ನಾಪೋಕ್ಲು, ಮೇ 15: ಬೆಂಗಳೂರಿನಿಂದ ನಾಪೋಕ್ಲುವಿಗೆ ಬಂದ ವ್ಯಕ್ತಿಯೊಬ್ಬರು ಬೇಕರಿ ವ್ಯಾಪಾರದಲ್ಲಿ ತೊಡಗಿರುವುದು ಕಂಡುಬಂದಿದೆ. ಇದರಿಂದ ಸ್ಥಳೀಯರು ಆತಂಕಗೊಂಡು ಪ್ರಶ್ನಿಸಿದಾಗ ತಾನು ಎಲ್ಲಾ ತಪಾಸಣೆಗೊಳಪಟ್ಟು ಬಂದಿರುವುದಾಗಿಯೂ 14ದಿನ ಮನೆಯಲ್ಲಿರುವಂತೆ ಯಾರೂ ನಿರ್ಬಂಧ ವಿಧಿಸಿಲ್ಲ ಎಂದು ತಿಳಿಸಿದ್ದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ನಾಪೋಕ್ಲು ಪಿಡಿಒ ಚೋಂದಕ್ಕಿ ಅವರಿಗೆ ತಿಳಿಸಲಾಯಿತು. ಪಿಡಿಒ ಪಟ್ಟಣದ ಎಲ್ಲಾ ಬೇಕರಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಹೊರಜಿಲ್ಲೆಯಿಂದ ಬಂದ ಓರ್ವರನ್ನು ಮನೆಗೆ ಕಳುಹಿಸಲಾಯಿತು. ಹೊರಜಿಲ್ಲೆಯಿಂದ ಬಂದ ಹಲವರು ಜಿಲ್ಲೆಯಲ್ಲಿ ಇರಬಹುದು ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಹಸಿರುವಲಯವಾಗಿರುವ ಕೊಡಗು ಜಿಲ್ಲೆಗೆ ಹೊರಗಿನಿಂದ ಬರುವವರನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಹಿಂದೆ ಹೊರಗಿನಿಂದ ಬಂದವರನ್ನು ಸೀಲ್‍ಮಾಡಿ ಜಿಲ್ಲೆಯ ಒಳಗೆ ಬಿಡುತ್ತಿದ್ದರು. ಈಗ ಯಾವುದೇ ಗುರುತು ಇಲ್ಲದಿರುವುದರಿಂದ ಹೊರಗೆ ಓಡಾಡುವವರನ್ನು ಗುರುತಿಸಲು ಪತ್ತೆಹಚ್ಚಲು ಕಷ್ಟಕರವಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಆಶಾಲತಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆ ಹಸಿರುವಲಯದಲ್ಲಿ ಇರುವುದು ಸಮಧಾನಕರ ವಿಷಯ. ಆದರೆ ಹೊರಜಿಲ್ಲೆಯಿಂದ ಬಂದು 14ದಿನ ಮನೆಯಲ್ಲಿ ಇರಬೇಕಾದವರು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿರುವುದು ಆತಂಕ ಮೂಡಿಸಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಹೇಳುತ್ತಾರೆ.

-ದುಗ್ಗಳ