ಚೀನಾದೇಶಕ್ಕೆ ಕೊರೊನಾ ಸೋಂಕು ಹರಡಿದ್ದಲ್ಲದೇ ದೇಶದ ಶೇ.60 ರಷ್ಟು ಮರಣ ಪ್ರಮಾಣಕ್ಕೂ ಕಾರಣ ವಾದ ವುಹಾನ್‍ನಂತೆ ಭಾರತದಲ್ಲಿಯೂ ಮುಂಬೈ ಕೊರೊನಾ ಸೋಂಕು ಹಬ್ಬಿಸುವ ನಗರವಾಗುತ್ತಿದೆಯೇ ? ಮಹಾರಾಷ್ಟ್ರದ ರಾಜಧಾನಿ ಮುಂಬೈನಿಂದ ಭಾರತದ ಬಹಳಷ್ಟು ಊರುಗಳಿಗೆ ಹೋದವರಲ್ಲಿ ಕಾಣಿಸಿಕೊಂಡಿರುವ ಸೋಂಕು ಆ ಊರಿನಲ್ಲಿಯೂ ಕೊರೊನಾ ವ್ಯಾಪಿಸುವಿಕೆಗೆ ಕಾರಣವಾಗುತ್ತಿದೆ.
ಕೊಡಗಿನಂಥ ಹಸಿರು ವಲಯದಲ್ಲಿಯೂ ಇದೀಗ ಮುಂಬೈನಿಂದ ಬಂದ ವ್ಯಕ್ತಿಯಿಂದಾಗಿ ಮತ್ತೆ ಸೋಂಕಿನ ಆತಂಕ ಕಾಣಿಸಿಕೊಂಡಿದೆ.
ದೇಶದ ವಾಣಿಜ್ಯ ರಾಜಧಾನಿಯಾಗಿರುವ ಬಂದರು ನಗರಿ, ಬಾಲಿವುಡ್ ಮಹಾನಗರಿ ಮುಂಬೈ ಈಗ ಕೊರೊನಾದಿಂದಾಗಿ ತತ್ತರಿಸಿಹೋಗಿದೆ. ಭಾರತದ ಅತ್ಯಧಿಕ ಕೊರೊನಾ ಸೋಂಕಿತರು ಮುಂಬೈನಲ್ಲಿಯೇ ಇದ್ದಾರೆ. ದೇಶದಲ್ಲಿ ಸಾವನ್ನಪ್ಪಿದವರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ ಮೂರನೇ ಸ್ಥಾನದಲ್ಲಿದೆ. ಭಾನುವಾರ ಒಂದೇ ದಿನ ಮುಂಬೈನಲ್ಲಿ 1,595 ಹೊಸ ಪ್ರಕರಣಗಳು ಕಾಣಿಸಿಕೊಂಡಿದೆ. ಈವರೆಗೂ ಮುಂಬೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26,000 ದಾಟಿದೆ. ಈ ಪೈಕಿ 470 ಮಂದಿ ಸಾವನ್ನಪ್ಪಿದ್ದಾರೆ. 5,012 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮುಂಬೈನಲ್ಲಿ ಕೊರೊನಾ ಸೋಂಕು ಈ ರೀತಿ ಹಬ್ಬಲು ಕಾರಣವಾದರೂ ಏನು ? ಮುಂಬೈನಲ್ಲಿರುವ ಏಷ್ಯಾ ಖಂಡದ ಅತ್ಯಂತ ದೊಡ್ಡ ಧಾರವಿ ಸ್ಲಂ ನಿಂದಾಗಿಯೇ ಮುಂಬೈ ಕೊರೊನಾ ಸೋಂಕಿನಿಂದ ತಲ್ಲಣಿಸುವಂತಾಗಿದೆ.
ಧಾರವಿ ಸ್ಲಂ ಸ್ಥಿತಿ ಗಮನಿಸುವುದಾದರೆ ಈ ಸ್ಲಂ ನಲ್ಲಿ 2.50 ಲಕ್ಷ ವಲಸಿಗ ಕಾರ್ಮಿಕರೂ ಸೇರಿದಂತೆ 6.50 ಲಕ್ಷ ಜನ ವಾಸವಾಗಿದ್ದಾರೆ. ಧಾರವಿ ಸ್ಲಂ ಸುಮಾರು 2.80 ಕಿಲೋಮೀಟರ್ ವಿಸ್ತಾರದಲ್ಲಿ ನೆಲೆಗೊಂಡಿದೆ. ಸ್ಲಂ ಆಗಿರುವುದರಿಂದಾಗಿ 1 ಮನೆಯಲ್ಲಿ ಕನಿಷ್ಟ 10 ರಿಂದ 15 ಮಂದಿ ಒಂದೇ ಸೂರಿನಡಿ ವಾಸವಾಗಿದ್ದಾರೆ. ಇಷ್ಟೊಂದು ಜನಸಂಖ್ಯೆ ಹೊಂದಿರುವ ಧಾರವಿಗೆ ಮೂಲ ಸೌಕರ್ಯಗಳೇ ಇಲ್ಲ, ಸ್ಲಂ ಪ್ರದೇಶಕ್ಕೆ ಸೂಕ್ತ ಕುಡಿಯುವ ನೀರಿನ ಸೌಲಭ್ಯವಿಲ್ಲ, ವಿದ್ಯುತ್ ಇಲ್ಲ, ಆರೋಗ್ಯ ಸಮಸ್ಯೆ ಪರಿಶೀಲಿಸುವವರಿಲ್ಲ. ಸಾರ್ವಜನಿಕ ಶೌಚಾಲಯವನ್ನೇ ಧಾರವಿಯ 6.50 ಲಕ್ಷ ಮಂದಿ ಆಶ್ರಯಿಸಬೇಕು. ಇಷ್ಟಕ್ಕೂ ಇಷ್ಟು ಲಕ್ಷ ಜನರಿಗೆ ಧಾರವಿಯಲ್ಲಿ ಇರುವ ಶೌಚಾಲಯಗಳ ಸಂಖ್ಯೆ ಕೇವಲ 275 ಮಾತ್ರ. ಮುಂಬೈನ ಶೋಷಿತ ಸಮುದಾಯವರೇ ಹೆಚ್ಚಾಗಿ ನೆಲೆಸಿದ್ದಾರೆ. ಧಾರವಿ ಸ್ಲಂನಲ್ಲಿ ಇರುವವರು ಮನೆಕೆಲಸದವರು, ಕಾರ್ಖಾನೆ ಕಾರ್ಮಿಕರು, ಮೀನುಗಾರರು, ಕಟ್ಟಡ ಕಾರ್ಮಿಕರಾಗಿ, ಹೋಟೇಲ್ ಕಾರ್ಮಿಕರಾಗಿ, ಬೀದಿ ಗುಡಿಸುವ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಶಿಕ್ಷಿತ ಸಮುದಾಯವಾದ್ದರಿಂದಾಗಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ.
ಧಾರವಿಯಲ್ಲಿ ಮಾರ್ಚ್ 18 ರಂದು 68 ವರ್ಷ ಹಿರಿಯ ನಾಗರಿಕನಿಗೆ ಮೊದಲ ಕೊರೊನಾ ಸೋಂಕಿನ ಪ್ರಕರಣ ಕಂಡುಬಂತು. ಆಗ ಮುಂಬೈ ನಗರದಲ್ಲಿ ಇದ್ದದ್ದು ಕೇವಲ 8 ಪ್ರಕರಣ ಮಾತ್ರ. 56 ಮಂದಿ ಸಾವಿಗೀಡಾಗಿದ್ದಾರೆ. ಇದೀಗ ಈ ಪ್ರದೇಶ ಸೀಲ್‍ಡೌನ್ ಆಗಿದೆ. ಆದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಧಾರವಿ ಮಿನಿ ಭಾರತ ಇದ್ದಂತೆ ಇದೆ. ಮುಂಬೈನವರು ಮಾತ್ರವಲ್ಲದೇ ಬಿಹಾರಿಗಳು, ಕೇರಳಿಯರು, ಕನ್ನಡಿಗರು. ತಮಿಳು, ತೆಲುಗು ಸೇರಿದಂತೆ ಭಾರತದಾದ್ಯಂತ ಸಾವಿರಾರು ಜನ ಇಲ್ಲಿ ನೆಲೆಸಿದ್ದಾರೆ. ಯಾವಾಗ ಕೊರೊನಾ ಅಟ್ಟಹಾಸ ಮಿತಿ ಮೀರತೊಡಗಿತ್ತೋ. ಆಗಲೇ ಧಾರವಿಯಿಂದ ಕಾರ್ಮಿಕ ವರ್ಗದವರು ತಮ್ಮ ತವರು ರಾಜ್ಯಗಳಿಗೆ ಮರಳ ತೊಡಗಿದರು. ಪ್ರಾರಂಭದ ದಿನಗಳಾದ್ದರಿಂದಾಗಿ ಇಂಥ ಜನರ ಸಂಚಾರಕ್ಕೆ ಕಡಿವಾಣ ಹಾಕುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಯಿತು. ತಮ್ಮ ರಾಜ್ಯಗಳಿಗೆ ಮರಳಿದ ಕೊರೊನಾ ಸೋಂಕಿತರು ಅಲ್ಲಿಯೂ ಕೊರೊನಾ ವೈರಾಣು ಹರಡಲು ಕಾರಣರಾದರು. ಮುಂಬೈನ ಒಂದು ಸ್ಲಂ ಇಡೀ ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಕೊರೊನಾ ಸೋಂಕು ವ್ಯಾಪಿಸಲು ಕಾರಣವಾಯಿತು. ಅನೇಕರು ಸೋಂಕಿನ ಲಕ್ಷಣ ಕಂಡು ಬಂದರೂ ಆಸ್ಪತ್ರೆಗೆ ಹೋಗಲೇ ವಿಳಂಬ ಮಾಡಿದರು. ಇದು ಮತ್ತಷ್ಟು ಸಂಖ್ಯೆಯಲ್ಲಿ ಸೋಂಕು ಹೆಚ್ಚಲು ಮತ್ತೊಂದು ಕಾರಣವಾಯಿತು. ಹಗಲೂ ರಾತ್ರಿಯೆನ್ನದೇ ಸದಾ ಜನರ ಸಂಚಾರ ಕಂಡುಬರುತ್ತಿದ್ದ ಎಂದೂ ಮಲಗದ ಸ್ಲಂ ಎಂಬ ಹೆಸರು ಗಳಿಸಿದ್ದ ಧಾರವಿಯಲ್ಲೀಗ ನೀರವ ಮೌನ. ಕಳೆದ 40 ದಿನಗಳಿಂದ ಧಾರವಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಧಾರವಿ ಜನ ಹೊರಕ್ಕೆ ಹೋಗುವಂತಿಲ್ಲ. ಯಾರೂ ಒಳಬರುವಂತಿಲ್ಲ. ಕಿರಿದಾದ ಗುಡಿಸಿಲಿನಂಥ ಮನೆಯಲ್ಲಿಯೇ ಸ್ಲಂ ವಾಸಿಗಳು ಹೊತ್ತು ಕಳೆಯಬೇಕಾಗಿದೆ. ಆರೋಗ್ಯ ಇಲಾಖೆ ಆಪರೇಷನ್ ಧಾರವಿಯನ್ನು ಸಮರೋಪಾದಿಯಲ್ಲಿ ಪ್ರಾರಂಭಿಸಿದೆ. ದಿನಕ್ಕೆ 10 ಸಾವಿರದಷ್ಟ್ಟು ಸ್ಲಂ ನಿವಾಸಿಗಳ ವೈದ್ಯಕೀಯ ಪರೀಕ್ಷೆ ಕಳೆದೆರಡು ವಾರಗಳಿಂದ ಸಾಗಿದೆ. ಹೀಗಿದ್ದರೂ ಈಗಾಗಲೇ ಊಹೆಗೂ ಮೀರಿದ ವೇಗದಲ್ಲಿ ಸೋಂಕು ಹಬ್ಬಿರುವುದರಿಂದಾಗಿ ಧಾರವಿ ಆರೋಗ್ಯ ಇಲಾಖೆಯ ನಿಯಂತ್ರಣಕ್ಕೇ ಸಿಗುತ್ತಿಲ್ಲ. 10-12 ಜನ ವಾಸವಾಗಿರುವ ಧಾರವಿ ಸ್ಲಂನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ.
ದಿನದ ಕೂಲಿಯನ್ನೇ ಅವಲಂಬಿಸಿದ್ದ ಲಕ್ಷಾಂತರ ಕಾರ್ಮಿಕರಿಗೆ ಕೆಲಸವೂ ಇಲ್ಲ. ವೇತನವೂ ಇಲ್ಲದ ದುಸ್ಥಿತಿ ಒದಗಿದೆ. ಪುಟ್ಟ ಗೂಡಿನಲ್ಲಿಯೇ 10-12 ಜನ ದಿನಕಳೆಯಬೇಕಾದ ದಯನೀಯ ಸ್ಥಿತಿ. ಲಕ್ಷಾಂತರ ಜನರಿದ್ದರೂ ಕಿರಿದಾದ ಮನೆಯಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೊರಬರಲಾಗದೇ ಧಾರವಿ ಅನಾಥ ಭಾವ ಎದುರಿಸುತ್ತಿದೆ. ದಿನಕ್ಕೆ 80 ಲಕ್ಷ ಜನ ಪಯಣಿಸುತ್ತಿದ್ದ ಮುಂಬೈನ ಲೋಕಲ್ ರೈಲುಗಳು ಹಳಿ ಮೇಲೆ ಬಾರದೇ ತಿಂಗಳುಗಳೇ ಉರುಳಿದೆ. ಕಭೀ ಸೋತೀ ನಹೀ ಎಂಬ ಖ್ಯಾತಿಗೆ ಕಾರಣವಾಗಿದ್ದ ಮುಂಬೈ ಎಂಬ ಮಾಯಾ ನಗರಿ ಈಗ ಲಾಕ್‍ಡೌನ್‍ನಿಂದಾಗಿ ಸಂಪೂರ್ಣ ತಟಸ್ಥಗೊಂಡಿದೆ. ಮುಂಬೈನಿಂದ ಹೊರಟು ಬೇರೆಬೇರೆ ಕಡೆ ಸಾಗಿಬಂದ ಜನರಲ್ಲಿ ಕೆಲವರು ಮುಂಬೈ ಕೊಡುಗೆ ಎಂಬಂತೆ ಸೋಂಕನ್ನು ತಾವು ಹೋದಲ್ಲೆಲ್ಲಾ ಹಬ್ಬಿಸುತ್ತಿದ್ದಾರೆ.
ಕೊನೇ ಹನಿ.
ಧಾರವಿಯ 4,500 ಜನರೂ ಸೇರಿದಂತೆ ಮುಂಬೈ ನಗರದ 45,000 ಜನರಿಗೆ ರೋಟಿ ಫೌಂಡೇಶನ್ ದಿನನಿತ್ಯ ಮಧ್ಯಾಹ್ನದ ಊಟವನ್ನು ವಿತರಿಸುತ್ತಿದೆ. ಕೊಡಗಿನಲ್ಲಿ ಹೊಸದ್ದೊಂದು ಕೊರೊನಾ ಸೋಂಕು ಸೇರಿದಂತೆ ಈವರೆಗೆ 2 ಪ್ರಕರಣ ವರದಿಯಾಗಿದೆ. ಈ ಎರಡು ಪ್ರಕರಣಗಳಿಂದಾಗಿಯೇ ನಾವೆಲ್ಲಾ ಎಷ್ಟೊಂದು ಆತಂಕ ಗೊಂಡಿದ್ದೇವೆ. ಆದರೆ, ತನ್ನ ಒಡಲಲ್ಲಿ ದಿನಕ್ಕೆ 1500 ಹೊಸ ಪ್ರಕರಣ, ಈವರೆಗೂ 21 ಸಾವಿರ ಸೋಂಕಿತ ಪ್ರಕರಣ ಹೊಂದಿ ರುವ ಮುಂಬೈ ನಾಗರಿಕರು ಎಷ್ಟು ಆತಂಕ ಎಷ್ಟು ಕಾಳಜಿ ವಹಿಸಬೇಕು ಯೋಚಿಸಿ.