ಘರ್ಷಣೆ ತಪ್ಪಿಸಲು ಪ್ರಯತ್ನಿಸಿದಾತನ ಮೇಲೆ ಹಲ್ಲೆ ಮಡಿಕೇರಿ, ಮೇ 19: ವೀರಾಜಪೇಟೆಯಲ್ಲಿ ಗಾಂಜಾ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಈ ನಡುವೆ ಗಾಂಜಾ ವಿಚಾರದಲ್ಲಿ ಗುಂಪು ಗಲಭೆ ಉಂಟಾಗಿ ರೊಚ್ಚಿಗೆದ್ದ ಯುವಕರ ತಂಡ ವ್ಯಕ್ತಿಯೋರ್ವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯೂ ನಡೆದಿದೆ.ವೀರಾಜಪೇಟೆ ಪಟ್ಟಣದಲ್ಲಿ ಗಾಂಜಾ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ

(ಮೊದಲ ಪುಟದಿಂದ) ಮಾರ್ಗದರ್ಶನದಲ್ಲಿ ಹದಿನೈದು ಮಂದಿ ಗಾಂಜಾ ವ್ಯಾಪಾರಿಗಳನ್ನು ಬಂಧಿಸಿರುವ ಬಗ್ಗೆ ತಿಳಿದುಬಂದಿದೆ. ಈ ಬೆಳವಣಿಗೆಯ ನಡುವೆ ಇಂದು ಗಾಂಜಾ ವಿಚಾರಕ್ಕೆ ಸಂಬಂಧಿಸಿದಂತೆ ವೀರಾಜಪೇಟೆಯ ಮಾಂಸ ವ್ಯಾಪಾರಿ ಯಾಕೂಬ್ ಖಾನ್ ಹಾಗೂ ಶಬೀರ್ ಎಂಬಾತನ ನಡುವೆ ಬೆಳಿಗ್ಗೆ ಕಲಹವಾಗಿದೆ.

ರಾತ್ರಿ ವೇಳೆ ಎರಡು ಬೈಕ್‍ನಲ್ಲಿ ಬಂದ ಶಬೀರ್ ಹಾಗೂ ಇತರ ನಾಲ್ವರು ಸಹಚರರು ಯಾಕೂಬ್ ಮೇಲೆ ಕತ್ತಿ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಯಾಕೂಬ್‍ಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ವೀರಾಜಪೇಟೆ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.