ಮಡಿಕೇರಿ, ಮೇ 16: 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸ ಬಹುದಾದ ಕ್ರಮಗಳ ಬಗ್ಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಾ. 15ರಂದು ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಶಾಲಾ ತರಗತಿ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ
ಶಾಲಾ ತರಗತಿ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಡೆಸ್ಕ್‍ಗೆ ಮೂವರು ವಿದ್ಯಾರ್ಥಿಗಳಂತೆ ಕೂರಲು ಸೂಕ್ತ ಆಸನ ವ್ಯವಸ್ಥೆ ಮಾಡಬೇಕಿದೆ. ಈ ಸಂಬಂಧ ಕೊಠಡಿಗಳು ಕೊರತೆ ಕಂಡುಬಂದಲ್ಲಿ ಶಾಲೆಯಲ್ಲಿರುವ ಗ್ರಂಥಾಲಯ ಕೊಠಡಿ, ಕ್ರೀಡಾ ಕೊಠಡಿ, ಗಣಕ ಯಂತ್ರ ಕೊಠಡಿಗಳನ್ನು ಬಳಸಿಕೊಳ್ಳಬೇಕು. ಜನವಸತಿ ಪ್ರದೇಶಗಳಲ್ಲಿ ಲಭ್ಯವಿರುವಂತಹ ಸಮುದಾಯ ಭವನಗಳು / ಸರ್ಕಾರಿ ಕಟ್ಟಡಗಳು ಮತ್ತು ಮಧ್ಯಾಹ್ನದ ನಂತರ ದೊರೆಯುವಂತಹ ಅಂಗನವಾಡಿ ಕೊಠಡಿಗಳನ್ನು ಬಳಸಿ ಕೊಳ್ಳಬಹುದಾಗಿದೆ.
ರಾಜ್ಯದಲ್ಲಿ 1ರಿಂದ 5ನೇ ತರಗತಿ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಿನ ಶಾಲೆಗಳಲ್ಲಿ ಕಡಿಮೆ ಇರುತ್ತದೆ. ಇಂತಹ ಶಾಲೆಗಳಲ್ಲಿ ಪಾಳಿ ಪದ್ಧತಿಯ ಅವಶ್ಯಕತೆ ಇರುವುದಿಲ್ಲ. 1ರಿಂದ 7/8ನೇ ತರಗತಿ ಇರುವ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸಲು ಮೇಲೆ ಸೂಚಿಸಿದ ಎಲ್ಲಾ ರೀತಿಯ ಪ್ರಯತ್ನಗಳ ನಂತರವೂ ಕೊಠಡಿಗಳ ಕೊರತೆಯಾದಲ್ಲಿ ಪಾಳಿ ಪದ್ಧತಿ ಅಳವಡಿಸುವುದು.
ಶಿಕ್ಷಕರ ವ್ಯವಸ್ಥೆ
1ರಿಂದ 3ನೇ ತರಗತಿಗೆ ನಲಿಕಲಿ ಆಧಾರಿತ ಬೋಧನೆ ಇದ್ದು, ಈ ತರಗತಿಗಳಿಗೆ ತರಬೇತಿ ಪಡೆದ ಖಾಯಂ ಶಿಕ್ಷಕರ ಅವಶ್ಯಕತೆ ಇರುತ್ತದೆ.
1 ಮತ್ತು 2ನೇ ತರಗತಿಯ ನಲಿಕಲಿ ಮಕ್ಕಳನ್ನು ಒಟ್ಟಿಗೆ ಸೇರ್ಪಡೆ ಮಾಡಿ ಬೋಧಿಸಬಹುದು. 3ನೇ ತರಗತಿಯ ವಿದ್ಯಾರ್ಥಿಗಳು ಈಗಾಗಲೇ ನಲಿಕಲಿ ಬೋಧನೆಯ ಪರಿಚಯ ಇರುವುದರಿಂದ ಇವರಿಗೆ ಸ್ವ ಕಲಿಕೆಗೆ ಆದ್ಯತೆ ನೀಡಿ ಪ್ರತ್ಯೇಕ ಕೊಠಡಿಯಲ್ಲಿ ಬೋಧನಾ ಚಟುವಟಿಕೆ ಗಳನ್ನು ಅಳವಡಿಸಿಕೊಳ್ಳಬಹುದು.
1ರಿಂದ 7ನೇ ತರಗತಿಗೆ ಶಿಕ್ಷಕರ ಕೊರತೆಯಿದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬಹುದು. 1ರಿಂದ 10ನೇ ತರಗತಿಗಳು ಇರುವ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆ ಇರುತ್ತದೆ. (ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊರತುಪಡಿಸಿ) ಪ್ರಾಥಮಿಕ ಶಾಲೆಗಳಲ್ಲಿಯೂ ಇತ್ತೀಚೆಗೆ ಪದವಿಗಳನ್ನು ಪಡೆದಿರುವ ಶಿಕ್ಷಕರು ಇರುತ್ತಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ಪರಸ್ಪರ ಸಮಾಲೋಚಿಸಿಕೊಂಡು ಪ್ರೌಢಶಾಲೆ ಶಿಕ್ಷಕರು ಪ್ರಾಥಮಿಕ ಶಾಲೆಗಳ 6 ಮತ್ತು 7ನೇ ತರಗತಿಗಳಿಗೂ ಪ್ರಾಥಮಿಕ ಶಾಲೆಗಳಲ್ಲಿ ಪದವಿ ಹೊಂದಿರುವ ಶಿಕ್ಷಕರು, 8 ಮತ್ತು 9ನೇ ತರಗತಿಗಳಿಗೆ ಬೋಧಿಸುವ ಪ್ರಕ್ರಿಯೆ ಮಾಡಬಹುದಾಗಿರುತ್ತದೆ. (ಈಗಾಗಲೇ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ). ಇಲ್ಲಿ ಪಾಳಿ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಶಿಕ್ಷಕರು ಪರಸ್ಪರ ಹೊಂದಾಣಿಕೆಯ ಮೇಲೆ ಬೋಧಿಸಬಹುದಾಗಿದೆ.
ಪಾಳಿ ಪದ್ಧತಿಯಲ್ಲಿ ಶಾಲೆ ನಡೆಸುವುದು
8ರಿಂದ 10ನೇ ತರಗತಿ ಇರುವ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಕಂಡುಬಂದಲ್ಲಿ ಪಾಳಿ ಪದ್ಧತಿಯನ್ನು ಅಳವಡಿಸಬಹುದಾಗಿದೆ. 8ರಿಂದ 12ನೇ ತರಗತಿಗಳು ಇರುವ ಕಡೆ ಕೊಠಡಿ ಕೊರತೆ ಕಂಡುಬಂದಲ್ಲಿ ಕೆಳಕಂಡಂತೆ ಪಾಳಿ ಪದ್ಧತಿ ಅಳವಡಿಸಿದಲ್ಲಿ ಕೊಠಡಿ ಸಮಸ್ಯೆ ಬರಲಾರದು.
ಬಹುತೇಕ ಪಿ.ಯು. ಕಾಲೇಜುಗಳು ಪ್ರಸ್ತುತ 10ರಿಂದ 3.30ರವರೆಗೆ ನಡೆಯುತ್ತಿವೆ. ಈ ಅವಧಿಯನ್ನು ಮಾರ್ಪಡಿಸಿ ಈ ಹಿಂದೆ ನಡೆಯುತ್ತಿದ್ದ ರೀತಿಯಲ್ಲಿ ಪಿ.ಯು. ತರಗತಿಗಳನ್ನು ಕೂಡ ಪ್ರೌಢಶಾಲಾ ಕೊಠಡಿಗಳನ್ನು ಬಳಸಿಕೊಂಡು ಸಾಮಾಜಿಕ ಅಂತರದೊಂದಿಗೆ ತರಗತಿಗಳನ್ನು ನಡೆಸಬಹುದಾಗಿದೆ. ಅದೇ ರೀತಿ ಪ್ರೌಢಶಾಲೆಗಳನ್ನು ಕೂಡ ಪಿ.ಯು. ಕೊಠಡಿಗಳನ್ನು ಬಳಸಿಕೊಂಡು ಸಾಮಾಜಿಕ ಅಂತರದೊಂದಿಗೆ ಮಧ್ಯಾಹ್ನ ಪಾಳಿಯಲ್ಲಿ ತರಗತಿಗಳನ್ನು ನಡೆಸಬಹುದಾಗಿದೆ.
ತಾಲೂಕು / ಹೋಬಳಿ ಕೇಂದ್ರಗಳಲ್ಲಿ ಕೆಲವು ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದಲ್ಲಿ ಅಂತಹ ಕೊಠಡಿಗಳಿಗೆ ಪ್ರೌಢಶಾಲೆಯ ಕೆಲವು ತರಗತಿಗಳನ್ನು ಸ್ಥಳಾಂತರಿಸ ಬಹುದಾಗಿದೆ. ಒಂದು ವೇಳೆ ಸಣ್ಣ - ಪುಟ್ಟ ದುರಸ್ತಿ ಅವಶ್ಯಕತೆಯಿದ್ದಲ್ಲಿ ಮಾಡಿಸಿಕೊಳ್ಳಬಹುದು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಾಲೆಯನ್ನು ಪಾಳಿ ಪದ್ಧತಿಯಲ್ಲಿ ನಡೆಸುವ ಬಗ್ಗೆ ನಿರ್ಣಯ ಕೈಗೊಂಡಲ್ಲಿ ಈ ರೀತಿ ಸಮಯ ಹಂಚಿಕೆ ಮಾಡಿಕೊಳ್ಳ ಬಹುದಾಗಿದೆ. ಮೊದಲನೇ ಪಾಳಿ ಸಮಯ ಬೆಳಿಗ್ಗೆ 7.50ರಿಂದ ಮಧ್ಯಾಹ್ನ 12.20ರವರೆಗೆ ಹಾಗೂ ಎರಡನೇ ಪಾಳಿ ಮಧ್ಯಾಹ್ನ 12.10ರಿಂದ ಸಂಜೆ 5ರವರೆಗೆ.
1ನೇ ಪಾಳಿ : 1ರಿಂದ 5ನೇ ತರಗತಿಗಳಿಗೆ, 8ರಿಂದ 10ನೇ ತರಗತಿಗಳಿಗೆ.
2ನೇ ಪಾಳಿ : 6ರಿಂದ 7ನೇ ತರಗತಿಗಳಿಗೆ, 8ರಿಂದ 10ನೇ ತರಗತಿಗಳಿಗೆ.
(ವೇಳಾಪಟ್ಟಿಗಳು ನಾಳೆಯ ಸಂಚಿಕೆಯಲ್ಲಿ ಪ್ರಕಟವಾಗುವುದು)