ಬಸ್ ಸಂಚಾರ ಸಮಯ ಬದಲಾವಣೆ

ಬೆಂಗಳೂರು, ಮೇ 20: ಕೆ.ಎಸ್.ಆರ್.ಟಿ.ಸಿ. ಬಸ್‍ಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಹಿಂದೆ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ಒಳಗಾಗಿ ಸಂಚಾರವನ್ನು ಮುಕ್ತಾಯ ಮಾಡಲಾಗುತ್ತಿತ್ತು. ಈ ಆದೇಶವನ್ನು ಗುರುವಾರದಿಂದ ಮಾರ್ಪಡಿಸಲಾಗಿದೆ. ಕೊನೆಯ ಬಸ್ ಸಂಜೆ 7 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣವನ್ನು ಬಿಡಲಿದ್ದು, ಇದರಿಂದ ದೂರದ ಉತ್ತರ ಕರ್ನಾಟಕದ ನಗರಗಳನ್ನು ತಲುಪಲು ಸಹಕಾರಿಯಾಗಲಿದೆ. ಕಲಬುರುಗಿ, ಬೀದರ್ ನಗರಗಳ ಬಸ್‍ಗಳು ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ ತಲುಪಲಿದೆ. ಇದು ಎಲ್ಲಾ ಸ್ಥಳಗಳಿಗೆ ಕಾರ್ಯಾಚರಣೆಯಾಗುವ ಬಸ್‍ಗಳಿಗೂ ಅನ್ವಯಿಸುತ್ತದೆ. ಇದೇ ಮಾದರಿಯ ಬಸ್‍ಗಳ ಕಾರ್ಯಾಚರಣೆಗಳನ್ನು ಮುಂದಿನ ಆದೇಶದವರೆಗೂ ಮುಂದುವರೆಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಪ್ರಕಟಣೆ ತಿಳಿಸಿದೆ. ಪ್ರಯಾಣಿಕರು ಮುಂಗಡ ಟಿಕೇಟು ಕಾಯ್ದಿರಿಸಲು ಕೋರಿದ್ದು, ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಕಲಬುರ್ಗಿ, ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಹರಪ್ಪನಹಳ್ಳಿ, ಕೊಪ್ಪಳ, ಕಾರವಾರ, ಮಂಗಳೂರು, ಮಡಿಕೇರಿ, ಮೈಸೂರು, ರಾಯಚೂರು, ಶಿವಮೊಗ್ಗ, ಶಿರಸಿ, ವಿಜಯಪುರ, ಉಡುಪಿ, ಯಾದಗಿರಿ. ಬೆಳಗಾವಿ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ದಾವಣಗೆರೆ, ಕಲಬುರ್ಗಿ, ಗಂಗಾವತಿ, ಹುಬ್ಬಳ್ಳಿ, ಹಡಗಲಿ, ಹರಿಹರ, ಹೊಸಪೇಟೆ, ಕಂಪ್ಲಿ, ಕುಂದಾಪುರ, ಕುಮಟಾ, ಕೊಪ್ಪಳ, ಕುಷ್ಠಗಿ, ಮಂಗಳೂರು, ಮಡಿಕೇರಿ, ಮೈಸೂರು, ವಿಜಯಪುರ, ಸಂಡೂರು, ಶಿವಮೊಗ್ಗ, ಶಿರಗುಪ್ಪ, ಶಿರಸಿ, ಉಡುಪಿ, ಯಾದಗಿರಿ, ಯಲಬುರ್ಗ, ಯಲ್ಲಾಪುರ ದಿಂದ ಬೆಂಗಳೂರಿಗೆ ಮುಂಗಡ ಟಿಕೇಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ.

ಕೇರಳದಲ್ಲಿ ಬಸ್ ಸಂಚಾರ ಆರಂಭ

ತಿರುವನಂತಪುರಂ, ಮೇ 20: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವುದಕ್ಕಾಗಿ ಮಾರ್ಚ್ 25 ರಂದು ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ ಪರಿಣಾಮ 56 ದಿನಗಳ ನಂತರ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಬಸ್ ಸಂಚಾರ ಆರಂಭಿಸಿದ್ದು, ಅಂತರ್ ಜಿಲ್ಲಾ ಪ್ರಯಾಣಕ್ಕೂ ಅನುಮತಿ ನೀಡಲಾಗಿದೆ. ಲಾಕ್‍ಡೌನ್ 4.0 ಮಾರ್ಗಸೂಚಿಗಳ ಪ್ರಕಾರ, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಬಸ್ ಸಂಚರಿಸಲಿದ್ದು, 1850 ಬಸ್‍ಗಳು ಅಂತರ್ ಜಿಲ್ಲಾ ಪ್ರಯಾಣಕ್ಕೆ ಸಿದ್ಧವಾಗಿವೆ. ಬಸ್ ಸಂಚಾರ ಆರಂಭವಾಗಿದ್ದರೂ ಕೊರೊನಾ ಭಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಆದಾಗ್ಯೂ, ಕೆಲವು ಬಸ್‍ಗಳಲ್ಲಿ ಜನಸಂದಣಿ ಕಳವಳಕ್ಕೆ ಕಾರಣ ವಾಗಿದ್ದು, ಲಾಕ್‍ಡೌನ್ ಮಾರ್ಗಸೂಚಿಗಳ ಪ್ರಕಾರ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ತಾ. 25 ರಿಂದ ವಿಮಾನಗಳ ಹಾರಾಟ

ನವದೆಹಲಿ, ಮೇ 20: ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ತಾ. 25 ರಿಂದ ಹಂತ ಹಂತವಾಗಿ ವಿಮಾನ ಸೇವೆಗಳು ಆರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಿಳಿಸಿದ್ದಾರೆ. ಈ ಸಂಬಂಧ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳಿಗೆ ಮಾಹಿತಿ ರವಾನಿಸಲಾಗಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಮಾರ್ಚ್ 25 ರಿಂದ ಎಲ್ಲ ದೇಶಿಯ ಹಾಗೂ ಅಂತರ ರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಲಾಕ್‍ಡೌನ್ ಅವಧಿಯಲ್ಲಿ ಸರಕು ಸಾಗಾಣಿಕೆ, ಕೆಲ ವಿಶೇಷ ಸೇವೆಗಳ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. 2020 ತಾ. 25 ರಿಂದ ದೇಶಿಯ ವಿಮಾನಗಳ ಪ್ರಯಾಣ ಆರಂಭವಾಗಲಿದೆ. ಹಂತ ಹಂತವಾಗಿ ವಿಮಾನಗಳ ಸೇವೆಗಳ ಲಭ್ಯವಾಗಲಿವೆ. ಎಲ್ಲ ವಿಮಾನ ನಿಲ್ದಾಣಗಳು, ವಿಮಾನ ಸಂಸ್ಥೆಗಳಿಗೆ ಈ ಸಂಬಂಧ ಮಾಹಿತಿ ರವಾನಿಸ ಲಾಗಿದೆ. ಸಿದ್ಧವಾಗಿರುವಂತೆ ಸೂಚಿಸಿದ್ದೇವೆ. ಪ್ರಯಾಣಿಕರ ಸಂಚಾರ, ಜಾಗ್ರತೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಚಿವಾಲಯ ಸದ್ಯದಲ್ಲೇ ಬಿಡುಗಡೆ ಮಾಡಲಿದೆ ಎಂದು ಹರದೀಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಚಂಡಮಾರುತ ಆಘಾತ

ಕೋಲ್ಕತಾ, ಮೇ 20: ಈಗಾಗಲೇ ಮಹಾಮಾರಿ ಕೊರೊನಾ ವೈರಸ್‍ನಿಂದ ತತ್ತರಿಸಿರುವ ಪಶ್ಚಿಮ ಬಂಗಾಳಕ್ಕೆ ಈಗ ಸೂಪರ್ ಚಂಡಮಾರುತ ಅಂಫಾನ್ ಆಘಾತ ಎದುರಾಗಿದೆ. ಪಶ್ಚಿಮ ಬಂಗಾಳದ ದಿಘಾದಿಂದ ದಕ್ಷಿಣಕ್ಕೆ ಸುಮಾರು 170 ಕಿ.ಮೀ. ದೂರದಲ್ಲಿರುವ ಅಂಫಾನ್ ಚಂಡಮಾರುತವು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಅತ್ಯಂತ ತೀವ್ರವಾದ ಚಂಡಮಾರುತವಾಗಿದೆ. ಅಂಫಾನ್ ಇಂದು ಮಧ್ಯಾಹ್ನದ ನಂತರ ಸುಂದರ್‍ಬನ್ಸ್‍ಗೆ ಅಪ್ಪಳಿಸುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಹಲವು ಗ್ರಾಮಗಳ ಜನರನ್ನು ತಾತ್ಕಾಲಿಕ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸದ್ಯದಲ್ಲೇ ಒಡಿಶಾಕ್ಕೂ ಅಪ್ಪಳಿಸಲಿರುವ ಈ ಚಂಡಮಾರುತ ತಾನು ಹೋದ ದಾರಿಯಲ್ಲೆಲ್ಲ ಭಾರೀ ಹಾನಿ ಉಂಟು ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆ ಎರಡೂ ರಾಜ್ಯಗಳಲ್ಲಿ ಸಮರೋಪಾದಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.