ಶನಿವಾರಸಂತೆ, ಮೇ 20: ನಾಲ್ಕು ವರ್ಷ ಪ್ರಾಯದ ಪುಟ್ಟ ಮಗಳೊಂದಿಗೆ ತಾಯಿ ಕೂಡ ನಾಪತ್ತೆಯಾಗಿರುವ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಡೆಹಳ್ಳಿಯ ಪುಟ್ಟಮ್ಮ - ಬಸಪ್ಪ ದಂಪತಿಗಳ ಮೊಮ್ಮಗಳಾದ ಸೌಮ್ಯ (27)ಳನ್ನು 9 ವರ್ಷಗಳ ಹಿಂದೆ ಈಚಲಪುರದ ಪುಟ್ಟರಾಜ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಇವರಿಬ್ಬರ ಸಂಸಾರದಲ್ಲಿ ಜಗಳ ಉಂಟಾಗಿ, 2019 ಜುಲೈ ತಿಂಗಳಲ್ಲಿ ಸೌಮ್ಯಳು ಗಂಡನ ಮನೆಯನ್ನು ತೊರೆದು ತನ್ನ 4 ವರ್ಷದ ಮಗಳನ್ನು ಕರೆದುಕೊಂಡು ಎಡೆಹಳ್ಳಿಯ ತನ್ನ ಅಜ್ಜಿ ಪುಟ್ಟಮ್ಮಳ ಮನೆಗೆ ಬಂದು ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದಳು. ತಾ. 4ರಂದು ಮೊಮ್ಮಗಳು ಸೌಮ್ಯಳು ಸೊಂಟ ನೋವೆಂದು ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು, ಬೆಳಿಗ್ಗೆ 10 ಗಂಟೆಗೆ ತನ್ನ ಮಗಳನ್ನು ಕರೆದುಕೊಂಡು ಅಂಗಡಿಗೆ ಹೋಗಿಬರುತ್ತೇನೆ ಎಂದು ಅಜ್ಜಿ ಪುಟ್ಟಮ್ಮ ಅವರಿಗೆ ಹೇಳಿ ಹೋದವಳು ಇದುವರೆಗೂ ಮನೆಗೆ ವಾಪಾಸು ಬರಲಿಲ್ಲ. ಇದೀಗ ತನ್ನ ಮೊಮ್ಮಗಳು ಆಕೆಯ ಮಗಳನ್ನು ಪತ್ತೆ ಮಾಡಿಕೊಡುವಂತೆ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ, ಠಾಣಾ ಹೆಡ್‍ಕಾನ್ಸ್‍ಟೇಬಲ್ ಲೋಕೇಶ್ ಪ್ರಕರಣ ದಾಖಲಿಸಿದ್ದಾರೆ. ಇವರ ಬಗ್ಗೆ ಪತ್ತೆಯಾದರೆ ಶನಿವಾರಸಂತೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 283333ಗೆ ತಿಳಿಸುವಂತೆ ಕೋರಿದ್ದಾರೆ.