*ಕೊಡ್ಲಿಪೇಟೆ, ಮೇ 17: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಲವಷ್ಟು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹೇಮಾವತಿ ಹಿನ್ನೀರು ಪ್ರದೇಶಕ್ಕೆ ಒತ್ತಿಕೊಂಡಂತಿರುವ ಕೊಡ್ಲಿಪೇಟೆಯಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಸಾರ್ವಜನಿಕರು ಬೇಸತ್ತಿದ್ದು, ಬೆಸೂರು ಗ್ರಾಮದಲ್ಲಿ ಹಗಲಿನಲ್ಲೇ ಗಜರಾಜನ ಪಯಣದಿಂದಾಗಿ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಮೊನ್ನೆಯಷ್ಟೇ ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿ ಗ್ರಾಮಸ್ಥರು ಭಯಾತಂಕಕ್ಕೆ ಒಳಗಾಗಿದ್ದರು. ನಿನ್ನೆ ದಿನ ಬೆಸೂರು ಗ್ರಾಮದಲ್ಲಿ ಹಾಡಹಗಲೇ ಒಂಟಿ ಸಲಗವೊಂದು ಜನವಸತಿ ಪ್ರದೇಶದಲ್ಲಿ ಓಡಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಕೊರೊನಾ ಭೀತಿಯ ನಡುವೆ ಈ ಭಾಗದ ಮಂದಿಗೆ ಕಾಡಾನೆಯ ಉಪಟಳವೂ ಹೆಚ್ಚಾಗಿದ್ದು, ಮನೆಯಿಂದ ಹೊರಬರಲೂ ಸಹ ಹೆದರುವಂತಾಗಿದೆ. ಗ್ರಾಮದಲ್ಲಿ ಹಗಲಿನಲ್ಲಿಯೇ ರಾಜಾರೋಷವಾಗಿ ಓಡಾಡುತ್ತಿರುವ ಕಾಡಾನೆ, ಕೃಷಿಯನ್ನೂ ನಷ್ಟಗೊಳಿಸುತ್ತಿದೆ. ಕಾಡಾನೆಗಳ ಓಡಾಟದಿಂದ ಈ ಭಾಗದ ಕೃಷಿಕರು ತೋಟ, ಗದ್ದೆಗಳಿಗೆ ತೆರಳಲೂ ಸಹ ಭಯಪಡುವಂತಾಗಿದೆ.
ಈಗಾಗಲೇ ಕೊರೊನಾ ಭೀತಿಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಕೈಯಲ್ಲಿ ಹಣವೂ ಇಲ್ಲವಾಗಿದೆ. ಕೃಷಿ ಭೂಮಿಯಲ್ಲಿ ಒಂದಿಷ್ಟು ಕೃಷಿ ಕಾರ್ಯ ಕೈಗೊಳ್ಳೋಣವೆಂದರೂ ಕಾಡಾನೆಗಳ ಭಯ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈಗಾಗಲೇ ಬೆಳೆದಿರುವ ತರಕಾರಿಗಳನ್ನು ವ್ಯಾಪಾರಸ್ಥರು ಗ್ರಾಮಗಳಿಗೆ ಬಂದು ಖರೀದಿಸುತ್ತಿದ್ದರು. ಈ ಅಲ್ಪಸ್ವಲ್ಪ ಹಣದಲ್ಲಿ ಕುಟುಂಬ ನಿರ್ವಹಣೆಯಾಗುತ್ತಿತ್ತು. ಇದೀಗ ಕಾಡಾನೆಯ ಆಗಮನದಿಂದಾಗಿ ವ್ಯಾಪಾರಸ್ಥರೂ ಸಹ ಗ್ರಾಮದೊಳಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಗದ್ದೆಗಳಲ್ಲಿ ಉಳಿದಿರುವ ತರಕಾರಿಯನ್ನೂ ಮನೆಗೆ ತರಲು ಹೆದರಿಕೆಯಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ತೋಟ ಗದ್ದೆಗಳಲ್ಲಿ ಕೆಲಸ ಮಾಡಲೂ ಭಯವಾಗುತ್ತಿದೆ. ಮಕ್ಕಳು ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಒಂಟಿ ಆನೆ ಯಾವ ಸಮಯದಲ್ಲಿ ಬರುತ್ತದೋ ಎಂಬ ಆತಂಕದಿಂದಲೇ ದಿನದೂಡುವಂತಾಗಿದೆ. ಅರಣ್ಯಕ್ಕೆ ಕಾಡಾನೆಯನ್ನು ಅಟ್ಟುವಂತೆ ಹಲವಷ್ಟು ಬಾರಿ ಮನವಿ ಮಾಡಿದ್ದರೂ ಯಾವದೇ ಸ್ಪಂದನೆ ದೊರೆಯದೇ ನಮಗಳ ಕೂಗು ಅರಣ್ಯರೋಧನವಾಗಿದೆ ಎಂದು ಗ್ರಾಮದ ಕೃಷಿ ವೃಷಬೇಂದ್ರ ಅವರು ಪತ್ರಿಕೆಯೊಂದಿಗೆ ಅಭಿಪ್ರಾಯಿಸಿದ್ದಾರೆ.
ಭೀಮನಿಂದ ತೊಂದರೆಯಿಲ್ಲ: ಆರ್‍ಎಫ್‍ಓ
‘ಭೀಮ ಎಂದು ಹೆಸರಿಟ್ಟಿರುವ ಈ ಆನೆ ಸಾಧು ಸ್ವಭಾವದ್ದಾಗಿದ್ದು, ಈವರೆಗೆ ಸಾರ್ವಜನಿಕರಿಗೆ ಯಾವದೇ ತೊಂದರೆ ಕೊಟ್ಟಿಲ್ಲ. ಕಳೆದ ಅನೇಕ ಸಮಯಗಳಿಂದ ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಭೀಮ, ಕಟ್ಟೇಪುರ ಮೀಸಲು ಅರಣ್ಯದಿಂದ ಉಂಬಳಿ ಬೆಟ್ಟಕ್ಕೆ ತೆರಳುತ್ತದೆ. ಇದರೊಂದಿಗೆ ಹಾಸನದ ಆಲೂರು, ಸಕಲೇಶಪುರ, ಯಸಳೂರು, ಕೊಡ್ಲಿಪೇಟೆಯ ಬಿಳಾವು ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಅರಣ್ಯದಿಂದ ಅರಣ್ಯಕ್ಕೆ ಸಂಚರಿಸುವ ನಡುವೆ ಖಾಸಗಿ ತೋಟಗಳಿಗೂ ನುಗ್ಗುತ್ತಿದ್ದು, ಈ ಆನೆಯ ಚಲನವಲನದ ಮೇಲೆ ಇಲಾಖೆ ಕಣ್ಣಿಟ್ಟಿದೆ. ಈ ವ್ಯಾಪ್ತಿಯ ಗ್ರಾಮಸ್ಥರನ್ನು ಒಳಗೊಂಡಂತೆ ವಾಟ್ಸಾಪ್ ಗುಂಪು ರಚಿಸಲಾಗಿದ್ದು, ಆನೆ ಸಾರ್ವಜನಿಕ ಪ್ರದೇಶಕ್ಕೆ ಬಂದರೆ ತಕ್ಷಣ ಸಂದೇಶ ಕಳುಹಿಸಿ, ಸ್ಥಳೀಯರಲ್ಲಿ ಎಚ್ಚರಿಕೆ ಮೂಡಿಸಲಾಗುತ್ತಿದೆ. ಇದರೊಂದಿಗೆ ಧ್ವನಿವರ್ಧಕದ ಮೂಲಕವೂ ಆಗಾಗ್ಗೆ ಮಾಹಿತಿ ನೀಡಲಾಗುತ್ತಿದೆ. ಭೀಮ ಸಂಚರಿಸುವ ಸಮಯದಲ್ಲಿ ಸ್ಥಳೀಯರು ಎಚ್ಚರಿಕೆ ವಹಿಸಿದರೆ ಸಾಕು; ಅದರಿಂದ ತೊಂದರೆಯಾಗುವ ಆತಂಕ ಬೇಡ’ ಎಂದು ಶನಿವಾರಸಂತೆ ವ್ಯಾಪ್ತಿಯ ಆರ್‍ಎಫ್‍ಓ ಕೊಟ್ರೇಶಿ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.