರಾ.ಪಂ.ಗಳಲ್ಲಿ 2015-16ನೇ ಸಾಲಿನಿಂದ ಇದುವರೆಗೂ ರಾಜೀವ ಗಾಂಧಿ ವಸತಿ ಯೋಜನೆ ಹಣ ಬಾರದೆ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಆಯ್ಕೆಗೊಂಡಿದ್ದ ಫಲಾನುಭವಿಗಳು ಪರದಾಡು ವಂತಾಗಿದೆ. ಗ್ರಾ.ಪಂ. ನಿಯಮ ಅಡಿಯಲ್ಲಿ ಮನೆ ನಿರ್ಮಾಣದ ತಳಹದಿಯನ್ನು ತೆಗೆದು ಒಂದು ಸುತ್ತಲಿನ ಅಡಿಪಾಯವನ್ನು ಹಾಕಲಾಕಿದೆ. ಆದರೆ ಇನ್ನು ಮುಂದಿನ ಕಟ್ಟಡದ ಬಿಲ್ ಬಾರದೆ ಯಾವುದೇ ಕೆಲಸ ನಡೆದಿಲ್ಲ.

ಫಲಾನುಭವಿಗಳ ಆಯ್ಕೆ ನಂತರ ಒಂದು ಮನೆಗೆ ರೂ. 1.50 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಸೂಚಿಸಲಾಗಿತ್ತು. ಆದರೆ ಇದುವರೆಗೆ ತಾಲೂಕಿನ ಅನೇಕ ಗ್ರಾಮ ಪಂಚಾಯಿತಿಗೆ ಸರಕಾರದಿಂದ ಮನೆ ನಿರ್ಮಾಣ ಹಣ ಬಾರದೆ ಮನೆ ಕೆಲಸ ಸ್ಥಗಿತಗೊಂಡಿದೆ. ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು ತುರ್ತಾಗಿ ಗಮನ ಹರಿಸಿ ಮನೆಗಳ ನಿರ್ಮಾಣಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಫಲಾನುಭವಿಗಳು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.