ಚೆಟ್ಟಳ್ಳಿ, ಮೇ 17: ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ಕಳೆದ ನಾಲ್ಕೈದು ತಿಂಗಳ ಹಿಂದೆ ಪ್ರತಿಷ್ಠಿತ ಖಾಸಗಿ ಮೊಬೈಲ್ನೆಟ್ವರ್ಕ್ ಕಂಪನಿಯೊಂದು ರಸ್ತೆಬದಿಯಲ್ಲಿ ಯಂತ್ರದ ಮೂಲಕ ನೆಲವನ್ನು ಕೊರೆದು ಕೇಬಲನ್ನು ಅಳವಡಿಸಿ ಮತ್ತೆ ಕೆಲವೆಡೆ ರಸ್ತೆ ಬದಿ ನೆಲವನ್ನೆಲ್ಲಾ ಅಗೆದು ಕೇಬಲನ್ನು ಅಳವಡಿಸಲಾಗಿದೆ. ಅದೇ ರೀತಿ ಚೆಟ್ಟಳ್ಳಿ ಮಡಿಕೇರಿ ಮಾರ್ಗದ ರಸ್ತೆಯ ಉದ್ದಕ್ಕೂ ನೆಲವನ್ನು ಕೊರೆದು ಕೇಬಲ್ ಅಳವಡಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಬಿದ್ದ ಅಲ್ಪಸ್ವಲ್ಪ ಮಳೆಗೆ ಕೇಬಲ್ ಅಳವಡಿಸಲು ತೆಗೆದಿದ್ದ ಗುಂಡಿಗಳು ಬಿರುಕು ಬಿಟ್ಟು ರಸ್ತೆ ಬದಿಯೆಲ್ಲಾ ಗುಂಡಿಗಳಾಗಿವೆ. ಮಳೆ ನೀರೆಲ್ಲಾ ಗುಂಡಿಯೊಳಗರಿದು ಕೆಲವೆಡೆ ಬರೆಗಳಲ್ಲಿ ಭಾರೀ ಗಾತ್ರದ ಬಿರುಕಾಗಿ ಅಪಾಯದಂಚಿಗೆ ತಲುಪಿದೆ.
ಕೇಬಲ್ಗಾಗಿ ಗುಂಡಿಮಾಡುವ ಕಾರ್ಯಕ್ಕಾಗಿ ಅಲ್ಲಲ್ಲಿ ಬರೆಯ ಅಂಚಿನ ಕಲ್ಲುಗಳು ಮೇಲೆ ಎತ್ತಲ್ಪಟಿವೆ. ಹಲವು ಮೋರಿಗಳು ಬಿರುಕು ಬಿಟ್ಟಿವೆ. ಮುಂದಿನ ಮಳೆಗಾಲದಲ್ಲಿ ನೀರುಹರಿಯುವ ರಭಸಕ್ಕೆ ಬರೆ ಜರಿದು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಬರೆಜರಿದ ಪರಿಣಾಮ ತೋಟದ ಮಾಲೀಕರು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ತುಂಬಿ ಮಣ್ಣು ಜರಿಯದಂತೆ ಮಾಡಿದ್ದಾರೆ. ಕೆಲವೊಂದು ವಾಹನಗಳು ಕೇಬಲ್ಗಾಗಿ ತೆಗೆದ ಗುಂಡಿಯಲ್ಲಿ ಹೂತುಹೋಗುತ್ತಿವೆ.
ಮಳೆಗಾಲದಲ್ಲಿ ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ಮುಖ್ಯರಸ್ತೆಗಳು ಬರೆಜರಿದು ಮರಬಿದ್ದು ಸಂಪರ್ಕ ಕಡಿತಗೊಂಡಾಗ ಸಣ್ಣಪುಟ್ಟ ವಾಹನಗಳು, ಬಸ್ಸು - ಲಾರಿಗಳು ಚೆಟ್ಟಳ್ಳಿ ಮಾರ್ಗವಾಗಿಯೆ ಮಡಿಕೇರಿಗೆ ತೆರಳುವುದರಿಂದ ಜಿಲ್ಲಾಧಿಕಾರಿಯವರು ಇತ್ತ ಗಮನಹರಿಸುವ ಮೂಲಕ ಮಳೆಪ್ರಾರಂಭಕ್ಕೂ ಮುನ್ನ ಚೆಟ್ಟಳ್ಳಿ ಮಡಿಕೇರಿ ರಸ್ತೆಯನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. -ಪುತ್ತರಿರ ಕರುಣ್ ಕಾಳಯ್ಯ