ಮಡಿಕೇರಿ, ಮೇ 16: ಏಪ್ರಿಲ್ 19 ರಂದು ಹೊದ್ದೂರು ಗ್ರಾಮದ ವಾಟೆಕಾಡುವಿನಲ್ಲಿರುವ ರಿವರ್ ವ್ಯಾಲಿ ಬಂಗಲೋ ಹೋಂ ಸ್ಟೇಗೆ ಜಿಲ್ಲಾ ಅಪರಾಧ ಪತ್ತೆದಳ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಮತ್ತು ಪಂಚಾಯಿತಿ ಅಧಿಕಾರಿಗಳ ವತಿಯಿಂದ ಬೀಗ ಜಡಿಯಲಾಗಿತ್ತು. ಹೋಂ ಸ್ಟೇಯಲ್ಲಿ ಲಾಕ್‍ಡೌನ್ ನಿರ್ಬಂಧವನ್ನು ಮೀರಿ ಮಾಲೀಕರಾದ ವಿನೋದ್ ಚಿಣ್ಣಪ್ಪ ಅವರು ತಮಗೆ ಬೇಕಾದ ಪರಿಚಯಸ್ಥರನ್ನು ಉಳಿಸಿಕೊಂಡಿದ್ದರು. ಬೆಂಗಳೂರಿನಿಂದ ಬಂದ ಮೂವರು ಪ್ರವಾಸಿಗರು ಹೋಂ ಸ್ಟೇ ಮಾಲೀಕರ ತಪ್ಪು ಮಾಹಿತಿ ಮೂಲಕ ಪೊಲೀಸ ರಿಂದ ಪಾಸ್ ಪಡೆದು ಬಂದಿದ್ದರು ಎನ್ನುವ ಆರೋಪ ಹೊರಿಸಲಾಗಿತ್ತು. ಈ ಸಂಬಂಧ ಹೋಂ ಸ್ಟೇ ಮಾಲೀಕ ವಿನೋದ್ ಚಿಣ್ಣಪ್ಪ, ಬೆನಕ್ ಕುಮಾರ್, ಸಂದೀಪ್, ವಿನಯ್ ಹಾಗೂ ಇಬ್ಬರು ಮಹಿಳೆಯರ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.
ವಿನೋದ್ ಚಿಣ್ಣಪ್ಪ ಹಾಕಿ ಆಟಗಾರರೂ (ಮೊದಲ ಪುಟದಿಂದ) ಆಗಿದ್ದು, ಬೆಂಗಳೂರಿನ ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಅಧ್ಯಕ್ಷರೂ ಹಾಗೂ ಕಸ್ಟಮ್ಸ್ ಅಧಿಕಾರಿಯೂ ಆಗಿದ್ದಾರೆ. ಹೋಂ ಸ್ಟೇ ಪ್ರಕರಣದ ಬಳಿಕ ಕೆಜಿಎ ಆಡಳಿತ ಮಂಡಳಿಯಿಂದ ನೋಟೀಸ್ ಜಾರಿ ಮಾಡಲಾಗಿದ್ದು, ಅವರ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎನ್ನುವ ಕುರಿತು ವಿವರಣೆ ಕೇಳಲಾಗಿತ್ತು. ಆದರೆ ಇದೀಗ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೈಬಿಡುವ ಬಗ್ಗೆ ನಡೆಸಲಾಗಿದ್ದ ಚರ್ಚೆ ಅಂತ್ಯ ಕಂಡಿದೆ. ವಿನೋದ್ ಚಿಣ್ಣಪ್ಪ ಅವರ ವಿರುದ್ಧ ಕೇವಲ ಪ್ರಥಮ ವರ್ತಮಾನ ವರದಿ ಮಾತ್ರ ದಾಖಲಾಗಿದೆ. ಚಾರ್ಜ್‍ಶೀಟ್ ಮಾಡಿಲ್ಲದಿರುವುದರಿಂದ ಅವರ ವಿರುದ್ಧದ ಕ್ರಮವನ್ನು ಆಡಳಿತ ಮಂಡಳಿ ಕೈಬಿಟ್ಟಿರುವುದಾಗಿ ತಿಳಿದುಬಂದಿದೆ. ಆಡಳಿತ ಸಮಿತಿಯಲ್ಲಿ ಡಿಜಿಪಿ ಪ್ರವೀಣ್ ಸೂದ್ ಸೇರಿದಂತೆ ಅನೇಕ ಪ್ರಮುಖ ನಿರ್ದೇಶಕರಿದ್ದಾರೆ.