ಮಡಿಕೇರಿ, ಮೇ 16: ಕೋಳಿ ಮಾಂಸ ದರದಲ್ಲಿ ಇದೀಗ ದಿಢೀರ್ ಏರಿಕೆ ಕಂಡು ಬಂದಿದೆ. ಕೆಲವು ಸಮಯದ ಹಿಂದೆ ಲಾಕ್‍ಡೌನ್ ಪರಿಸ್ಥಿತಿಯ ನಡುವೆ ಮಾಂಸ ಮಾರಾಟ ನಿಷೇಧವಾಗಿದ್ದು, ಬಳಿಕ ಇದನ್ನು ಸಡಿಲಿಸಿದ ಸಂದರ್ಭ ಪ್ರತಿ ಕೆ.ಜಿ. ಗೆ ರೂ. 180ರಷ್ಟು ದರವಿತ್ತು. ಇದೀಗ ಧಾರಣೆ ರೂ. 220ಕ್ಕೆ ಏರಿಕೆಯಾಗಿದ್ದು ಕೆ.ಜಿ.ಗೆ ರೂ. 40 ರಷ್ಟು ಹೆಚ್ಚಾಗಿದೆ.

ಪ್ರಸ್ತುತ ಕೋಳಿಮಾಂಸಕ್ಕೆ ಬೇಡಿಕೆ ಹೆಚ್ಚಿದ್ದು, ಅಗತ್ಯಕ್ಕೆ ತಕ್ಕಂತೆ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಹಿಂದೆ ಹಕ್ಕಿಜ್ವರದ ಆತಂಕ ಎದುರಾದ ಸನ್ನಿವೇಶದಲ್ಲಿ ಕೋಳಿ ಮಾಂಸ ಕೇಳುವವರಿಲ್ಲದೆ ಕೇವಲ ರೂ. 20ಕ್ಕೆ ಒಂದು ಕೆ.ಜಿ. ಮಾಂಸ ಸಿಗುವಂತಾಗಿತ್ತು. ಹಕ್ಕಿಜ್ವರದ ಕಾರಣದಿಂದಾಗಿ ಕೋಳಿ ಸಾಕಾಣಿಕೆದಾರರು ಹೆಚ್ಚು ಕೋಳಿಗಳನ್ನು ಬೆಳೆಯಲು ಮುಂದಾಗದ ಕಾರಣ ಇದೀಗ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಜೀವದ ಕೋಳಿಗೆ ಪ್ರತಿ ಕೆ.ಜಿ.ಗೆ ರೂ. 140 ರಿಂದ 150 ದರ ಕಂಡು ಬಂದಿದೆ. ಆದರೆ, ಜಿಲ್ಲೆಯ ಹಲವೆಡೆಗಳಲ್ಲಿ ಮಾಂಸದ ದರದಲ್ಲಿ ವ್ಯತ್ಯಾಸವಿರುವ ಬಗ್ಗೆ ಹಲವರು ಪ್ರಶ್ನಿಸುತ್ತಿದ್ದಾರೆ.