ವೀರಾಜಪೇಟೆ, ಮೇ 18: ಕೊರೊನಾ ವೈರಸ್ ಹರಡುವ ಭೀತಿ ಸಂಬಂಧ ರೋಗ ಪತ್ತೆ ಹಚ್ಚಲು ಗಂಟಲು ದ್ರವ ತೆಗೆಯುವ ವೈದ್ಯರಿಗೆ ಸುರಕ್ಷಾ ಬಾಕ್ಸ್‍ಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಕೊರೊನಾ ವಾರ್ಡ್‍ನ ಜೊತೆಯಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ಸುರಕ್ಷಾ ಬಾಕ್ಸ್‍ಗೆ ಚಾಲನೆ ನೀಡಿದ ನಂತರ ಮಾತನಾಡಿದ ಬೋಪಯ್ಯ ಅವರು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ವಾರಿಯರ್ಸ್‍ಗಳಿಗೆ ಇಂತಹ ಸುರಕ್ಷಾ ಬಾಕ್ಸ್ ಅಗತ್ಯವಾಗಿದೆ ಎಂದರು.

ಈ ಸಂದರ್ಭ ಜಿ.ಪಂ. ಸದಸ್ಯರುಗಳಾದ ಶಶಿ ಸುಬ್ರಮಣಿ, ಭವ್ಯ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ:ವಿಶ್ವನಾಥ್ ಸಿಂಪಿ ಮತ್ತಿತರರು ಹಾಜರಿದ್ದರು.

ಗಂಟಲು ದ್ರವ ತೆಗೆಯುವ ಸಂದರ್ಭ ಬಳಸುವ ಸುರಕ್ಷಾ ಬಾಕ್ಸ್‍ನ್ನು ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದರು.