ಶ್ರೀಮಂಗಲ, ಮೇ 18: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದ ಕಳ್ಳೇಂಗಡ ದಿನೇಶ್ ದೇವಯ್ಯ ಅವರ ಜರ್ಸಿ ತಳಿಯ ಹಸುವನ್ನು ಭಾನುವಾರ ಹಾಡಹಗಲೆ ಹುಲಿ ದಾಳಿಮಾಡಿ ಕೊಂದು ಹಾಕಿದ ಘಟನೆ ನಡೆದಿದ್ದು ರಾತ್ರಿ ಅರವಳಿಕೆ ತಜ್ಞ ಡಾ. ಸನತ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದ ನಡೆಸಿದ ಕಾರ್ಯಾಚರಣೆ ವಿಫಲಗೊಂಡಿದೆ. ರಾತ್ರಿ ಹುಲಿ ಹಸುವನ್ನು ಭಾಗಶಃ ತಿಂದು ಹಾಕಿದೆ. ಇದರಿಂದ ಈ ಭಾಗದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ಕಳೆದ 2 ತಿಂಗಳಿನಿಂದ ನಡಿಕೇರಿ, ತೂಚಮಕೇರಿ, ಕಾನೂರು, ನಾಲ್ಕೇರಿ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ 30 ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ಹಾಕಿರುವ ಹುಲಿಯ ಉಪಟಳದಿಂದ ಸಾರ್ವಜನಿಕರು ಬೇಸತ್ತುಹೋಗಿದ್ದಾರೆ. ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಕೆಲವು ದಿನಗಳಿಂದ ವಿವಿಧ ರೀತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರೂ ಹುಲಿ ಹಿಡಿಯಲು ಅಸಾಧ್ಯವಾಗಿದ್ದು. ಇಲಾಖೆ ಸಾರ್ವಜನಿಕರ ಒತ್ತಡಕ್ಕೆ ಸಿಲುಕಿದ್ದಾರೆ.
ಭಾನುವಾರ ರಾತ್ರಿ ಕಳ್ಳೇಂಗಡ ದಿನೇಶ್ ದೇವಯ್ಯರವರ ಹಸುವನ್ನು ಕೊಂದು ಹಾಕಿದ ಸ್ಥಳದಲ್ಲಿ ಹುಲಿಯನ್ನು ಹಿಡಿಯಲು ಅತ್ಯುತ್ತಮ ಅವಕಾಶವಿದ್ದರೂ ಕಾರ್ಯಾಚರಣೆ ವಿಫಲವಾಗಿರುವ ಬಗ್ಗೆ ಆಕ್ರೋಶಗೊಂಡ ಸಾರ್ವಜನಿಕರ ಪರವಾಗಿ ಟಿ. ಶೆಟ್ಟಿಗೇರಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಎ.ಪಿ.ಎಂ.ಸಿ. ಸದಸ್ಯ ಕಟ್ಟೇರ ಈಶ್ವರ ಈ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮಾಹಿತಿ ನೀಡಿದ್ದರು. ಶಾಸಕರು ಸ್ಥಳಕ್ಕೆ ಬೇಟಿ ನೀಡಿ ಹಸುವನ್ನು ಕಳೆದುಕೊಂಡ ಬೆಳೆಗಾರ ಕಳ್ಳೇಂಗಡ ದಿನೇಶ್ ದೇವಯ್ಯ ಕುಟುಂಬದವರಿಗೆ ಸಾಂತ್ವನ ಹೇಳುವುದರೊಂದಿಗೆ ಸೂಕ್ತ ಪರಿಹಾರವನ್ನು ಇಲಾಖೆಯಿಂದ ಕೊಡಿಸುವ ಭರವಸೆ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದರು.
ಈ ಸಂದರ್ಭ ಕಟ್ಟೇರ ಈಶ್ವರ ಭಾನುವಾರ ಸಾರ್ವಜನಿಕರ್ಯಾರು ಹುಲಿ ಹಸುವನ್ನು ಕೊಂದು ಹಾಕಿದ ಸ್ಥಳಕ್ಕೆ ಹೋಗದೆ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡಚಣೆ ಮಾಡದೆ ಎಲ್ಲಾ ರೀತಿಯ ಸಹಕಾರ ನೀಡಿದರೂ ಹುಲಿ ಹಿಡಿಯುವಲ್ಲಿ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಕೆಲವು ದಿನಗಳ ಸಮಯಾವಕಾಶವನ್ನು ಕೋರಿದ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಇನ್ನೂ 4 ದಿನದಲ್ಲಿ ಹುಲಿ ಹಿಡಿದು ಸಮಸ್ಯೆ ಪರಿಹರಿಸಬೇಕೆಂದು ಪ್ರಭಾರ ಡಿ.ಎಫ್.ಒ ಕೊಣೇರಿರ ರೋಷಿನಿ, ಎ.ಸಿ.ಎಫ್. ಶ್ರೀಪತಿ, ಪೊನ್ನಂಪೇಟೆ ವಲಯ ಆರ್.ಎಫ್.ಒ ಅರಮಣಮಡ ತೀರ್ಥ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಚೀಯಕಪೂವಂಡ ಕೆ. ಬೋಪಣ,್ಣ ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ, ವೀರಾಜಪೇಟೆ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಚೇಂಬರ್ ಆಫ್ ಕಾರ್ಮಸ್ ರಾಜ್ಯ ಸಮಿತಿ ನಿರ್ದೇಶಕ ಕಾಡ್ಯಮಾಡ ಗಿರೀಶ್ ಗಣಪತಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅದೇಂಗಡ ವಿನು ಚಂಗಪ್ಪ, ಶಾಸಕರ ಆಪ್ತ ಸಹಾಯಕ ಮಲ್ಲಂಡ ಮಧು, ಬಿ.ಜೆ.ಪಿ. ಯುವಮೋರ್ಚ ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಪೊನ್ನಂಪೇಟೆ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು, ಬಿ.ಜೆ.ಪಿ. ಪ್ರಮುಖರಾದ ಪಂದ್ಯಂಡ ಹರೀಶ್, ಕೃಷಿಕ ಮುಖಂಡರಾದ ಕಟ್ಟೇರ ಮಿಲನ್, ಗಿಲನ್, ಕವನ್, ಉದಯ, ಕರ್ಣಂಡ ಚಲನ್, ಮಚ್ಚಮಾಡ ರೋಷನ್ ಮತ್ತಿತರರು ಹಾಜರಿದ್ದರು.