ನೌಕರರಿಗೆ ಬಯೋಮೆಟ್ರಿಕ್ ಬಳಕೆ ಇಲ್ಲ

ನವದೆಹಲಿ, ಮೇ 19: ಲಾಕ್‍ಡೌನ್ ತಾ. 31 ರವರೆಗೆ ವಿಸ್ತರಿಸಿರುವ ಹಿನ್ನೆಲೆ ಸರ್ಕಾರಿ ನೌಕರರ ಕಚೇರಿ ಹಾಜರಾತಿಗೆ ಬಯೋಮೆಟ್ರಿಕ್ ಬಳಕೆಯನ್ನು ಮುಂದಿನ ಆದೇಶದವರೆಗೆ ಅಮಾನತ್ತಿನಲ್ಲಿಡಲಾಗಿದೆ. ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯ ಈ ವಿಷಯ ತಿಳಿಸಿದ್ದು, ಕೋವಿಡ್-19 ಸೋಂಕು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ಸಿಬ್ಬಂದಿಯ ಹಾಜರಾತಿಯನ್ನು ಉಪಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ದಾಖಲಾತಿಯನ್ನು ಪರಿಶೀಲಿಸಬೇಕು. ದಿನಬಿಟ್ಟು ದಿನ ಶೇ. 50 ರಷ್ಟು ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮಂಡ್ಯದಲ್ಲಿ 71 ಮಂದಿಗೆ ಸೋಂಕು

ಮಂಡ್ಯ, ಮೇ 19: ಮಂಡ್ಯ ಜಿಲ್ಲೆಯಲ್ಲಿ ಮಂಗಳವಾರ ಪತ್ತೆಯಾಗಿರುವ ಎಲ್ಲಾ 71 ಕೊರೊನಾ ಸೋಂಕಿತ ವ್ಯಕ್ತಿಗಳು ಮುಂಬೈನಿಂದ ಆಗಮಿಸಿದವರು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಮಾಹಿತಿ ನೀಡಿದ್ದರು. ಇಂದು ಕೋವಿಡ್-19 ಕುರಿತ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮುಂಬೈನ ಸಂತ ಕ್ರೂಸ್, ಅಂಧೇರಿ, ನೆಹರು ನಗರ, ವಿಲೇ ಪಾರ್ಲೆ ಮತ್ತು ಮುಂಬೈ ಪಶ್ಚಿಮದಲ್ಲಿ ಬಹಳ ವರ್ಷಗಳಿಂದ ಬ್ಯಾಂಕ್, ಹೊಟೇಲ್‍ಗಳಲ್ಲಿ ಕೆಲಸ ಮಾಡುತ್ತಿದ್ದವರು, ಗೃಹಿಣಿಯರು ತಾ. 15 ಹಾಗೂ 16 ರಂದು ಮಂಡ್ಯಕ್ಕೆ ಮರಳಿದ್ದರು. ಅವರ ಗಂಟಲ ದ್ರವಗಳನ್ನು ಸಂಗ್ರಹಿಸಿ ತಪಾಸಣೆ ಕಳುಹಿಸಲಾಗಿತ್ತು. ಪ್ರತಿಯೊಬ್ಬರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು ಎಂದರು. 62 ಸೋಂಕಿತ ಪ್ರಕರಣದಲ್ಲಿ 41 ಪ್ರಕರಣಗಳು ಕೆ.ಆರ್.ಪೇಟೆ, 21 ಪ್ರಕರಣಗಳು ನಾಗಮಂಗಲದಲ್ಲಿ ವರದಿಯಾಗಿವೆ. ಇವರಲ್ಲಿ 26 ಪುರುಷರು, 23 ಮಹಿಳೆಯರು, 7 ಗಂಡು, 6 ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ 1 ವರ್ಷದ ಮಗುವಿನಿಂದ 65 ವರ್ಷದ ವೃದ್ಧರವರೆಗೆ ಎಲ್ಲಾ ವಯೋಮಾನದವರೂ ಇದ್ದಾರೆ ಎಂದು ಮಾಹಿತಿ ನೀಡಿದರು.

ಖಾಸಗಿ ವಾಹನ ಮಾಲೀಕರಿಗೆ ಸಿಹಿ ಸುದ್ದಿ

ಬೆಂಗಳೂರು, ಮೇ 19: ಕೋವಿಡ್-19 ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರವು ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ ನೀಡಿದೆ. ರಾಜ್ಯದ ಖಾಸಗಿ ಬಸ್, ಟೆಂಪೋ, ಟ್ಯಾಕ್ಸಿಗಳಿಗೆ ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡಿದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯದ ವಿವಿಧ ಪ್ರದೇಶದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸೇರಿಸಲು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಇಲ್ಲವೆ ಅಧಿಕೃತ ಪ್ರಾಧಿಕಾರಗಳಿಂದ ಸಂಚಾರಕ್ಕೆ ಅನುಮತಿ ಪಡೆದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಮೂಲಕ ರಾಜ್ಯದ ಖಾಸಗಿ ವಾಹನಗಳಿಗೆ ಸರ್ಕಾರವು ಒಟ್ಟು ಎರಡು ತಿಂಗಳ ತೆರಿಗೆ ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಿದೆ. ಕೋವಿಡ್-19 ಹಿನ್ನೆಲೆ ಕರ್ನಾಟಕ ರಾಜ್ಯವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ. ಆದರೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 16(1)ರ ಅನ್ವಯ ರಾಜ್ಯದಲ್ಲಿ ನೋಂದಾಯಿಸಿರುವ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ತೆರಿಗೆಯನ್ನು ಮಾರ್ಚ್ 24 ರಿಂದ ತಾ. 23 ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಇಬ್ಬರು ಉಗ್ರರÀ ಎನ್‍ಕೌಂಟರ್

ಶ್ರೀನಗರ, ಮೇ 19: ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಮಂಗಳವಾರ ಎನ್‍ಕೌಂಟರ್ ಮಾಡಲಾಗಿದೆ. ಈ ವೇಳೆ ಸಿಆರ್‍ಪಿಎಫ್ ಯೋಧ ಹಾಗೂ ಕಾಶ್ಮೀರದ ಪೊಲೀಸರೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರದ ನವಕಾದಲ್ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಪೈಕಿ ಓರ್ವ ಉಗ್ರ ಶ್ರೀನಗರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದ ಮತ್ತೊಬ್ಬ ಉಗ್ರ ವಿದೇಶಿ ಪ್ರಜೆಯಾಗಿ ರುವ ಸಾಧ್ಯತೆ ಇದೆ. ಹತ್ಯೆಯಾದ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರು ತ್ಯಾಜ್ಯ ಮುಕ್ತ ನಗರ

ಮೈಸೂರು, ಮೇ 19: ಮೈಸೂರು ನಗರವನ್ನು 5 ಸ್ಟಾರ್ ತ್ಯಾಜ್ಯ ಮುಕ್ತ ನಗರವನ್ನಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಘೋಷಿಸಿದೆ. ತಾ. 19 ರಂದು ಕೇಂದ್ರ ಸರ್ಕಾರ ಭಾರತದಲ್ಲಿರುವ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯನ್ನು ಘೋಷಿಸಿದ್ದು ದಕ್ಷಿಣ ಭಾರತದಲ್ಲಿ ಮೈಸೂರು ನಗರ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. ಉಳಿದಂತೆ, ಅಂಬಿಕಾಪುರ್, ರಾಜ್ ಕೋಟ್, ಸೂರತ್, ಇಂದೋರ್, ನವಿ ಮುಂಬೈ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ತ್ಯಾಜ್ಯ ಮುಕ್ತವನ್ನಾಗಿ ಮಾಡಲು ಮೈಸೂರು ನಗರ ಪಾಲಿಕೆಯ ಶ್ರಮ ಫಲ ನೀಡಿದೆ. 25 ಪ್ರಮುಖ ನಿಯತಾಂಕಗಳ ಆಧಾರದಲ್ಲಿ 5 ಸ್ಟಾರ್ ತ್ಯಾಜ್ಯ ಮುಕ್ತ ನಗರಗಳನ್ನು ಘೋಷಿಸಲಾಗಿದೆ. ಬಗ್ಗೆ ಎಂಸಿಸಿ ಆಯುಕ್ತ ಗುರುದತ್ತ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದು, ಆರೋಗ್ಯ ತಂಡ, ಪೌರ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ್ದಾರೆ. ಸತತ ಎರಡನೇ ಬಾರಿಗೆ 5 ಸ್ಟಾರ್ ರೇಟಿಂಗ್ ಬರುವಂತೆ ಮಾಡಿದ ಕೀರ್ತಿ ಪೌರ ಕಾರ್ಮಿಕರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.