ಮಡಿಕೇರಿ, ಮೇ 15: ಸೋಮವಾರಪೇಟೆ ತಾಲೂಕು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದ ಬಾಲಕ ದಿಲನ್ ಮನೆಗೆ ಬೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಮತ್ತು ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಂಡೇರಂಡ ಭವ್ಯಾ, ಸಿ.ಕೆ. ಬೋಪಣ್ಣ, ಬಾನಂಡ ಪ್ರಥ್ಯು ಸುಮಾರು 2 ಕಿ.ಮೀ. ಕಾಲ್ನಡಿಗೆಯಲ್ಲಿ ಸ್ಥಳಕ್ಕೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕೂಡಲೇ ದೂರವಾಣಿಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಆನಂದ್ ಅವರೊಂದಿಗೆ ಸಮಾಲೋಚನೆ ನಡೆಸಿ ಬಾಲಕನ ಆರೋಗ್ಯದ ಬಗ್ಗೆ ಚರ್ಚಿಸಿದರು. ಇದರೊಂದಿಗೆ ಮೈಸೂರು ಮತ್ತು ಮಂಗಳೂರಿನ ಖಾಸಗಿ ಕೀಲು ಮತ್ತು ಮೂಳೆ ರೋಗ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬಾಲಕನ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು. ಬಾಲಕನೊಂದಿಗೆ ಅವರ ಅಜ್ಜ-ಅಜ್ಜಿ ಮಾತ್ರ ಇದ್ದು, ತಂದೆ ಮನೆಯಲ್ಲಿ ಇರಲಿಲ್ಲ. ತಂದೆಯೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು. ಈ ಸಂದರ್ಭ ಡಾ. ಬಿ.ಸಿ. ನವೀನ್ಕುಮಾರ್ ಇದ್ದರು.
ಬಾಲಕನ ಸಮಸ್ಯೆ ಬಗ್ಗೆ ತಾ. 15 ರಂದು ‘ಶಕ್ತಿ’ಯಲ್ಲಿ ವಿಶೇಷ ಮಾನವೀಯ ವರದಿ ಮೂಲಕ ಗಮನ ಸೆಳೆಯಲಾಗಿತ್ತು. ವರದಿಗೆ ಸ್ಪಂದಿಸಿದ ಜನಪ್ರತಿನಿಧಿಗಳು ಬೇಟಿ ನೀಡಿದ್ದಾರೆ.