ಒಂದೇ ದಿನ 99 ಮಂದಿಗೆ ಕೋವಿಡ್
ಬೆಂಗಳೂರು, ಮೇ 18 : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 99 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ. ಇಂದು ಬೆಳಗ್ಗೆ 84 ಹಾಗೂ ಸಂಜೆ 15 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಇಲ್ಲಿಯವರೆಗೆ ರಾಜ್ಯದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಪ್ರಕರಣವಾಗಿದೆ. ಮಂಡ್ಯದಲ್ಲಿ 17 ಹಾಗೂ ಬೆಂಗಳೂರು ನಗರದಲ್ಲಿ 24 ಪ್ರಕರಣಗಳು ವರದಿಯಾಗಿವೆ. ಹಾಸನದಲ್ಲಿ 4, ರಾಯಚೂರಿನಲ್ಲಿ 6, ಬೆಂಗಳೂರು ನಗರದಲ್ಲಿ 24, ಕೊಪ್ಪಳದಲ್ಲಿ 3, ವಿಜಯಪುರದಲ್ಲಿ 5, ಗದಗದಲ್ಲಿ 5, ಮೈಸೂರಿನಲ್ಲಿ 1, ಬಳ್ಳಾರಿಯಲ್ಲಿ 1, ದಾವಣಗೆರೆಯಲ್ಲಿ 1, ದಕ್ಷಿಣ ಕನ್ನಡ 2, ಯಾದಗಿರಿಯಲ್ಲಿ 5, ಬೀದರ್ ನಲ್ಲಿ 1, ಕಲಬುರಗಿಯಲ್ಲಿ 10, ಉತ್ತರ ಕನ್ನಡದಲ್ಲಿ 9, ಮಂಡ್ಯದಲ್ಲಿ 17, ಕೊಡಗಿನಲ್ಲಿ 1, ಬೆಳಗಾವಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಲಾಕ್‍ಡೌನ್ 4.0 ಉಲ್ಲಂಘಿಸಬಾರದು
ನವದೆಹಲಿ, ಮೇ 18 : ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಲಾಕ್‍ಡೌನ್ 4.0 ಮಾರ್ಗಸೂಚಿಗಳನ್ಮು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು. ಮೇ 31ರ ವರೆಗೆ ದೇಶಾದ್ಯಂತ ಲಾಕ್‍ಡೌನ್ 4.0 ಮಾರ್ಗಸೂಚಿಗಳು ಅನ್ವಯವಾಗಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಹೇಳಿದೆ. ಈ ಸಂಬಂಧ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಮೇ 11 ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವಿಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ರಾಜ್ಯಗಳಿಂದ ಪಡೆದ ಅಭಿಪ್ರಾಯ ಆಧರಿಸಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಬಾರದು ಎಂದು ಸೂಚಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ತಮ್ಮ ರಾಜ್ಯಗಳ ಪರಿಸ್ಥಿತಿಯ ಆಧಾರದ ಮೇಲೆ, ವಿವಿಧ ವಲಯಗಳಲ್ಲಿ ಕೆಲವು ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ಅಗತ್ಯವೆಂದು ಪರಿಗಣಿಸುವಂತಹ ನಿರ್ಬಂಧಗಳನ್ನು ವಿಧಿಸಬಹುದು ಎಂದು ಭಲ್ಲಾ ಹೇಳಿದ್ದಾರೆ.
ವೈದ್ಯ ವಿದ್ಯಾರ್ಥಿಗಳ ವೇತನ ಹೆಚ್ಚಳ
ಬೆಂಗಳೂರು, ಮೇ 18 : ಸರ್ಕಾರಿ ವೈದ್ಯಕೀಯ ಬೋಧಕ ಸಿಬ್ಬಂದಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ವೇತನ ಹೆಚ್ಚಳ ಹಾಗೂ ವೈದ್ಯ ವಿದ್ಯಾರ್ಥಿಗಳ ವೇತನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನೀಡಿದ್ದ ಭರವಸೆಯಂತೆ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಷ್ಕರಣೆ ಪ್ರಸ್ತಾವಕ್ಕೆ ಕೊನೆಗೂ ಮುಕ್ತಿ ದೊರಕಿದಂತಾಗಿದೆ. ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ ಸಂದರ್ಭದಲ್ಲಿ ವೈದ್ಯರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ವೇತನ ಪರಿಷ್ಕರಣೆ ಮಾಡಲಾಗಿದೆ. ಕಳೆದ ಫೆ.26 ರಂದು "ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್' ಸಂಘಟನೆ ಪ್ರತಿನಿಧಿಗಳ ನಿಯೋಗ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿ, ಈ ಕುರಿತು ಮನವಿ ಸಲ್ಲಿಸಿತ್ತು. ಮನವಿ ಸ್ವೀಕರಿಸಿದ್ದ ಸಚಿವ ಸುಧಾಕರ್ ಅವರು, "ಮೂರ್ನಾಲ್ಕು ತಿಂಗಳಲ್ಲಿ ಈ ಕುರಿತು ಖಚಿತ ತೀರ್ಮಾನ ಕೈಗೊಳ್ಳುತ್ತೇನೆ'' ಎಂದು ಭರವಸೆ ನೀಡಿದ್ದರು.
ವಲಸೆ ಕಾರ್ಮಿಕರಿಗೆ ಅಕ್ಕಿ ಉಚಿತ
ಬೆಂಗಳೂರು, ಮೇ 18 : ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ಯಾಕೇಜ್ -2 ಬಿಡುಗಡೆ ಮಾಡಿದ್ದು, ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ನಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧಾರ ಕೈಗೊಂಡಿದೆ. ವಲಸೆ ಕಾರ್ಮಿಕರಿಗೆ ಇದೇ ತಿಂಗಳ 26 ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ 5ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು ಮುಂದಿನ ತಿಂಗಳು ಜೂನ್ 1 ರಿಂದ ಜೂನ್ 10 ರವರೆಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಕೆ. ಗೋಪಾಲಯ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಇನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಪ್ಯಾಕೇಜ್ 2ರ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ಇದಕ್ಕೆ 40.193 ಮೆಟ್ರಿಕ್ ಟನ್. ಅಕ್ಕಿ ಹಾಗೂ 2,544 ಟನ್ ಕಡಲೆಕಾಳು ಅವಶ್ಯಕತೆಯಿದ್ದು, ಇದರಲ್ಲಿ ಏನಾದರೂ ಕಡಿಮೆಯಾದರೆ ಕೇಂದ್ರದಿಂದ ಕಳಿಸಿಕೊಡಲಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಚಿವ ಗೋಪಾಲಯ್ಯ ಅವರು ಹೇಳಿದರು.
ಹೆಚ್ಚಾಯಿತು ಪ್ರಧಾನಿ ಮೋದಿ ಜನಪ್ರಿಯತೆ
ನ್ಯೂಯಾರ್ಕ್, ಮೇ 18 : ಮಾರಕ ಕೊರೊನಾ ವೈರಸ್ ಅಬ್ಬರದ ನಡುವೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೂಡ ಗಗನಕ್ಕೇರುತ್ತಿದೆ ಎಂದು ಅಮೆರಿಕದ ಖ್ಯಾತ ಆಂಗ್ಲ ದೈನಿಕ ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ಮಾರಕ ಕೊರೊನಾ ವೈರಸ್‍ನಿಂದಾಗಿ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದ್ದು, ಈ ಹೊತ್ತಿನಲ್ಲಿ ಸಂಕಷ್ಟದಿಂದ ಹೊರ ಬರಲು ವಿಶ್ವದ ಎಲ್ಲ ದೇಶಗಳೂ ಹರಸಾಹಸ ಪಡುತ್ತಿವೆ. ಈ ಪ್ರಕ್ರಿಯೆಯಲ್ಲಿ ಇತರೆ ದೇಶಗಳ ನಾಯಕರಿಗೆ ಹೋಲಿಕೆ ಮಾಡಿದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೆಚ್ಚು ಜನಪ್ರಿಯತೆ ಪಡೆದಿದೆ. ಕೋವಿಡ್-19 ಸಂಕಷ್ಟ ಕಾಲದಲ್ಲಿ ಒಂದಿಡೀ ದೇಶ ಓರ್ವ ವ್ಯಕ್ತಿಯನ್ನು ಹಿಂಬಾಲಿಸುತ್ತಿದೆ ಎಂದರೆ ಅದು ನರೇಂದ್ರ ಮೋದಿ ಮಾತ್ರ. ಕೊರೊನಾ ಕಾಲದಲ್ಲಿ ಪ್ರಧಾನಿ ಮೋದಿ ಹೆಸರು ಹೆಚ್ಚು ಖ್ಯಾತಿ ಗಳಿಸುತ್ತಿದ್ದು, ಒಂದು ವೇಳೆ ಭಾರತ ಕೊರೊನಾ ಯುದ್ಧ ಗೆದ್ದರೆ ಪ್ರಧಾನಿ ಮೋದಿ ಹೆಸರು ಜನಪ್ರಿಯತೆಯ ಉತ್ತುಂಗಕ್ಕೆ ಏರಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಮಳೆ ಆರ್ಭಟಕ್ಕೆ ಒಂದು ಬಲಿ
ಮಂಗಳೂರು, ಮೇ 18 : ನಗರದಲ್ಲಿ ಸೋಮವಾರ ಮುಂಜಾನೆ ಗುಡುಗು ಸಿಡಿಲು, ಗಾಳಿ ಸಹಿತ ಭಾರಿ ಮಳೆ ಸುರಿಯಿತು. ಬೆಳಗ್ಗೆ 5.00 ಗಂಟೆ ಸುಮಾರಿಗೆ ಆರಂಭಗೊಂಡು 9.30ರ ತನಕವೂ ಜೋರಾಗಿ ಮಳೆಯಾಯಿತು. ಅಲ್ಲಲ್ಲಿ ಹಾನಿ ಸಂಭವಿಸಿದರೆ, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಜನ ಜೀವನ ತೀವ್ರ ಬಾಧಿತವಾಯಿತು. ಬೆಳಗ್ಗೆ ಮೋಡಗಳು ದಟ್ಟೈಸಿದ್ದ ಕಾರಣ ಬೆಳಕು ಮಬ್ಬಾಗಿತ್ತು. ವಾಹನಗಳು ಹೆಡ್‍ಲೈಟ್ ಹಾಕಿಕೊಂಡೇ ಸಂಚರಿಸಿದವು. ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಯುವಕನೊಬ್ಬ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಮೃತನನ್ನು ಭರತ್ ಎಂದು ಗುರುತಿಸಲಾಗಿದೆ. ತಕ್ಷಣ ಯುವಕನನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ.