ಅವರು ನಮ್ಮ ಮನೆ ಗಳನ್ನು ಕಟ್ಟಿದರು. ಅವರು ನಮ್ಮ ರಸ್ತೆಗಳನ್ನು ನಿರ್ಮಿಸಿದರು. ಅವರು ನಮ್ಮ ತೋಟಗಳಲ್ಲಿ ಕೆಲಸ ಮಾಡಿದರು, ಮಣ್ಣು ಹೊತ್ತರು, ಬಾವಿ ತೋಡಿದರು, ಅವರು ನಮ್ಮ ಅಂಗಡಿಗಳಲ್ಲಿ ಗಂಟೆ ಲೆಕ್ಕಿಸದೇ ದುಡಿದರು, ಅವರು ಮನೆಗಳಲ್ಲಿ ಕೆಲಸ ಮಾಡಿದರು, ಅವರು ನಿಷ್ಠರಾಗಿದ್ದರು, ನಂಬಿಕಸ್ಥರಾಗಿದ್ದರು. ಅವರು ಹೊರಟಾಗ ನಾವು ಯಾರೂ ಮತ್ತೆ ಬರುತ್ತೀರಾ ಅಂಥ ಕೇಳಲಿಲ್ಲ. ನಾವು ಹೋಗಿ ಬರುತ್ತೇವೆ ಅಂಥ ಅವರೂ ಹೇಳಲಿಲ್ಲ. ಯಾಕೆಂದರೆ, ದಿಢೀರನೆ ಮೈ ಕೊಡವಿಕೊಂಡು ಅವರು ಹೊರಟಾಗ ನಾವೆಲ್ಲಾ ಮನೆಯೊಳಗೇ ಇದ್ದೆವು. ಅವರು ಎಂದಿನಂತೆ ಮನೆಯಿಂದ ಹೊರಗೇ ಇದ್ದರು.. ಅವರೇ ವಲಸೆ ಕಾರ್ಮಿಕರು. ಭಾರತ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಸಂಘಟಿತ ವಲಯದ ಶ್ರಮಜೀವಿಗಳು.

ಭಾರತದಲ್ಲಿ ಇದೇ ಮೊದಲ ಭಾರಿಗೆ ಯಾರೂ ಊಹಿಸದ ರೀತಿಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಕಾರ್ಮಿಕರ ವಲಸೆ ಸಾಗುತ್ತಿದೆ. ಊರಿಂದೂರಿಗೆ, ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಪಯಣ ಪ್ರಾರಂಭಿಸಿದ್ದಾರೆ. ಭಾರತದ ಇತಿಹಾಸ ದಲ್ಲಿಯೇ ಇದೊಂದು ಐತಿಹಾಸಿಕ ವಲಸೆ. ಭಾರತೀಯ ವಲಸೆ ಕಾರ್ಮಿಕರ ದಿಟ್ಟ ಹೆಜ್ಜೆ. ಈವರೆಗೂ ಭಾರತದ ಎಲ್ಲಿಂದಲೋ ಎಲ್ಲಿಗೋ ಬಂದು ನೂರಾರು ರೀತಿಯ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ವಲಸೆ ಕಾರ್ಮಿಕ ವರ್ಗ ಮೊದಲ ಬಾರಿಗೆ ಸಾಮೂಹಿಕವಾಗಿ ತಮ್ಮ ಊರಿಗೆ ತೆರಳುತ್ತಿದೆ. ವಲಸಿಗ ಕಾರ್ಮಿಕನಿಗೆ ತನ್ನೂರಿನ ನೆನಪಾಗಿದೆ. ಅಲ್ಲಿರುವ ಕುಟುಂಬ ವರ್ಗದವರನ್ನು ಸೇರಿಕೊಳ್ಳುವ ಧಾವಂತದಲ್ಲಿ ಕಾರ್ಮಿಕ ವರ್ಗವಿದೆ. ತನಗೆ ಕೆಲಸ ಕೊಟ್ಟ ಮಾಲೀಕನಿಗೋಸ್ಕರವೇ ಈವರೆಗೂ ದುಡಿದು, ದಣಿದ ದೇಹ ಈಗ ಸ್ವಗ್ರಾಮಕ್ಕೆ ತೆರಳಲು ಮುಂದಾಗಿದೆ. ಹೀಗೆ ಹೊರಟಿರುವ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು ಎಲ್ಲಾ ರೀತಿಯ ಲ್ಲಿಯೂ ಪ್ರಯಾಣಕ್ಕೆ ನೆರವಾಗುತ್ತಿರುವುದು ಮತ್ತೊಂದು ಗಮನಾರ್ಹ ಸಾಧನೆಯಾಗಿದೆ. ವಲಸೆ ಕಾರ್ಮಿಕನ ಮಹತ್ವಕ್ಕೆ ಇದುವೇ ಸಾಕ್ಷಿ ಎನಿಸಿದೆ. ಕಟ್ಟಡ ಕಾರ್ಮಿಕರಾಗಿ, ಹೆದ್ದಾರಿ, ರಸ್ತೆ ಕೆಲಸಗಾರರಾಗಿ, ಮನೆಕೆಲಸದವರಾಗಿ, ತೋಟ ಕಾರ್ಮಿಕರಾಗಿ, ಗಾರೆ, ಕಾರ್ಪೆಂಟರ್‍ಗಳಾಗಿ, ಅಂಗಡಿ, ಹೊಟೇಲ್ ಕಾರ್ಮಿಕರಾಗಿ.. ಒಂದೇ ಎರಡೇ ವಲಸೆ ಕಾರ್ಮಿಕರು ದುಡಿಯದ ಕ್ಷೇತ್ರವೇ ಇಲ್ಲ. ಈ ಕಾರ್ಮಿಕರಿಲ್ಲದೇ ಭಾರತವನ್ನು ಊಹಿಸಲೇ ಅಸಾಧ್ಯ. ವಿಪರ್ಯಾಸ ಎಂದರೆ ಈ ಶ್ರಮಿಕ ವರ್ಗಕ್ಕೆ ತಾವು ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತ ಸೂರೇ ಇರುತ್ತಿರಲಿಲ್ಲ. ಮೂಲಸೌಕರ್ಯವೇ ಸಿಗುತ್ತಿರಲಿಲ್ಲ. ನಾ ಘರ್ ಕಾ.. ನಾ ಘಾಟ್ ಕಾ ಎಂಬಂತೆ ಎಲ್ಲರಿಗೂ ಬೇಕಾದವರು ಎಲ್ಲಿಯೂ ಸಲ್ಲದವರಂತೆ ಕೆಲಸ ಮಾಡುತ್ತಿದ್ದರು. ಹಲವು ಸೌಲಭ್ಯ ವಂಚಿತರಾದರೂ ಈ ಬಗ್ಗೆ ಪ್ರಶ್ನಿಸದೇ ದುಡಿಯುವುದೇ ತಮ್ಮ ಕಾಯಕ ಎಂಬಂತೆ ಬೆವರು ಸುರಿಸಿದವರು ಇವರು. ಭಾರತದಲ್ಲಿ 10 ಕೋಟಿ ವಲಸೆ ಕಾರ್ಮಿಕರು ಇರಬಹುದು ಎಂಬ ಅಂದಾಜಿದೆ. ವಿಪರ್ಯಾಸ ಎಂದರೆ ದೇಶದಲ್ಲಿ ಎಷ್ಟು ವಲಸೆ ಕಾರ್ಮಿಕರಿದ್ದಾರೆ ಎಂಬ ಬಗ್ಗೆ ನಿಖರವಾದ ಅಂಕಿ ಅಂಶವೇ ಇಲ್ಲ. ಲೆಕ್ಕಕ್ಕೇ ಸಿಗದಂತೆ ದೇಶವ್ಯಾಪಿ ಹಂಚಿಹೋಗಿರುವ ವಲಸಿಗರನ್ನು ಹುಡುಕಿ ಲೆಕ್ಕ ಹಾಕುವುದು ಮತ್ತೊಂದು ಶ್ರಮದಾಯಕ ಕೆಲಸವೇ ಹೌದು. ಲಾಕ್‍ಡೌನ್ ವಲಸೆ ಕಾರ್ಮಿಕರ ಪಾಲಿಗೆ ನಿಜವಾಗಿಯೂ ಬಂಧವದಂತಾಗಿತ್ತು. ಮನೆಯೊಳಗೇ ಇರಿ ಎಂದು ಸರ್ಕಾರ ಆದೇಶಿಸಿದ್ದರೂ ಮನೆಯಲ್ಲಿರಲು ವಲಸಿಗರಿಗೆ ಎಲ್ಲಿದೆ ಮನೆ ? ಯಾರ ಯಾರದ್ದೋ ನಿರ್ಮಾಣ ಹಂತದ ಕಟ್ಟದೊಳಗೇ ಇವರ ಮನೆ. ದಿನದ ದುಡಿಮೆಯಲ್ಲಿಯೇ ಒಂದಿಷ್ಟು ಆಹಾರ ಬೇಯಿಸಿಕೊಳ್ಳುತ್ತಿದ್ದ ಜನರಿವರು. ಲಾಕ್‍ಡೌನ್‍ನ 50 ದಿನಗಳಲ್ಲಿ ನಯಾ ಪೈಸೆ ಸಂಪಾದಿಸಲಾಗದೇ ಹೈರಾಣಾಗಿದ್ದ ವಲಸೆ ಕಾರ್ಮಿಕರಿಗೆ 3 ತಿಂಗಳ ಪಡಿತರ ನೀಡುವ ಕೇಂದ್ರ ಸರ್ಕಾರದ ಕ್ರಮ ವಲಸಿಗ ಕಾರ್ಮಿಕರಲ್ಲಿ ಒಂದಿಷ್ಟು ಚೈತನ್ಯಕ್ಕೆ ಕಾರಣವಾಗಿದೆ. ವಲಸೆ ಕಾರ್ಮಿಕರನ್ನು ಕೊರೊನಾ ಹೊತ್ತು ತರುವವರೆಂದು ಕೆಲವು ರಾಜ್ಯಗಳು ಗಡಿಯಲ್ಲಿಯೇ ತಡೆದಿವೆ. ನಮ್ಮ ರಾಜ್ಯಕ್ಕೆ ಎಂಟ್ರಿ ಇಲ್ಲ ಎಂದು ಆದೇಶಿಸಿದೆ. ರೈಲಿನಲ್ಲಿ, ಬಸ್‍ಗಳಲ್ಲಿ ತೆರಳಿದ ವಲಸಿಗ ಕಾರ್ಮಿಕರಿಗೆ ಕೆಲವು ಗ್ರಾಮಗಳಲ್ಲಿ ಸಿಕ್ಕ ನೀರಸ, ಸಿಟ್ಟಿನ ಸ್ವಾಗತ ಯಾಕೆ ಬಂದೆವು ನಮ್ಮೂರಿಗೆ ಎಂದೆನಿಸಿದೆ.

ಈ ವಲಸೆ ಕಾರ್ಮಿಕರು ಮರಳಿ ಊರಿಗೆ ಹೋಗಿದ್ದೇನೋ ಸರಿ, ಆದರೆ ದೇಶದ ಆರ್ಥಿಕತೆ ಸುಧಾರಿಸಿದ ನಂತರ ಈ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಊರುಗಳಿಗೆ ಮತ್ತೆ ಮರಳುವರೇ ? ಅಕಸ್ಮಾತ್ ಮರಳದೇ ಇದ್ದರೆ ಮತ್ತೊಂದು ದೊಡ್ಡ ರೀತಿಯ ಸಂಕಷ್ಟ ತಾಂಡವ ವಾಡಲಿದೆ. ರಾಜ್ಯದಲ್ಲಿ ರಸ್ತೆಗಳು, ಕಟ್ಟಡಗಳು, ಮನೆಗಳು, ಕಾರ್ಖಾನೆಗಳು, ಕೌಶಲ್ಯ ವೃತ್ತಿ, ಕೃಷಿ ಸೇರಿದಂತೆ ಹಲವಾರು ಕೆಲಸಕಾರ್ಯಗಳಿಗೆ ಉತ್ತರ ಭಾರತದ ವೃತ್ತಿಪರ, ನಿಪುಣ ಕಾರ್ಮಿಕರ ಅನಿವಾರ್ಯತೆಯಿದೆ. ಸ್ಥಳೀಯವಾಗಿ ಕಾರ್ಮಿಕರು ಹಲವು ಕೆಲಸಗಳಿಗೆ ದೊರಕಿದರೂ ವಲಸೆ ಕಾರ್ಮಿಕರಂತೆ ಕಡಿಮೆ ವೇತನಕ್ಕೆ ಸ್ಥಳೀಯರು ಕೆಲಸ ಮಾಡುವುದಿಲ್ಲ ಎಂಬ ದೂರೂ ಇದೆ. ವಲಸೆ ಕಾರ್ಮಿಕರು ಮತ್ತೆ ಕಾರ್ಯಸ್ಥಳಗಳಿಗೆ ಮರಳದೇ ಹೋದಲ್ಲಿ ಸ್ಥಳೀಯ ಕಾರ್ಮಿಕರ ವೇತನ ಹೆಚ್ಚಳವಾಗಿ ಗುತ್ತಿಗೆದಾರರೂ ಸೇರಿದಂತೆ ಮಾಲೀಕರಿಗೂ ಆರ್ಥಿಕ ಹೊರೆ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿದೆ. ವಲಸಿಗ ಕಾರ್ಮಿಕರನ್ನು ಮತ್ತೆ ಬಾರದಂತೆ ತಡೆಯುವ ಹುನ್ನಾರವನ್ನೂ ತಳ್ಳಿಹಾಕುವಂತಿಲ್ಲ. ಹೀಗಿದ್ದರೂ ಕೊಡಗಿನಂಥ ಜಿಲ್ಲೆಯಲ್ಲಿ ಕಾರ್ಮಿಕ ವರ್ಗವನ್ನು ಸೂಕ್ತ ವೇತನ, ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡುತ್ತಿರುವುದರಿಂದಾಗಿ ಕೊಡಗು ಜಿಲ್ಲೆಗೆ ಮುಂದೊಂದು ದಿನ ವಲಸೆ ಕಾರ್ಮಿಕರು ಮರಳಿ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದೂ ವಿಶ್ಲೇಷಣೆ ಮಾಡಬಹುದು.

ತಮಿಳುನಾಡಿಗೆ ಅತ್ಯಧಿಕ ಸಂಖ್ಯೆಯಲ್ಲಿ ತೋಟ ಕಾರ್ಮಿಕರನ್ನು ಕಳುಹಿಸಲಾಗಿದೆ. ಉಳಿದಂತೆ ಉತ್ತರಪ್ರದೇಶ, ಅಸ್ಸಾಂ, ಬಿಹಾರ್, ಜಾರ್ಖಂಡ್, ಮಧ್ಯಪ್ರದೇಶ, ಆಂಧ್ರ, ತೆಲಂಗಾಣದ ಕಟ್ಟಡ ಕಾರ್ಮಿಕರನ್ನು ಕಳುಹಿಸ ಲಾಗುತ್ತಿದೆ. ಸುಮಾರು 6 ಸಾವಿರ ವಲಸಿಗ ಕಾರ್ಮಿಕರು ಕೊಡಗಿನಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ. ಕಾರ್ಮಿಕ ಇಲಾಖೆ, ರೆಡ್‍ಕ್ರಾಸ್ ಸಹಯೋಗದಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಬಸ್, ಸ್ಯಾನಿಟೈಸರ್, ಮಾಸ್ಕ್, ಜ್ಯೂಸ್, ನೀರು ನೀಡಿ ಕೊಡಗಿನಿಂದ ಸುರಕ್ಷಿತವಾಗಿ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಕಾರ್ಮಿಕ ಇಲಾಖಾಧಿಕಾರಿ ಯತ್ನಟ್ಟಿ ತಿಳಿಸಿದರು. ಸದ್ಯಕ್ಕೆ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳನ್ನು ಸೇರುತ್ತಿದ್ದು 3-4 ತಿಂಗಳು ತಮ್ಮೂರುಗಳಿಂದ ಮತ್ತೆ ಹೊರಬರುವುದು ಸಂಶಯವೇ. ಸ್ಥಳೀಯ ವಾಗಿಯೇ 3 ತಿಂಗಳು ಪಡಿತರ ದೊರಕುವುದರಿಂದಾಗಿ ಅವರಿಗೆ ಆಹಾರ ಭದ್ರತೆ ದೊರಕಿದೆ. ಸ್ಥಳೀಯವಾಗಿಯೇ ಮನ್ರೇಗಾ ಯೋಜನೆಯಡಿ ಕಾರ್ಮಿಕರಿಗೆ ವರ್ಷಪೂರ್ತಿ ಕೆಲಸ ದೊರಕುವುದರಿಂದಾಗಿ ದುಡ್ಡಿನ ಸಮಸ್ಯೆಯೂ ಇಲ್ಲ. ಕೊರೊನಾ ಭೀತಿಯಿಂದಾಗಿ ಮತ್ತೆ ಮನೆ ತೊರೆಯದಂತೆ ಕುಟುಂಬ ಸದಸ್ಯರ ಒತ್ತಡವೂ ಇರುವುದರಿಂದಾಗಿ ಕಾರ್ಮಿಕರು ಕೆಲವು ತಿಂಗಳಲ್ಲಿಯೇ ಊರು ಬಿಟ್ಟು ವಲಸೆ ಬರುವುದು ಕಷ್ಟಸಾಧ್ಯ. ಲಾಕ್‍ಡೌನ್ ಸೃಷ್ಟಿಸಿರುವ ಭಾರೀ ಸಂಕಷ್ಟವನ್ನು ತಡೆದುಕೊಳ್ಳಲು ವಲಸಿಗ ಕಾರ್ಮಿಕರನ್ನೇ ಅವಲಂಬಿಸಿದ ಎಲ್ಲರೂ ಸಿದ್ಧರಾಗಲೇಬೇಕಾಗಿದೆ.

ಕೊನೇ ಹನಿ.

ವಿದ್ಯುತ್ ದೀಪವಿಲ್ಲದ ಕತ್ತಲಕೂಪದಲ್ಲಿ ಪೌಷ್ಟಿಕ ಆಹಾರವನ್ನೂ ಕೇಳದೇ, ಆರೋಗ್ಯ ಕಾಳಜಿಯೂ ಇಲ್ಲದೇ, ಮನೆಯವರಿಂದ ವರ್ಷಗಟ್ಟಲೆ ಕೌಟುಂಬಿಕ ಅಂತರವನ್ನು ಕಾಯ್ದುಕೊಂಡು, ದುಡಿಯವ ಸ್ಥಳವನ್ನೇ ಮನೆಯಾಗಿಸಿಕೊಂಡು ವಿನಮ್ರತೆಯಿಂದ ದುಡಿದ ಶ್ರಮಜೀವಿಗಳೇ. ನಮ್ಮ ನೆಲದಿಂದ ನಿಮ್ಮ ಸ್ವಂತ ನೆಲದ ಮನೆಗೆ ತೆರಳುವಾಗ. ಹೇಗೆ ಹೋಗುತ್ತೀರಿ ಎಂದು ಕೇಳಬೇಕಿತ್ತು. ಆರೋಗ್ಯ ಜೋಪಾನ ಎಂದು ಎಚ್ಚರಿಸಬೇಕಾಗಿತ್ತು. ದಾರಿಖರ್ಚಿಗೆ ಎಂದು ಒಂದಿಷ್ಟು ಹಣ, ಆಹಾರ, ಮಹಿಳೆಯರು, ಮಕ್ಕಳಿಗೆ ಸಿಹಿ, ಬಟ್ಟೆ ನೀಡಬೇಕಾಗಿತ್ತು. ಕೊನೆಯದ್ದಾಗಿ ಮತ್ತೆ ಬರುತ್ತೀರಿ ತಾನೇ ಎಂದು ಕೇಳಬೇಕಾಗಿತ್ತು. ಆದರೆ, ನೀವು ಹೊರಟು ಬಿಟ್ಟಾಗ ನಾವೆಲ್ಲಾ ನಮ್ಮ ಜೀವ ರಕ್ಷಣೆಗಾಗಿ ಮನೆಯೊಳಗೆ ಕುಳಿತು ಬಿಟ್ಟಿದ್ದೆವು. ನಮ್ಮ ಮನೆಮಂದಿಯ ಸಾಂಗತ್ಯದಲ್ಲಿ ಮೈಮರೆತಿದ್ದ ನಾವೆಲ್ಲಾ ನಮಗಾಗಿ, ನಮ್ಮೂರಿಗಾಗಿ ವರ್ಷಾನುಗಟ್ಟಲೆ ದುಡಿದ ಶ್ರಮಜೀವಿಗಳಾದ ನಿಮ್ಮನ್ನು ಆಗ ಯೋಚಿಸಲೇ ಇಲ್ಲ. ಕ್ಷಮಿಸಿಬಿಡಿ ನಮ್ಮನ್ನು, ಮರೆಯದೇ ಬಂದು ಬಿಡಿ ನಮ್ಮೂರಿಗೆ ಮತ್ತೊಮ್ಮೆ ನಮಗಾಗಿ !