ಸೋಮವಾರಪೇಟೆ, ಮೇ 20: ತಾ. 19ರಂದು ಸಂಜೆ ಶನಿವಾರಸಂತೆಯಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ 2 ಮತ್ತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು, ಪಟ್ಟಣ ಸಮೀಪದ ಗ್ರಾಮದಲ್ಲಿ ನಿಲ್ಲಿಸಿದ್ದ ಟಾಟಾ 407 ವಾಹನಕ್ಕೆ ಬೆಂಕಿಬಿದ್ದಿದೆ.ತಾ. 19ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ನಿನ್ನೆ ದಿನ ಶನಿವಾರಸಂತೆ ಪೊಲೀಸ್ ಠಾಣಾ ಆವರಣದಲ್ಲಿ ಸಿನಿಮೀಯ ರೀತಿಯ ಘಟನೆಗಳು ನಡೆದಿದ್ದು, ಘಟನೆಗಳು ಕೋಮು ಬಣ್ಣ ಪಡೆಯುವ ಮೊದಲೇ ಪೊಲೀಸರು ಎಚ್ಚೆತ್ತು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.ಏನಿದು ಘಟನೆ?: ತಾ. 19ರಂದು ಸಂಜೆ 5 ಗಂಟೆ ಸುಮಾರಿಗೆ ಶನಿವಾರಸಂತೆಯ ಉಮಾಸುತ ಎಂಬವರ ಮನೆಯ ಎದುರು ವಾಗ್ವಾದ ನಡೆಯುತ್ತಿದ್ದ ಸಂದರ್ಭ ವಿಚಾರಿಸಲು ಹೊರಬಂದ ಉಮಾಸುತ ಮತ್ತು ಪುತ್ರ ದರ್ಶನ್ ಮೇಲೆ ಶನಿವಾರಸಂತೆಯ ಇರ್ಫಾನ್ ಪಾಷ, ರಿಯಾನ್ ಎಂಬವರುಗಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಗೆ ರಾತ್ರಿ ದೂರು ನೀಡಲಾಗಿತ್ತು.
ಇದೇ ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆಯ ಇರ್ಫಾನ್ ಪಾಷ, ಅಲ್ಲಿನ ಠಾಣೆಗೆ ಪ್ರತಿದೂರು ನೀಡಿದ್ದು, ದರ್ಶನ್ ಮನೆಯಲ್ಲಿ ಬಾಡಿಗೆ ಇರುವ ರಹೀಂನ ಅಣ್ಣನ ಮಗಳ ವಿಷಯವಾಗಿ ಉಮಾಸುತ ಅವರು ಇಲ್ಲಸಲ್ಲದ ವಿಷಯಗಳನ್ನು ಮಾತನಾಡಿದ್ದು, ಈ ಬಗ್ಗೆ ಕೇಳಲು
(ಮೊದಲ ಪುಟದಿಂದ) ತೆರಳಿದ ತನ್ನ ಮೇಲೆ ಈರ್ವರು ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ಕಡೆಯಿಂದ ಬಂದ ದೂರಿನ ಆಧಾರದ ಮೇರೆ ಇರ್ಫಾನ್ ಪಾಷ, ರಿಯಾನ್, ದರ್ಶನ್ ಮತ್ತು ಉಮಾಸುತ ಅವರುಗಳ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.
ಈ ಮಧ್ಯೆ ದರ್ಶನ್ ಮೇಲೆ ಹಲ್ಲೆ ನಡೆಸಿದ ವಿಷಯ ಎಲ್ಲೆಡೆ ಹರಡಿದ್ದು, ನೆರೆಯ ಹಾಸನ ಜಿಲ್ಲೆಯ ಸಕಲೇಶಪುರದಿಂದಲೂ ಆತನ ಸಂಬಂಧಿಕರು ಶನಿವಾರಸಂತೆಗೆ ಆಗಮಿಸಿ, ಹಲ್ಲೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸ್ಥಳೀಯರೊಂದಿಗೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಘಟನೆ ಬೇರೊಂದು ಮಗ್ಗುಲಿಗೆ ಹೊರಳಿ ಕೋಮು ಬಣ್ಣ ಪಡೆಯುವ ಹಂತದಲ್ಲಿದ್ದ ಸಂದರ್ಭ, ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಎರಡೂ ಬಣಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು, ಸಮಾಧಾನ ಮಾಡುವ ಯತ್ನ ನಡೆಸಿದ್ದಾರೆ.
ವಾಹನಕ್ಕೆ ಬೆಂಕಿ: ನಿನ್ನೆ ದಿನ ಸಂಜೆಯವರೆಗೂ ಈ ಪ್ರಕರಣ ಶನಿವಾರಸಂತೆ ವ್ಯಾಪ್ತಿಯಲ್ಲಿ ಚರ್ಚೆಯಾಗುತ್ತಿದ್ದು, ಇಂದು ಬೆಳಗ್ಗಿನಿಂದ ಸೋಮವಾರಪೇಟೆಗೂ ವ್ಯಾಪಿಸಿದೆ. ಇರ್ಫಾನ್ ಪಾಷನ ಸಹೋದರ ಜಾಕೀರ್ ಪಾಷಾ ಅವರ ಪತ್ನಿ ನಾಜಿಯಾ ತಬಸ್ಸುಂ ಮಾಲೀಕತ್ವದ ಟಾಟಾ 407 ವಾಹನ, ಪಟ್ಟಣ ಸಮೀಪದ ಹುಲ್ಲೂರಿಕೊಪ್ಪ ಗ್ರಾಮಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಕಂಡುಬಂದಿದೆ.
ಈ ಬಗ್ಗೆ ಜಾಕೀರ್ ಪಾಷಾ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದು, ಶನಿವಾರಸಂತೆಯ ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳು ತನ್ನ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕೆ.ಎ. 12 ಬಿ. 3537 ಸಂಖ್ಯೆಯ ಟಾಟಾ 407 ವಾಹನವು ನಾಜಿಯಾ ತಬಸ್ಸುಂರವರ ಮಾಲೀಕತ್ವದಲ್ಲಿದ್ದು, ಇರ್ಫಾನ್ ಪಾಷಾ ಅದನ್ನು ಟಿಂಬರ್ ಕೆಲಸಕ್ಕೆ ಉಪಯೋಗಿಸುತ್ತಿದ್ದಾರೆ. ನಿನ್ನೆ ದಿನ ಕಾನ್ವೆಂಟ್ಬಾಣೆಯ ಅನಿಲ್ ಅವರಿಗೆ ಸೇರಿದ ಹುಲ್ಲೂರಿಕೊಪ್ಪ ಗ್ರಾಮದಲ್ಲಿರುವ ತೋಟದಲ್ಲಿ ಟಿಂಬರ್ ಎಳೆಯಲು ತಂದಿದ್ದ ವಾಹನವನ್ನು ಸಂಜೆ ರಸ್ತೆ ಬದಿಯಲ್ಲಿ ನಿಲ್ಲಿಸಿ, ಮನೆಗೆ ವಾಪಸ್ ತೆರಳಿದ್ದರು.
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನ ಇಂದು ಬೆಳಿಗ್ಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದ್ದು, ಶನಿವಾರಸಂತೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಯಾರೋ ದುಷ್ಕರ್ಮಿಗಳು ದ್ವೇಷದಿಂದ ಈ ಕೃತ್ಯ ಎಸಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಎಸ್.ಪಿ. ಭೇಟಿ: ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನದ ಮಾಲೀಕರಿಂದ ಮಾಹಿತಿ ಪಡೆದ ಎಸ್.ಪಿ., ಇಲಾಖೆಯ ಅಧಿಕಾರಿಗಳಿಗೆ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ನಂತರ ಶನಿವಾರಸಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಳೆದ ಎರಡು ದಿನಗಳಿಂದ ನಡೆದ ಘಟನಾವಳಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ.
ಘಟನೆಯ ಬಗ್ಗೆ ಡಿವೈಎಸ್ಪಿ ಶೈಲೇಂದ್ರ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಶನಿವಾರಸಂತೆ ಠಾಣಾಧಿಕಾರಿ ಕೃಷ್ಣನಾಯಕ್ ಅವರುಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚರ್ಚಿಸಿದ್ದು, ತನಿಖೆಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.
ಕೆಎಸ್ಆರ್ಪಿ ತುಕಡಿ: ಎರಡು ಕೋಮುಗಳಿಗೆ ಸೇರಿದ ಮಂದಿಯ ನಡುವೆ ಘರ್ಷಣೆ ನಡೆದಿದ್ದರಿಂದ, ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸ್ ಇಲಾಖೆ, ಸೋಮವಾರಪೇಟೆಗೆ ಒಂದು ಕೆಎಸ್ಆರ್ಪಿ ತುಕಡಿಯನ್ನು ನಿಯೋಜನೆ ಮಾಡಿದೆ.
ಠಾಣಾಧಿಕಾರಿ ಸೇರಿದಂತೆ 25 ಮಂದಿ ಪೊಲೀಸರ ತಂಡ ಸೋಮವಾರಪೇಟೆಯಲ್ಲಿ ಬೀಡುಬಿಟ್ಟಿದೆ. ಕೋಮು ಸೂಕ್ಷ್ಮ ಪ್ರದೇಶ ಎಂದೇ ಬಿಂಬಿತವಾಗಿರುವ ಪಟ್ಟಣದಲ್ಲಿ ಕೋಮು ಸಂಬಂಧಿತ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರ ನಿಯೋಜನೆಯಾಗಿದೆ.