ವೀರಾಜಪೇಟೆ, ಮೇ 19: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖುಣಭಾರ ಪತ್ರ (ಇ.ಸಿ.) ಪಡೆಯಲು ರಾಜ್ಯ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತಂದಿರುವುದರಿಂದ ಜನಸಾಮಾನ್ಯರು ರೈತರು, ಭೂ ಹಿಡುವಳಿದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ರೀತಿ ಮುಂದುವರೆದರೆ ಲಾಕ್‍ಡೌನ್ ನಡುವೆಯು ಉಪ ನೋಂದಣಿ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ನಗರ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ನರೇಂದ್ರ ಕಾಮತ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಂದ್ರ ಕಾಮತ್ ಅವರು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಾ¯ ಪಡೆಯಲು ಖುಣಭಾರ ದೃಢೀಕರಣ ಪತ್ರ ಅತ್ಯವಶ್ಯಕ. ಈ ಹಿಂದೆ ಉಪ ನೋಂದಣಾ ಕಚೇರಿಯಲ್ಲಿ ಖುಣಭಾರ ಪತ್ರವನ್ನು ಸರಳವಾಗಿ ಪಡೆಯಬಹುದಿತ್ತು. ಹೊಸ ನಿಯಮದ ಪ್ರಕಾರ ಆನ್‍ಲೈನ್ ಮೂಲಕ ಪಡೆದುಕೊಳ್ಳಲು ಸರ್ಕಾರ ಆದೇಶಿಸಿದೆ. ಆನ್‍ಲೈನ್‍ನಲ್ಲಿ ಒಂದು ಸರ್ವೆ ಸಂಖ್ಯೆಗೆ 50 ರೂ.ಗಳನ್ನು ಪಾವತಿಸಬೇಕು. ಹಣ ಪಾವತಿಸಿದರೂ ತಾಂತ್ರಿಕ ದೋಷದಿಂದ ಖುಣಭಾರ ಪತ್ರ ಲಭಿಸುತ್ತಿಲ್ಲ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ನೋಂದಣಿ ಅಧಿಕಾರಿ, ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆಯಾದರೂ ಈ ತನಕ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗ ವಿಎಸ್‍ಎಸ್‍ಎನ್‍ಗಳಲ್ಲಿ ಕೃಷಿಕರಿಗೆ ಮೂರು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುತ್ತಿದ್ದರು. ಈ ಸರ್ಕಾರ ಇದನ್ನು ತಿದ್ದುಪಡಿ ಮಾಡಿ ಕುಟುಂಬದಲ್ಲಿ ಓರ್ವ ವ್ಯಕ್ತಿಗೆ ಮಾತ್ರ ಬಡ್ಡಿರಹಿತ ಸಾಲ ನೀಡಿ ಇತರರಿಗೆ ಶೇ. 7 ರ ಬಡ್ಡಿ ದರದಲ್ಲಿ ಸಾಲ ನೀಡುವ ತೀರ್ಮಾನ ಕೈಗೊಂಡಿದೆ. ಸರ್ಕಾರ ಇಂತಹ ರೈತರ ವಿರುದ್ಧದ ಸುತ್ತೋಲೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ, ಜಿಲ್ಲೆಯ ಯಾವ ಪಂಚಾಯಿತಿಗಳಲ್ಲಿ ಇಲ್ಲದ ನೀರು ಹಾಗೂ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಅವೈಜ್ಞಾನಿಕವಾಗಿ ಏರಿಕೆ ಮಾಡಿದ್ದು ಇದ್ದನ್ನು ತೀವ್ರವಾಗಿ ಖಂಡಿಸುತ್ತೇವೆ. ತೆರಿಗೆ ಪರಿಷ್ಕರಣೆ ಮುಂದುವರೆದರೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ನಗರ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ರಜತ್ ಶೇಟ್, ಕಾಂಗ್ರೆಸ್ ಪಕ್ಷದ ಮರ್ವಿನ್ ಲೋಬೋ ಉಪಸ್ಥಿತರಿದ್ದರು.