ಸಿದ್ದಾಪುರ, ಮೇ 19: ಅಪರಿಚಿತ ವಾಹನವೊಂದು ವ್ಯಕ್ತಿಯೋರ್ವನಿಗೆ ಡಿಕ್ಕಿ ಪಡಿಸಿ ಪರಾರಿಯಾಗಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ಕೆ.ಎ. ವಿಜಯ್ ಎಂಬವರ ಕಾಫಿ ತೋಟದ ಕಾವಲುಗಾರ ಕೃಷ್ಣ ಎಂಬವರು ಮಂಗಳವಾರದಂದು ಮಧ್ಯಾಹ್ನ ನಂತರ ಕೆಲಸ ಮುಗಿಸಿಕೊಂಡು ಮುಖ್ಯರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುವ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಪಡಿಸಿ ಪರಾರಿಯಾಗಿದೆ. ಕೃಷ್ಣ ಅವರ ಕಾಲಿನ ಮೂಳೆ ಮುರಿದು ಸ್ಥಳದಲ್ಲಿ ಕಿರುಚಾಡುತ್ತಿದ್ದ ಶಬ್ಧವನ್ನು ಕೇಳಿ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಚಾಲಕರು ಅವರನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗೆ ದಾಖಲಿಸಿದ್ದಾರೆ. ಗಾಯಾಳು ಕೃಷ್ಣ ನೆಲ್ಯಹುದಿಕೇರಿ ಬರಡಿ ನಿವಾಸಿಯಾಗಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಠಾಣೆಯ ಮುಖ್ಯಪೇದೆ ಸುಕನ್ಯಾ ಹಾಗೂ ಸಿಬ್ಬಂದಿ ಮಲ್ಲಪ್ಪ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ಕೃಷ್ಣನನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ.