ಮಡಿಕೇರಿ, ಮೇ 16: ನಗರದ ರಾಜರಾಜೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಮಹದೇವಪೇಟೆ, ಶಾಸ್ತ್ರೀನಗರ, ಗಣಪತಿ ಬೀದಿ, ಗೌಳಿಬೀದಿ, ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಜ್ಯೋತಿ ನಗರ ಇತ್ಯಾದಿ ಬಡಾವಣೆಗಳಲ್ಲಿ ದಿನಗೂಲಿ ಕಾರ್ಮಿಕರು, ಬಡಗಿಗಳು, ಸಣ್ಣ ವ್ಯಾಪಾರಸ್ಥರು, ಎಲೆಕ್ಟ್ರಿಷಿಯನ್‍ಗಳು, ನಗರದ ಸಣ್ಣ ಹೊಟೇಲ್‍ಗಳು ಮತ್ತು ಅಂಗಡಿಗಳಲ್ಲಿ ದುಡಿಯುವ ಕಾರ್ಮಿಕರಿರುತ್ತಾರೆ. ಅವರಿಗೆ ಕಳೆದ ಎರಡು ತಿಂಗಳುಗಳಿಂದ ಲಾಕ್‍ಡೌನ್‍ನಿಂದಾಗಿ ಯಾವುದೇ ಆದಾಯ ಇಲ್ಲದೆ ದಿನನಿತ್ಯದ ಅವಶ್ಯಕತೆಗಳಿಗೆ ಯಾವುದೇ ಮಾರ್ಗ ಕಾಣದೆ ಕಂಗಾಲಾಗಿರುತ್ತಾರೆ. ಅವರಲ್ಲಿ ಹೆಚ್ಚಿನವರು ಎಪಿಎಲ್ ಕಾರ್ಡ್‍ದಾರರಾಗಿದ್ದು, ಅವರಿಗೆ ಸರಕಾರದಿಂದ ಅಪತ್ಕಾಲದಲ್ಲಿ ಸಿಗಬಹುದಾಗಿದ್ದ ಎಲ್ಲಾ ಸವಲತ್ತುಗಳಿಂದಲು ವಂಚಿತರಾಗಿರುತ್ತಾರೆ. ಇವರುಗಳಿಗೆ ಉಚಿತವಾಗಿ ಪಡಿತರವನ್ನು ವಿತರಿಸುವ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಎಂ.ಕೆ. ಜಯಕುಮಾರ್, ಸದಸ್ಯರು, ಮಾಸಾಶನ ಸಮಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರಕಾರ, ಡಿ.ಹೆಚ್. ತಮ್ಮಪ್ಪ, ಹಿರಿಯ ನಾಗರಿಕರು, ಪಿ.ಎ. ಚಂದ್ರ, ಮಡಿಕೇರಿ, ಬಿ.ಎಸ್. ರುದ್ರಪ್ರಸನ್ನ, ವಕೀಲರು, ಮಹದೇವಪೇಟೆ, ಮಡಿಕೇರಿ, ಬಿ.ಕೆ. ಅರುಣ್ ಕುಮಾರ್, ಮಾಜಿ ನಗರಸಭಾ ಸದಸ್ಯರು, ಮಡಿಕೇರಿ ಅವರುಗಳು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಮಾಡಿದ್ದಾರೆ.