ಸೋಮವಾರಪೇಟೆ, ಮೇ 17: ಕೊರೊನಾ ವೈರಸ್-ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಹಲವಷ್ಟು ಕಾಮಗಾರಿಗಳಿಗೆ ಇದೀಗ ಮರುಜೀವ ದೊರೆಯುತ್ತಿದೆ.

ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಮೂಲಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಪ್ರಗತಿಯಲ್ಲಿದ್ದ ಹಲವಷ್ಟು ಕಾಮಗಾರಿಗಳನ್ನು ಲಾಕ್‍ಡೌನ್‍ನಿಂದಾಗಿ ದಿಡೀರ್ ಸ್ಥಗಿತಗೊಳಿಸಲಾಗಿತ್ತು. ಇದೀಗ ಲಾಕ್‍ಡೌನ್‍ನಲ್ಲಿ ಸಡಿಲಿಕೆ ಹೆಚ್ಚಾಗಿರುವ ಹಿನ್ನೆಲೆ ಕ್ಷಿಪ್ರಗತಿಯ ಕಾಮಗಾರಿ ನಡೆಯುತ್ತಿದೆ.

ಜೂನ್ ಮೊದಲ ವಾರದಲ್ಲಿ ಜಿಲ್ಲೆಗೆ ಮುಂಗಾರು ಪ್ರವೇಶ ಎಂಬ ಹವಾಮಾನ ಇಲಾಖೆ ಸೂಚನೆ ನೀಡಿರುವದರಿಂದ ಲಾಕ್‍ಡೌನ್ ನಿಂದ ಅರ್ಧಕ್ಕೆ ನಿಂತಿದ್ದ ತಾಲೂಕಿನ ಗ್ರಾಮೀಣ ರಸ್ತೆ, ಕಟ್ಟಡ ಕಾಮಗಾರಿಗಳಿಗೆ ಮರುಜೀವ ಬಂದಿದೆ.

ಈ ಹಿಂದೆ ರಸ್ತೆಯ ಡಾಂಬರೀಕರಣ, ಕಾಂಕ್ರಿಟೀಕರಣ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ಹೊರ ಜಿಲ್ಲೆ, ಹೊರ ರಾಜ್ಯದ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿತ್ತು. ಲಾಕ್‍ಡೌನ್‍ನಿಂದಾಗಿ ಹಲವಷ್ಟು ಕಾರ್ಮಿಕರು ಈಗಾಗಲೇ ತವರು ರಾಜ್ಯ, ಜಿಲ್ಲೆಗಳಿಗೆ ತೆರಳಿದ್ದು, ಇದೀಗ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ.

ತಾಲೂಕಿನಲ್ಲಿ ನಡೆಯುತ್ತಿದ್ದ ಹಲವಷ್ಟು ರಸ್ತೆ ಕಾಮಗಾರಿಗಳಲ್ಲಿ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಕಾರ್ಮಿಕರೇ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಇದೀಗ ಬಹುತೇಕ ಮಂದಿ ತಮ್ಮ ತವರು ನೆಲ ಸೇರಿಕೊಂಡಿರುವದರಿಂದ ಗುತ್ತಿಗೆದಾರರು ಅನಿವಾರ್ಯವಾಗಿ ಸ್ಥಳೀಯ ಕಾರ್ಮಿಕರನ್ನು ನೆಚ್ಚಿಕೊಳ್ಳುವಂತಾಗಿದೆ.

ಕಳೆದ ಒಂದು ವಾರದಿಂದ ಕಾಮಗಾರಿಗಳಿಗೆ ವೇಗ ದೊರೆತಿದ್ದು, 50 ಲಕ್ಷ ರೂ. ವೆಚ್ಚದ ತಣ್ಣೀರುಹಳ್ಳ ರಸ್ತೆ ಪೂರ್ಣಗೊಂಡಿದೆ. 50 ಲಕ್ಷ ರೂ.ಗಳ ಬೀಟಿಕಟ್ಟೆ, ಚನ್ನಾಪುರ, ಹಿರಿಕರ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಾಲ್ಕು ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹೆಗ್ಗಳ, ಕೂಗೂರು ರಸ್ತೆ, ಕೊತ್ನಳ್ಳಿ ರಸ್ತೆ, ಕೋಟೆಯೂರು, ಬಸವನಕೊಪ್ಪ ರಸ್ತೆ, ಎರಪಾರೆ ರಸ್ತೆ, ಬಾಣಾವರ ಸಂಗಯ್ಯನಪುರ ರಸ್ತೆ ಕಾಮಗಾರಿಗಳು ಮುಕ್ತಾಯವಾಗಿದೆ.

ಮುಖ್ಯವಾಗಿ ಮಸಗೋಡು ರಸ್ತೆ, ಸಿದ್ದಲಿಂಗಪುರ ಬಸಿರಕುಪ್ಪೆ ರಸ್ತೆ, ಯರಪಾರೆ, ನಾಗವಾಲ ರಸ್ತೆ, ಯಲಕನೂರು ಕಣಿವೆ ರಸ್ತೆ ಕಾಮಗಾರಿ ಮುಂಗಾರು ಪ್ರಾರಂಭದ ಒಳಗೆ ಪೂರ್ಣಗೊಳ್ಳಬೇಕಾಗಿದೆ.

ಎಸ್.ಎಚ್.ಡಿ.ಪಿ ಯೋಜನೆಯ ಕುಂದಳ್ಳಿ-ಕುಮಾರಳ್ಳಿ-ಬೀದಳ್ಳಿ ರಸ್ತೆಗೆ 8.50 ಕೋಟಿ ರೂ.ಗಳ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಮಳೆಗಾಲದಲ್ಲಿ ಇಲ್ಲಿನ ಗ್ರಾಮಗಳ ಜನರು ಸಮಸ್ಯೆಗೆ ಸಿಲುಕಲಿದ್ದಾರೆ. ಒಟ್ಟಿನಲ್ಲಿ ಮೇ ಅಂತ್ಯದ ಒಳಗೆ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ, ಮಳೆಗಾಲದಲ್ಲಿ ರಸ್ತೆಗಳು ಹೊಂಡಮಯವಾಗಿ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

ಇದರೊಂದಿಗೆ ಸೋಮವಾರಪೇಟೆ ಕೃಷಿ ಇಲಾಖೆಯ ವತಿಯಿಂದ ರೂ. 50 ಲಕ್ಷ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಾಣ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ. ಲ್ಯಾಂಡ್‍ಆರ್ಮಿಯ ಮೂಲಕ ಚಾಲನೆಗೊಂಡಿದ್ದ ರೈತ ಸಂಪರ್ಕ ಕೇಂದ್ರದ ಕಾಮಗಾರಿ, ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿತ್ತು. ಇದೀಗ ಸ್ಥಳೀಯ ಕಾರ್ಮಿಕರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದು, ಭರದಿಂದ ಕಾಮಗಾರಿ ನಡೆಯುತ್ತಿದೆ. ಲಾಕ್‍ಡೌನ್‍ಗೂ ಮುನ್ನ ಪರಿಕರಗಳನ್ನು ಸಂಗ್ರಹಿಸಿಟ್ಟಿದ್ದ ಬಹುತೇಕ ಸೈಟ್‍ಗಳಲ್ಲಿ ಕಾಮಗಾರಿ ನಡೆಯುತ್ತಿರುವದು ಕಂಡುಬಂದಿದೆ.