ಚತುರ್ಥೋಧ್ಯಾಯ:-ಪಾರ್ವತೀದೇವಿಯು ಕುತೂಹಲದಿಂದ ಹಾಗೂ ಪ್ರೀತಿಯಿಂದ ಪತಿದೇವ ಶಂಕರನನ್ನು ಪ್ರಶ್ನಿಸುತ್ತಾಳೆ:-ಪೂಜ್ಯನಾದ ದೇವಾಧಿಪನೇ, ಯಾವ ಉಪಾಯದಿಂದ ಮಾನವರ ಪಾಪಗಳೆಲ್ಲವೂ ತತ್ಕ್ಷಣದಲ್ಲಿ ವಿನಾಶಗೊಳ್ಳುತ್ತವೆ ಎನ್ನುವದನ್ನು ನಿನ್ನಿಂದ ಕೇಳ ಬಯಸುತ್ತೇನೆ.
ಭಗವಾನ್ ಪರಮೇಶ್ವರನು ಪಾರ್ವತಿಯ ಈ ಮಾತನ್ನು ಕೇಳಿ ಗಂಭೀರವಾಣಿಯಿಂದ ಮನುಷ್ಯರಿಗೆ ಶ್ರೇಯಸ್ಕರವಾದ ವಿಷಯವನ್ನು ಅವಳಿಗೆ ಹೇಳಲಾರಂಭಿಸಿದನು:-“ಕಾವೇರ್ಯಾಃ ಪರಮಂ ತೀರ್ಥಂ ಯೋನರಸ್ಸ್ನಾತುಮಿಚ್ಛತಿ, ತಸ್ಯ ಜನ್ಮಕೃತಂ ಪಾಪಂ ಸದ್ಯ ಏವ ವಿನಶ್ಯತಿ”
ಕಾವೇರಿಯ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಲು ಬಯಸಿದ ಮಾನವರ ಜನ್ಮಜನ್ಮಾಂತರಕೃತವಾದ ಪಾಪವು ಕೂಡಲೇ ನಾಶವಾಗುತ್ತದೆ. “ಕುಂಡಿಕಾಂ ಪ್ರಾಪ್ಯ ಧರ್ಮಾತ್ಮಾ ಸ್ನಾನಂ ಚಕ್ರೇ ಯಥಾವಿಧಿ ತಸ್ಯ ಪುಣ್ಯಫಲಂ ದೇವಿ ನ ಜಾನೇಹಂ ನ ಕೇಶವಃ” ಕುಂಡಿಕೆಯ ಸನ್ನಿಧಿಗೆ ತೆರಳಿ ವಿಧಿಪ್ರಕಾರ ಸ್ನಾನ ಮಾಡುವ ಧರ್ಮಾತ್ಮನ ಪುಣ್ಯ ಫಲವು ನನಗೂ ತಿಳಿಯದು, ವಿಷ್ಣುವಿಗೂ ತಿಳಿಯದು. ತುಲಾಯಾಂ ತು ರವೌ ಪ್ರಾಪ್ತೇ ವಿಷುವೇ ಪರಮೇಶ್ವರಿ, ಸ್ನಾನಂ ಕರೋತಿ ಚೇದ್ಯಸ್ತು ಸೋಶ್ವಮೇಧ ಫಲಂ ಲಭೇತ್. ಜಾಹ್ನವೀ ಸರಿತಾಂ ಶ್ರೇಷ್ಠಾ ತುಲಾಯಾಂ ಸಂಕ್ರಮೇ ರವೌ, ಸಾನ್ನಿಧ್ಯಂ ಕುರುತೇ ತತ್ರ ಸರ್ವತೀರ್ಥಗಣೈಸ್ಸಹ, ಗಂಗಾಸ್ನಾನಾಚ್ಛತಗುಣಂ ರಾಮಸೇತೋಶ್ಚ ದರ್ಶನಂ, ಕಾರ್ತಿಕ್ಯಾಂ ಪುಷ್ಕರಸ್ನಾನಂ ಪ್ರಯಾಗೇ ಮಾಘಮಜ್ಜನಂ, ದುರ್ಲಭಂ ಭುವಿ ಮತ್ರ್ಯಾನಾಂಕಾವೇರ್ಯಾಂ ಸ್ನಾನಮಾಶ್ವಿಜೇ, ನರ್ಮದಾದರ್ಶನಂ ನೂೃಣಾಂ ರಾಮಸೇತೋಸ್ತು ದರ್ಶನಂ, ದುರ್ಲಭೋ ದ್ವಾರಕಾವಾಸಃ ಕಾವೇರ್ಯಾ ದರ್ಶನಂ ಕಲೌ, ನದ್ಯಸ್ತೀರ್ಥಾನಿ ದಿವ್ಯಾನಿ ತುಲಾಯಾಂ ಸಂಕ್ರಮೇ ರವೌ, ಸಾನ್ನಿಧ್ಯಂ ಕುರುತೇ ತತ್ರ ಸರ್ವದೇವಗಣೈಸ್ಸಹ-ಎಲೈ ಪರಮೇಶ್ವರಿಯೇ, ಸೂರ್ಯನು ತುಲಾರಾಶಿಯನ್ನು ಪ್ರವೇಶಿಸುವ ಸಮಯದಲ್ಲಿ ಕುಂಡಿಕಾ ಸ್ನಾನವನ್ನು ಮಾಡುವದರಿಂದ ಅಶ್ವಮೇಧ ಯಾಗದ ಫಲವು ಲಭಿಸುತ್ತದೆ. ಸೂರ್ಯನು ತುಲಾ ರಾಶಿಯಲ್ಲಿ ಪ್ರವೇಶಿಸಿದಾಗ ನದೀಶ್ರೇಷ್ಠಳಾದ ಗಂಗೆಯು ಸರ್ವ ತೀರ್ಥಗಳೊಡನೆ ಕುಂಡಿಕೆಯಲ್ಲಿ ಸನ್ನಿಹಿತಳಾಗುತ್ತಾಳೆ. ಗಂಗಾಸ್ನಾನಕ್ಕಿಂತ ರಾಮಸೇತುವಿನ ದರ್ಶನವು ನೂರ್ಮಡಿ ಉತ್ತಮವು, ಅದಕ್ಕಿಂತ ನೂರ್ಮಡಿ ಕಾವೇರೀ ಜಲದಲ್ಲಿ ಸ್ನಾನವು ಪುಣ್ಯಕರವು. ಕಾರ್ತಿಕ ಮಾಸದಲ್ಲಿ ಪುಷ್ಕರ ಸ್ನಾನವು, ಮಾಘ ಮಾಸದಲ್ಲಿ ಪ್ರಯಾಗ ಸ್ನಾನವೂ, ಆಶ್ವಯುಜ ಮಾಸದಲ್ಲಿ ಕಾವೇರೀ ಸ್ನಾನವೂ ಭೂಮಿಯಲ್ಲಿ ಮಾನವನಿಗೆ ದುರ್ಲಭವಾಗಿರು ವದು. ಕಲಿಯುಗದಲ್ಲಿ ನರ್ಮದಾ ದರ್ಶನವೂ, ರಾಮಸೇತುವಿನ ದರ್ಶನವೂ, ದ್ವಾರಕೆಯಲ್ಲಿ ವಾಸವೂ, ಕಾವೇರಿಯ ದರ್ಶನವೂ ಮಾನವರಿಗೆ ದುರ್ಲಭವಾಗಿರುವದು. ಸೂರ್ಯನು ತುಲಾರಾಶಿ ಯನ್ನು ಪ್ರವೇಶಿಸುವಾಗ ಸಮಸ್ತ ದೇವವೃಂದದೊಡನೆ ನದಿಗಳೂ, ದಿವ್ಯ ತೀರ್ಥಗಳೂ ಬಂದು ಸೇರುವವು.
ಕಾವೇರಿಯ ಎರಡು ದಂಡೆಗಳಲ್ಲಿ ಸಾವಿರಾರು ಶಿವಕ್ಷೇತ್ರ ಗಳಿವೆಯೆಂದು ಹೇಳಲ್ಪಟ್ಟಿವೆ. ಲೋಕೋಪಕಾರಿಣಿಯಾದ ಕಾವೇರಿಯ ಇಕ್ಕೆಡೆಗಳಲ್ಲಿ ಲೆಕ್ಕವಿಲ್ಲದಷ್ಟು ಶಿವಲಿಂಗಗಳೂ, ತೀರ್ಥಗಳೂ, ಆಶ್ರಮ ಗಳೂ ಇವೆ. ಭೂಮಿಯಲ್ಲಿ ಕಾವೇರಿಯ ಜನ್ಮಸ್ಥಳವಾದ ಬ್ರಹ್ಮಕುಂಡವು ಅತ್ಯಂತ ಪವಿತ್ರವಾದ ತೀರ್ಥವಾಗಿದೆ. ಅದೇ ಎಲ್ಲ ಪುಣ್ಯಗಳನ್ನೂ ನೀಡುತ್ತದೆ.
ಪಂಚಮೋಧ್ಯಾಯ:- ಪಾರ್ವತಿಯು ನುಡಿದಳು:- ಎಲೈ ಪ್ರಭುವೇ, ಕಾವೇರಿಯ ಮಾಹಾತ್ಮ್ಯವು ಸಕಲೈಶ್ವರ್ಯಗಳನ್ನು ಕೊಡುವಂತ್ತದ್ದಾಗಿದೆ. ಇದನ್ನು ಎಷ್ಟು ಕೇಳಿದರೂ ತೃಪ್ತಿಯೇ ಆಗಲೊಲ್ಲದು. ಇನ್ನೂ ಕೇಳ ಬೇಕೆನಿಸುತಿದ್ದು ಪ್ರ್ರಿಯನೇ ಈ ಮಾಹಾತ್ಮೈಯನ್ನು ಮುಂದುವರಿಸು. ಎಲೈ ಪರಮೇಶ್ವರನೇ, ಕಾವೇರಿ ಹರಿಯುತ್ತಿರುವ ಬೇರೆ ಬೇರೆ ಸ್ಥಳಗಳಲ್ಲಿ ಸ್ನಾನ ಮಾಡಿ ದವರಿಗೆ ಯಾವ್ಯಾವ ಫಲವು ಪ್ರಾಪ್ತವಾಗಿರು ವದು ? ಎಲೈ ಅರ್ಧೇಂದು ಶೇಖರನೇ, ಆಯಾ ತೀರ್ಥಗಳ ಹೆಸರು ಗಳನ್ನೂ ಕೇಳಲು ಇಚ್ಛಿಸುತ್ತೇನೆ.
ಈಶ್ವರನು ಈ ಬಗ್ಗೆ ವಿವರವಾಗಿ ಹೇಳು ತ್ತಾನೆ:- ಎಲೈ ಪಾರ್ವತಿಯೇ, ದ್ವಾರಕೆ ಯಲ್ಲಿ ಒಮ್ಮೆ ವಿಶ್ರಾಂತಿ ಸಮಯದಲ್ಲಿ ರುಕ್ಮಿಣೀದೇವಿಯು ಕೂಡ ಶ್ರೀ ಕೃಷ್ಣನಲ್ಲಿಯೂ ಇಂತಹುದೇ ಪ್ರಶ್ನೆ ಮಾಡಿದ್ದಳು. ರುಕ್ಮಿಣಿ ಕೇಳಿದಳು:-ಶ್ರೀ ಕೃಷ್ಣನೇ,ಕಲಿಯುಗದಲ್ಲಿ ಹೆಚ್ಚಾಗಿ ಬುದ್ಧಿ ಹೀನರಿಗೂ, ಅದೃಷ್ಟ ಹೀನರಿಗೂ ಕೂಡ ಸುಖವನ್ನೂ, ಪುಣ್ಯವನ್ನೂ ನೀಡುವ ತೀರ್ಥಮಾಹಾತ್ಮೈಯನ್ನು ಕೇಳಲು ಅಪೇಕ್ಷಿಸುವೆನು. ಶ್ರೀ ಕೃಷ್ಣನು ಹೇಳುತ್ತಾನೆ:- ಶೃಣು ದೇವಿ ಪುರಾಣಜ್ಞೇ ತೀರ್ಥಂ ತ್ರೈಲೋಕ್ಯವಿಶ್ರುತಂ ಕಾವೇರ್ಯಾಸ್ಸರಿತೋತ್ಪತ್ತಿಸ್ಥಾನಮಾಸಾಗರಂ ಶುಭೇ, ಕ್ಷೀರೋದಮಥನೋದ್ಭೂತಂ ಅಮೃತಂ ಯತ್ಸುರಾಸುರೈಃ. ತದ್ಧøತಂ ಸರ್ವಮಸುರೈರ್ನಿರಾಶಾಶ್ಚ ಸುರದ್ವಿಷಃ. ಮದಂಶಾಶ್ಚ ತ್ವದಂಶ್ಚಾಶ್ಚ ಸ್ತ್ರಿಯೌ ಜಾತೇ ಉಭೇ ಶುಭೇ. ಮದಂಶಜಾ ಮಹಾಮೋಹಾ ಲೋಪಾಮುದ್ರಾ ತ್ವದಂಶಜಾ. ಶುಕ್ರಶಿಷ್ಯಾನ್ಮೋಹಯಿತ್ವಾ ಮಹಾಮೋಹಾಮೃತಂ ದದೌ. ವೈರಾಜಾಯಾಶು ದತ್ವಾ ಸಾ ಪ್ರಯಯೌ ಸಹ್ಯ ಪರ್ವತಂ. ಶ್ರೀ ಸಹ್ಯಾಮಲಕಗ್ರಾಮೇ ದೇವದೇವೇಶನಾಮಕಃ. ವಾಯವ್ಯಾಂ ದಿಶಿ ಜಂತೂನಾಂ ಹಿತಾಯಾದ್ಯಾಪಿ ತಿಷ್ಠತಿ. ಸಾ ಪುನರ್ಜನ್ಮನೀ ಖ್ಯಾತಾ ಶಿಲಾರೂಪಾ ಬೃಹತ್ತರಾ. ತಸ್ಯಾಃ ಕುಕ್ಷ್ಯಂತರೇ ಯಸ್ತು ನಿರ್ಯಾತಿ ಬಹುಸಂಕಟಾತ್. ತಸ್ಯ ಜನ್ಮಾಂತರಂ ನಾಸ್ತಿ ಸತ್ಯಂ ಸತ್ಯಂ ಮಯೋದಿತಂ.ತ್ವಾಂ ತು ತ್ವದಂಶಜಾಂ ಕನ್ಯಾಂ ಲೋಪಾಮುದ್ರಾಂ ಶುಚಿಸ್ಮಿತಾಂ. ಸರ್ವ ಲಕ್ಷಣ ಸಂಪನ್ನಾಂ ಸರ್ವಾವಯವ ಸುಂದರೀಂ. ದೃಷ್ಟ್ವಾ ದರಾವಾತ್ಮಭುವೇ ದತ್ತಪುತ್ರೀತಿ ಪುತ್ರಿಕಾಂ, ಬ್ರಹ್ಮಾ ಸಂಗೃಹ್ಯ ತಾಂ ವತ್ಸಾಂ ಸ್ವಧಾಮ ಪರಮಂ ಯಯೌ. ಪುರಾಣಜ್ಞಳಾದ ರುಕ್ಮಿಣೀದೇವಿಯೇ, ಕಾವೇರಿಯ ಉತ್ಪತ್ತಿ ಸ್ಥಾನದಿಂದ ಸಮುದ್ರದವರೆಗೆ ತ್ರಿಲೋಕವಿಖ್ಯಾತವಾದ ತೀರ್ಥದ ವಿಚಾರವನ್ನು ಕೇಳು. ದೇವಾಸುರರು ಕ್ಷೀರ ಸಮುದ್ರವನ್ನು ಮಥನ ಮಾಡುವಾಗ ಹುಟ್ಟಿದ ಅಮೃತವನ್ನು ರಾಕ್ಷಸರೇ ಅಪಹರಿಸಿದರು. ಇದನ್ನು ನೋಡಿ ದೇವತೆಗಳು ನಿರಾಶರಾದರು. ಆ ಸಮಯ ದಲ್ಲಿ ನಮ್ಮಿಬ್ಬರ (ಮಹಾ ವಿಷ್ಣು-ಮಹಾಲಕ್ಷ್ಮಿ) ಅಂಶದಿಂದ ಇಬ್ಬರು ಸ್ತ್ರೀಯರು ಜನಿಸಿ ದರು. ನನ್ನ (ಮಹಾ ವಿಷ್ಣು) ಅಂಶದಿಂದ ಉತ್ಪನ್ನಳಾದವಳೇ ಮಹಾಮೋಹಿನಿಯು. ನಿನ್ನ (ಮಹಾಲಕ್ಷ್ಮಿ) ಅಂಶದಿಂದ ಜನ್ಮ ತಾಳಿದವಳೇ ಲೋಪಾ ಮುದ್ರೆಯು. ರಾಕ್ಷಸರನ್ನು ಮೋಹಗೊಳಿಸಿ ಮೋಹಿನಿಯು ಇಂದ್ರನಿಗೆ ಅಮೃತವನ್ನು ಕೊಟ್ಟು ಬಳಿಕ ಸಹ್ಯ ಪರ್ವತಕ್ಕೆ ಪ್ರಯಾಣ ಮಾಡಿದಳು. ಈಗಲೂ ವಾಯವ್ಯ ದಿಕ್ಕಿನಲ್ಲಿ ಶ್ರೀ ಸಹ್ಯಾಮಲಕವೆಂಬ ಗ್ರಾಮದಲ್ಲಿ ದೇವ ದೇವೇಶನೆಂಬ ಹೆಸರಿನಿಂದ ಶ್ರೀ ಹರಿಯು ಜೀವಿಗಳ ಕ್ಷೇಮಕ್ಕಾಗಿ ನೆಲೆಸಿದ್ದಾನೆ. ನನ್ನ ಅಂಶದಿಂದ ಜನಿಸಿದ ಮೋಹಿನಿಯು ಅಲ್ಲಿ ಬೃಹತ್ ಶಿಲಾ ರೂಪದಲ್ಲಿ ನೆಲೆಸಿದ್ದಾಳೆ. ಆ ಶಿಲಾರೂಪದ ಉದರ ಗುಹಾ ಭಾಗವನ್ನು ಬಹಳ ಕಷ್ಟದಿಂದ ಪ್ರವೇಶಿಸಿ ಹೊರ ಬರುವವರಿಗೆ ಪುನರ್ಜನ್ಮವಿಲ್ಲ. ನಿನ್ನ (ಮಹಾಲಕ್ಷ್ಮಿ) ಅಂಶದಿಂದ ಉತ್ಪನ್ನಳಾದ ಸರ್ವಲಕ್ಷಣಗಳಿಂದೊಪ್ಪುವ, ಸರ್ವಾವಯವ ಸುಂದರಿಯಾದ, ಮಂದಹಾಸವನ್ನು ಬೀರುವ, ಲೋಪಾಮುದ್ರೆಯೆಂಬ ಕನ್ನಿಕೆಯನ್ನು ಹರಿಯು ತನ್ನ ಪುತ್ರನಾದ ಬ್ರಹ್ಮನಿಗೆ ದತ್ತಪುತ್ರಿಯಾಗಿ ನೀಡಿದನು. ಬ್ರಹ್ಮನು ತನ್ನ ಪುತ್ರಿಯನ್ನು ಕರೆದುಕೊಂಡು ಪರಮೋತ್ಕøಷ್ಟವಾದ ಸತ್ಯಲೋಕಕ್ಕೆ ತೆರಳಿದನು. ಕಾಲ ಕ್ರಮೇಣ ಬ್ರಹ್ಮಗಿರಿಯಲ್ಲಿ ಕವೇರನ ತಪಸ್ಸಿಗೆ ಒಲಿದು ತನ್ನ ದತ್ತುಪುತ್ರಿ ಲೋಪಾಮುದ್ರೆಯನ್ನು ಕವೇರನಿಗೆ ನೀಡಿದನು. ಬಳಿಕ ಕವೇರ ಮುನಿಯು ಮಗಳನ್ನು ನೋಡಿ ಅವಳನ್ನು ಸ್ತುತಿಗೈದು ಅವಳ ಅನುಗ್ರಹದಿಂದ ಶರೀರವನ್ನು ಬಿಟ್ಟು ಬ್ರಹ್ಮಲೋಕಕ್ಕೆ ತೆರಳಿದನು. ಆ ನಂತರ ಲೋಪಾಮುದ್ರಾದೇವಿಯು ತಪಸ್ಸನ್ನಾಚರಿಸಿ, ಈಶ್ವರನನ್ನು ಪೂಜಿಸಿ ಬಹುದಿನಗಳವರೆಗೆ ಬ್ರಹ್ಮರ್ಷಿಗಳೊಡನೆ ಆ ಬ್ರಹ್ಮಗಿರಿಯಲ್ಲಿಯೇ ಇದ್ದಳು. ಅಗಸ್ತ್ಯನು ಅಲ್ಲಿಗೆ ಬಂದಾಗ ಆತನ ಕೋರಿಕೆಯಂತೆ ಆತನನ್ನು ವರಿಸಿ ಬಳಿಕ ಒಂದು ಪುಣ್ಯ ಮುಹೂರ್ತದಲ್ಲಿ ಕಾವೇರೀ ನದಿಯಾಗಿ ಹರಿದಳು. ಕಾವೇರಿಯು ನದಿಯಾಗಿ ಹರಿದಾಗ ಅಗಸ್ತ್ಯನು ಆಕೆಯನ್ನು ತನ್ನೊಂದಿಗೆ ಇರುವಂತೆ ಕೋರುತ್ತಿದ್ದಾಗ ಅಲ್ಲಿದ್ದ ಮತ್ಸ್ಯ ದೇಶ ನಿವಾಸಿಗಳಾದ ಬ್ರ್ರಾಹ್ಮಣರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆಗ ಅಗಸ್ತ್ಯನು ಆ ಬ್ರಾಹ್ಮಣರಿಗೆ ಶಾಪ ನೀಡುತ್ತ “ಇಲ್ಲಿರುವ ಬ್ರಾಹ್ಮಣಾಧಮರು ಸದಾ ಬ್ರಾಹ್ಮಣರಿಂದ ಪರಿತ್ಯಕ್ತರಾಗಲಿ, ಅದೂ ಅಲ್ಲದೆ, ಅವರ ಸಂಪತ್ತೂ ನಾಶವಾಗಲಿ” ಎಂದು ಆಕ್ರೋಶ ವ್ಯಕ್ತಪಡಿಸುತ್ತಾನೆ. ಆ ಸಂದರ್ಭ ಪಾವನೆಯಾದ ಕಾವೇರಿಯು ಬ್ರಾಹ್ಮಣರನ್ನು ಕರುಣಾ ದೃಷ್ಟಿಯಿಂದ ನೋಡಿ “ ಭೋ, ಭೋ, ವಿಪ್ರಾಶ್ಶೋಕಯುಕ್ತಾ ಮಾ ವಿಷಾದಂ ಗಮಿಷ್ಯಥ, ಐಶ್ವರ್ಯ ಮತುಲಂ ದಾಸ್ಯೇ ಯುಷ್ಮಾಕಂ ಚಿರಜೀವಿತಂ”: ಅಂದರೆ:- ಶೋಕಾಕ್ರಾಂತರಾದ ಬ್ರಾಹ್ಮಣರೇ, ಶೋಕವನ್ನು ಬಿಡಿ, ಅಪಾರವಾದ ಸಂಪತ್ತನ್ನು ನಾನು ನಿಮಗೆ ಕೊಡುವೆನು, ಅಲ್ಲದೆ, ನಿಮಗೆ ಚಿರಾಯುಷ್ಯವುಂಟಾಗಲಿ ಎಂದು ಅವರನ್ನು ಸಮಾಧಾನ ಪಡಿಸುತ್ತಾಳೆ. ಬಳಿಕ ಆಕೆ ತನ್ನ ಶರೀರವನ್ನು ಎರಡಾಗಿ ಮಾಡುತ್ತಾಳೆ, ಮೊದಲಿನ ಭಾಗದಿಂದ ಅಗಸ್ತ್ಯನಿಗೆ ಲೋಪಾಮುದ್ರ್ರೆಯಾಗಿ ಪತ್ನಿಯಾಗಿ ಉಳಿದು ಇನ್ನ್ನೊಂದು ಭಾಗದಿಂದ ಕಾವೇರಿಯೆಂಬ ಹೆಸರಿನಿಂದ ನದೀರೂಪ ತಾಳುತ್ತಾಳೆ. ಹೀಗೆ ಶ್ರೀ ಕೃಷ್ಣನು ಕಾವೇರಿಯ ಮಹಿಮಾ ವರ್ಣನೆಯನ್ನು ರುಕ್ಮಿಣಿಗೆ ಹೇಳುತ್ತಾನೆ ಎಂದು ಶಿವನು ಪಾರ್ವತಿಗೆ ವಿವರಿಸುತ್ತಾನೆ.
(ಚತುರ್ಥ ಅಧ್ಯಾಯ ಮುಗಿದಿದೆ. ಪಂಚಮ ಅಧ್ಯಾಯ ಪ್ರಾರಂಭಗೊಂಡಿದ್ದು ಇನ್ನೂ ಮುಂದುವರಿ ಯಲಿದೆ. ಕೃಪೆ; ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮ್ಯೆ ಅನುವಾದಕರು: ದಿ.ಟಿ.ಪಿ ನಾರಾಣಾಯಣಾಚಾರ್ಯರು)