ಕಣಿವೆ, ಮೇ 20: ದೇಶ ವಿದೇಶಗಳ ಅಪಾರ ಪ್ರವಾಸಿ ಗರನ್ನು ತನ್ನತ್ತ ಆಕರ್ಷಿಸುತ್ತಿದ್ದಂತಹ ದುಬಾರೆ ಪ್ರವಾಸಿ ತಾಣ ಇದೀಗ ಅನಾಥವಾಗಿದೆ. ಜಿಲ್ಲೆಯ ಜೀವನದಿ ಕಾವೇರಿ ಸೆರಗಿನಲ್ಲಿನ ಈ ತಾಣ ರಾಜ್ಯದ ಪ್ರವಾಸೋದ್ಯಮಕ್ಕೆ ಹಾಗೂ ಅರಣ್ಯ ಇಲಾಖೆಗೆ ಅಗಾಧವಾದ ಆದಾಯವನ್ನು ತಂದು ಕೊಡುವ ಮೂಲಕ ಸ್ಥಳೀಯ ನಿವಾಸಿಗಳ ಕಾಮಧೇನುವಾಗಿದ್ದ ದುಬಾರೆಗೆ ಇದೀಗ ಅಕ್ಷರಶಃ ಅನಾಥ ಪ್ರಜ್ಞೆ ಕಾಡಿದೆ. ಜಗದಗಲ ಹರಡಿದ ಮಾರಕ ಕೊರೊನಾ ಕಾರಣದಿಂದ ಸರ್ಕಾರ ನಿಷೇಧಿಸಿದ ಪ್ರವಾಸೋದ್ಯಮ ಚಟುವಟಿಕೆಗಳ ಕಾರಣದಿಂದ ಪ್ರವಾಸಿಗರ ಆಗಮನ ಸ್ಥಗಿತಗೊಂಡ ದುಬಾರೆಗೆ ಈ ಸ್ಥಿತಿ ಬಂದಿದೆ. ನದಿ ದಂಡೆಯಲ್ಲಿ ತಲೆ ಎತ್ತಿ ನಿಂತಿರುವ ಕಾಂಕ್ರೀಟ್ ಕಟ್ಟಡಗಳ ಹೊರತಾಗಿ ಕಳೆದ 20 ವರ್ಷಗಳ ಹಿಂದಿನ ದುಬಾರೆ ಹೇಗಿತ್ತೋ ಅದೇ ದುಬಾರೆ ಚಿತ್ರಣ ಇಂದು ಕಾಣಸಿಗುತ್ತಿದೆ ಎನ್ನುತ್ತಾರೆ ಅಲ್ಲಿನ ಪ್ರವಾಸೋದ್ಯಮಿಗಳಾದ ಕೆ.ಎಸ್. ರತೀಶ್ ಹಾಗೂ ಮೋಹನ್ ಕುಮಾರ್. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಇದೇ ದುಬಾರೆಯಲ್ಲಿ ಪ್ರವಾಸಿ ಚಟುವಟಿಕೆಗಳು ಇರಲಿಲ್ಲ. ಸಾಕಾನೆ ಶಿಬಿರದಲ್ಲಿ ಆನೆಗಳಿದ್ದರೂ ಕೂಡ ಪ್ರವಾಸಿಗರಿಗಾಗಿ ಅವುಗಳನ್ನು ಬಳಸಿಕೊಳ್ಳುತ್ತಿರಲಿಲ್ಲ. ಮಳೆಗಾಲದಲ್ಲಿ ಗಿರಿಜನರ ಸಂಚಾರಕ್ಕೆ ಜಿಲ್ಲಾಡಳಿತ ದೋಣಿ ಸಂಚಾರವನ್ನು ಒದಗಿಸಿದ್ದು ಬಿಟ್ಟರೆ ಯಾವೊಬ್ಬ ಪ್ರವಾಸಿಗನೂ ಇತ್ತ ಸುಳಿಯುತ್ತಿರಲಿಲ್ಲ.

2002 ರ ಬಳಿಕ ಆರಂಭದಲ್ಲಿ ದುಬಾರೆಯ ನದಿ ದಂಡೆಯ ನಮ್ಮ ಗದ್ದೆಯೊಳಗೆ ನಿರ್ಮಿಸಿದ ಆರಂಭಿಕ ಕಟ್ಟಡ ಹಾಗೂ ಪ್ರವಾಸಿ ಚಟುವಟಿಕೆಗಳ ನಂತರ ಆನೆ ಶಿಬಿರವೂ ಪ್ರವಾಸಿಗರನ್ನು ಸೆಳೆಯಿತು. ಅಂದು ಕಾವೇರಿ ಶುಭ್ರವಾಗಿಯೇ ಹರಿಯುತ್ತಿದ್ದಳು. ಈಗಲೂ ಅದೇ 20 ವರ್ಷಗಳ ಹಿಂದಿನ ಹಳೆಯ ದಿನಗಳಂತೆ ಶುಭ್ರಳಾಗಿಯೇ ಹರಿಯುತ್ತಿದ್ದಾಳೆ ಎನ್ನುವ ರತೀಶ್, ಪ್ರವಾಸೋದ್ಯಮವನ್ನು ನಂಬಿ ಕಟ್ಟಡಗಳ ಮೇಲೆ ಹಾಕಿದ ಬಂಡವಾಳದ ಭಾರ ತಲೆಯನ್ನು ಸುಡುತ್ತಿದೆ. ನೆಮ್ಮದಿಯನ್ನು ಕಸಿಯುತ್ತಿದೆ. ಪರಿಸ್ಥಿತಿ ಹೀಗೆಯೇ ಆದರೆ ಪ್ರವಾಸೋದ್ಯಮಿಗಳ ಪಾಡೇನಾಗಬಹುದೋ ಏನೋ ಎಂಬ ಕಳವಳ ರತೀಶ್ ರಂತಹ ಇನ್ನು ಅನೇಕ ಪ್ರವಾಸೋದ್ಯಮಿ ಗಳನ್ನು ಕಾಡಿದೆ. ಯಾವಾಗಲೂ ಪ್ರವಾಸಿ ಜನರಿಂದ ಕೂಡಿರುತ್ತಿದ್ದ ದುಬಾರೆ ರಸ್ತೆ ಈಗ ಖಾಲಿ ಖಾಲಿ. ಇನ್ನು ಬೋಟಿಂಗ್ ಹಾಗೂ ಜಲಕ್ರೀಡೆಗಳ ಸಾಧನಗಳೇ ತುಂಬಿರುತ್ತಿದ್ದ ನದಿಯಲ್ಲಿ ಈಗ ಯಾವುದು ಇಲ್ಲದೇ ನದಿಯ ನೀರು ಕೂಡ ಪರಿಶುದ್ಧವಾಗಿದೆ. ಇನ್ನು ಪ್ರವಾಸಿಗರ ಕಿರಿ ಕಿರಿ ಹಾಗೂ ಕರ್ಕಶ ಶಬ್ಧಗಳಿಂದ ಅಲ್ಲಿನ ಸಾಕಾನೆಗಳಿಗೆ ಮುಕ್ತಿ ಸಿಕ್ಕಿದ್ದು ಸಾಕಾನೆಗಳು ಹಾಯಾಗಿವೆ. ದುಬಾರೆಯ ಕಾವೇರಿ ನದಿಯೊಳಗೆ ಅದೆಷ್ಟೋ ಮಂದಿ ಘಟಾನುಘಟಿ ಗಳನ್ನು ಅತ್ತಿಂದಿತ್ತ ಹೊತ್ತೊಯ್ದಿದ್ದ ಯಾಂತ್ರಿಕ ದೋಣಿಯೊಂದು ಲಾಕ್ ಡೌನ್ ಆಗಿ ನದಿ ದಂಡೆಯಲ್ಲಿ ನಿಂತಿದೆ. ಒಟ್ಟಾರೆ ದುಬಾರೆ ಈಗ ಅನಾಥವಾಗಿದೆ.